ಸುದ್ದಿಗಳು

ಕುತುಬ್ ಮಿನಾರ್‌ ಸ್ವತ್ತು ತನ್ನದೆಂದ ವ್ಯಕ್ತಿ: ಸ್ಮಾರಕದಲ್ಲಿ ಪೂಜೆ ಕೋರಿದ್ದ ಅರ್ಜಿಯ ತೀರ್ಪು ಮುಂದೂಡಿದ ನ್ಯಾಯಾಲಯ

ಕುಂವರ್ ಮಹೇಂದ್ರ ಧ್ವಜ್ ಪ್ರಸಾದ್ ಸಿಂಗ್ ಅವರ ಪರವಾಗಿ ವಾದ ಮಂಡಿಸಿದ ವಕೀಲ ಎಂ ಎಲ್ ಶರ್ಮಾ ಅವರು, ಕುತುಬ್ ಮಿನಾರ್‌ನ ಆಸ್ತಿಗೆ ಸಿಂಗ್ ಅವರು ನಿಜವಾದ ಮಾಲೀಕರಾಗಿದ್ದು ಅದನ್ನು ಅವರಿಗೆ ನೀಡಬೇಕು ಎಂದರು.

Bar & Bench

ರಾಷ್ಟ್ರ ರಾಜಧಾನಿಯಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದಲ್ಲಿನ ಹಿಂದೂ ಮತ್ತು ಜೈನ ದೇಗುಲಗಳನ್ನು ಮರುಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ದೆಹಲಿಯ ನ್ಯಾಯಾಲಯವೊಂದು ಗುರುವಾರ ಮುಂದೂಡಿದೆ.

ಇಂದು ಪ್ರಕರಣದ ತೀರ್ಪು ಹೊರಬೀಳಬೇಕಿತ್ತು. ಆದರೆ ಮಿನಾರ್‌ಗೆ ಸಂಬಂಧಿಸಿದ ಆಸ್ತಿಯ ಮಾಲೀಕತ್ವದ ಹಕ್ಕು ಕೋರಿ ದೆಹಲಿ ನಿವಾಸಿಯೊಬ್ಬರು ಹೊಸ ಅರ್ಜಿ ಸಲ್ಲಿಸಿರುವುದನ್ನು ಗಮನಿಸಿದ ನಂತರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ದಿನೇಶ್ ಕುಮಾರ್ ತೀರ್ಪು ನೀಡುವುದನ್ನು ಮುಂದೂಡಿದರು.

ಕುಂವರ್‌ ಮಹೇಂದ್ರ ಧ್ವಜ್ ಪ್ರಸಾದ್ ಸಿಂಗ್ ಅವರ ಪರವಾಗಿ ವಾದ ಮಂಡಿಸಿದ ವಕೀಲ ಎಂ ಎಲ್ ಶರ್ಮಾ ಅವರು, ಕುತುಬ್ ಮಿನಾರ್‌ ಇರುವ ಸ್ವತ್ತಿಗೆ ಸಿಂಗ್ ಅವರು ನಿಜವಾದ ಮಾಲೀಕರಾಗಿದ್ದು ಅದನ್ನು ಅವರಿಗೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ.

ಅರ್ಜಿಗೆ ಪ್ರತ್ಯುತ್ತರ ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಹಾಗೂ ಪ್ರತಿವಾದಿಗಳಿಗೆ ನ್ಯಾಯಾಲಯ ಸೂಚಿಸಿದ್ದು ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿದೆ.

ಡಿಸೆಂಬರ್ 2021ರಲ್ಲಿ ಸಿವಿಲ್ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಜಿಲ್ಲಾ ನ್ಯಾಯಾಲಯಕ್ಕೆ ದಾವೆ ಸಲ್ಲಿಸಲಾಗಿತ್ತು. ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ 27 ಹಿಂದೂ ಮತ್ತು ಜೈನ ದೇವಾಲಯಗಳನ್ನು ಮರುಸ್ಥಾಪಿಸಲು ಕೋರಿ ಸಲ್ಲಿಸಿದ್ದ ಮೊಕದ್ದಮೆಯನ್ನು ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ನೇಹಾ ಶರ್ಮಾ ವಜಾಗೊಳಿಸಿದ್ದರು.

ಭಗವಾನ್ ವಿಷ್ಣು ಮತ್ತು ರಿಷಭ್ ದೇವ್ ದೇವತೆಗಳ ಪರವಾಗಿ ವಾದ ಮಿತ್ರ ವಕೀಲರಾದ ಹರಿ ಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿ ಮೂಲಕ ಸಲ್ಲಿಸಲಾದ ಮೊಕದ್ದಮೆಯು ಕುತುಬ್‌ ಸಂಕೀರ್ಣದೊಳಗೆ ದೇವತೆಗಳ ಪುನಾಸ್ಥಾಪನೆ, ಪೂಜೆ ಹಾಗೂ ದರ್ಶನ ಮಾಡುವ ಹಕ್ಕನ್ನು ಕೋರಿತ್ತು.

ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯಿದೆಯ ಸೆಕ್ಷನ್ 3ರ ಅಡಿಯಲ್ಲಿ ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾದ ಕುವ್ವತ್-ಉಲ್-ಇಸ್ಲಾಂ ಮಸೀದಿಯನ್ನು ದೇವಾಲಯಗಳನ್ನು ನಾಶಮಾಡಿ ನಿರ್ಮಿಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿತ್ತು. ಆದರೆ ಸಿವಿಲ್ ನ್ಯಾಯಾಲಯ "ನಮ್ಮ ವರ್ತಮಾನ ಮತ್ತು ಭವಿಷ್ಯದ ಶಾಂತಿಯನ್ನು ಕದಡಲು ಹಿಂದಿನ ತಪ್ಪುಗಳು ಆಧಾರವಾಗಬಾರದು" ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು.