Lalu Yadav, Rabri Devi, Tejashwi Yadav, Tej Pratap Yadav and Misa Bharti  facebook
ಸುದ್ದಿಗಳು

ಉದ್ಯೋಗಕ್ಕಾಗಿ ಜಮೀನು ಹಗರಣ: ಲಾಲು ಮತ್ತವರ ಕುಟುಂಬದ ವಿರುದ್ಧ ಆರೋಪ ನಿಗದಿಪಡಿಸಿದ ದೆಹಲಿ ನ್ಯಾಯಾಲಯ

ಲಾಲು ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಆರೋಪ ನಿಗದಿಪಡಿಸಲಾಗಿದ್ದರೆ ಅವರ ಕುಟುಂಬ ಸದಸ್ಯರ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ ಆರೋಪ ನಿಗದಿಯಾಗಿದೆ.

Bar & Bench

ರೈಲ್ವೆಯಲ್ಲಿ ಉದ್ಯೋಗ ನೀಡುವುದಕ್ಕಾಗಿ ಅಭ್ಯರ್ಥಿಗಳ ಜಮೀನನ್ನು ಲಂಚವಾಗಿ ಪಡೆದ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್‌, ಪತ್ನಿ ರಾಬ್ಡಿ ದೇವಿ ಮಕ್ಕಳಾದ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್, ಮಿಸಾ ಭಾರತಿ ಹಾಗೂ ಹಲವರ ವಿರುದ್ಧ ದೆಹಲಿ ನ್ಯಾಯಾಲಯ ಶುಕ್ರವಾರ ಭ್ರಷ್ಟಾಚಾರ ಮತ್ತು ಕ್ರಿಮಿನಲ್‌ ಪಿತೂರಿಗೆ ಸಂಬಂಧಿಸಿದಂತೆ ಆರೋಪ ನಿಗದಿಪಡಿಸಿದೆ.

ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಈ ಆದೇಶ ಹೊರಡಿಸಿದ್ದಾರೆ.

ಲಾಲು ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಆರೋಪ ನಿಗದಿಪಡಿಸಲಾಗಿದ್ದರೆ ಅವರ ಕುಟುಂಬ ಸದಸ್ಯರ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪ ನಿಗದಿಯಾಗಿದೆ.

ಲಾಲುಪ್ರಸಾದ್ ಅವರು 2004ರಿಂದ 2009ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ತಮ್ಮ ಕುಟುಂಬದ ಹೆಸರಿಗೆ ಭೂಮಿ ವರ್ಗಾಯಿಸಿಕೊಂಡು ರೈಲ್ವೆಯಲ್ಲಿ ಡಿ ಗ್ರೂಪ್‌ ಹುದ್ದೆಗಳಿಗೆ ನೇಮಕಾತಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆಗಿನ ರೈಲ್ವೆ ನೇಮಕಾತಿ ಭಾರತೀಯ ರೈಲ್ವೆಯ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂಬುದು ಸಿಬಿಐ ದೂರಿತ್ತು. ಆದರೆ, ಯಾದವ್‌ ಕುಟುಂಬ ಈ ಆರೋಪ ನಿರಾಕರಿಸಿತ್ತು ಇದು ರಾಜಕೀಯ ಪ್ರೇರಿತ ಎಂದಿತ್ತು.

ಈ ಮಧ್ಯೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ನೆಲೆಯಿಂದ ತನಿಖೆ ನಡೆಸುತ್ತಿದ್ದು ಅಪರಾಧದ ಗಳಿಕೆಯಾಗಿದ್ದ ₹600 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.

ಇಂದು ಪ್ರಕಟಿಸಿದ ಆದೇಶದಲ್ಲಿ ನ್ಯಾಯಾಧೀಶ ಗೋಗ್ನೆ ಅವರು ಲಾಲು ಪ್ರಸಾದ್ ಯಾದವ್ ಹಾಗೂ ಅವರ ಕುಟುಂಬ ಸದಸ್ಯರು ಅಪರಾಧಿಕ ಸಂಸ್ಥೆಯಂತೆ ಕಾರ್ಯನಿರ್ವಹಿಸಿದ್ದಾರೆ. ಭಾರೀ ಅಪರಾಧ ಸಂಚಿನಲ್ಲಿ ಭಾಗಿಯಾಗಿದ್ದರು ಎಂದರು. ಜಮೀನು ಪಡೆಯುವುದಕ್ಕಾಗಿ ಸರ್ಕಾರಿ ಉದ್ಯೋಗಗಳನ್ನು ದಾಳವಾಗಿ ಬಳಸಿದ್ದರು ಎಂದು ನ್ಯಾಯಾಲಯ ಹೇಳಿತ್ತು.

ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಲಾಲು ಅವರ ಆಪ್ತರು ನೇಮಕಾತಿಗಾಗಿ ಜಮೀನು ಪಡೆಯುವ ಪ್ರಕ್ರಿಯೆ ಸುಗಮಗೊಳಿಸಿದ್ದರು. ಲಾಲು ಮತ್ತು ಅವರ ಕುಟುಂಬ ಸದಸ್ಯರು ತಮ್ಮನ್ನು ಪ್ರಕರಣದಿಂದ ಖುಲಾಸೆಗೊಳಿಸುವಂತೆ ಕೋರಿರುವ ಅರ್ಜಿ ಸಂಪೂರ್ಣ ಅಸಂಗತವಾಗಿದೆ ಎಂದ ನ್ಯಾಯಾಲಯ ಅದನ್ನು ತಿರಸ್ಕರಿಸಿತು.

ರೈಲ್ವೆ ಸಚಿವಾಲಯವನ್ನು ಲಾಲು ಯಾದವ್ ತಮ್ಮ ವೈಯಕ್ತಿಕ ಆಸ್ತಿ ಎಂಬಂತೆ ಬಳಸಿಕೊಂಡಿದ್ದರು ಎಂದು ನ್ಯಾಯಾಲಯ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬದುಕುಳಿದಿರುವ 98 ಆರೋಪಿಗಳಲ್ಲಿ, ಲಾಲು ಯಾದವ್ ಮತ್ತು ಅವರ ಕುಟುಂಬ ಸೇರಿದಂತೆ 46 ಜನರ ವಿರುದ್ಧ ಆರೋಪ ನಿಗದಿಪಡಿಸಲಾಗಿದೆ ಎಂದ ನ್ಯಾಯಾಲಯ ಮತ್ತು 52 ಮಂದಿಯನ್ನು ಖುಲಾಸೆಗೊಳಿಸಿತು. ಸಿಬಿಐ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಡಿ.ಪಿ. ಸಿಂಗ್ ಹಾಗೂ ಕಾನೂನು ತಂಡ, ಲಾಲು ಯಾದವ್ ಪರವಾಗಿ ಹಿರಿಯ ವಕೀಲ ಮಣೀಂದರ್‌ ಸಿಂಗ್‌ ಹಾಗೂ ವಿವಿಧ ವಕೀಲರು ವಾದ ಮಂಡಿಸಿದರು.