ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅಣಕಿಸಿ ವೀಡಿಯೊ ಪ್ರಸಾರ ಮಾಡಿದ್ದಕ್ಕೆ ಸಂಬಂಧಿಸಿದಂತೆ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರಿಗೆ ದೆಹಲಿ ನ್ಯಾಯಾಲಯ ನೋಟಿಸ್ ನೀಡಿದೆ.
ರೋಹಿಣಿ ನ್ಯಾಯಾಲಯ ಸಂಕೀರ್ಣದಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ವಂದನಾ ಅವರು 2026ರ ಜನವರಿ 20ರಂದು ಈ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 20ರಂದು ನಡೆಯಲಿದೆ.
ಪೊಲೀಸರು ಕುನಾಲ್ ಕಾಮ್ರಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಶಿವಸೇನೆ ದೆಹಲಿ ಘಟಕದ ಮುಖ್ಯಸ್ಥ ಸಂದೀಪ್ ಚೌಧರಿ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಆಲಿಸಿದ ನ್ಯಾ. ವಂದನಾ ಈ ಆದೇಶ ನೀಡಿದ್ದಾರೆ.
‘ನಯಾ ಭಾರತ್’ ಎಂಬ ವ್ಯಂಗ್ಯ ವಿಡಿಯೋದಲ್ಲಿ ಕಾಮ್ರಾ ಅವರು ಶಿಂಧೆ ಅವರ ವಿರುದ್ಧ “ಗದ್ದಾರ್” (ದ್ರೋಹಿ), “ದಳಬದ್ಲು” (ಪಕ್ಷಾಂತರಿ), “ಫಡ್ನವಿಸ್ ಕಿ ಗೋದೀ” (ಫಡ್ನವೀಸ್ ತೊಡೆಯೇರಿ ಕುಳಿತಿರುವಾತ) ಮುಂತಾದ ಪದಗಳನ್ನು ಬಳಸಿ ಅವಮಾನಿಸಿದ್ದಾರೆ. ವಿವಿಧ ರಾಜಕೀಯ ಗುಂಪುಗಳ ನಡುವೆ ದ್ವೇಷ ಹುಟ್ಟಿಸಲು ಕಾರಣರಾಗಿದ್ದಾರೆ ಎಂದು ಚೌಧರಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲು ಸೂಚಿಸುವಂತೆ ಕೋರಿದ್ದರು.
ಆದರೆ 2025ರ ಸೆಪ್ಟೆಂಬರ್‌ನಲ್ಲಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಹಿಮಾಂಶು ಸೆಹ್ಲೋತ್ ಅವರು ಈ ಮನವಿಯನ್ನು ತಿರಸ್ಕರಿಸಿದ್ದರು. ವ್ಯಂಗ್ಯ ಮತ್ತು ರಾಜಕೀಯ ವಿಡಂಬನೆಯ ಮೂಲಕ ಅಭಿಪ್ರಾಯ ವ್ಯಕ್ತಪಡಿಸುವುದು ಅಪರಾಧವಾಗುವುದಿಲ್ಲ. ಬಳಸಿದ ಭಾಷೆ ಕೆಲವರಿಗೆ ಆಕ್ರಮಣಕಾರಿ ಅಥವಾ ಅಭಿರುಚಿಹೀನವೆಂದು ಅನಿಸಿದರೂ ಅದು ಸಂಜ್ಞೇಯ ಅಪರಾಧವಲ್ಲ ಎಂದು ಹೇಳಿದ್ದರು.
“ವಿಡಂಬನೆಯಿಂದ ಉಂಟಾಗುವ ತೊಂದರೆಯನ್ನು ಈ ನ್ಯಾಯಾಲಯ ನಿರ್ಲಕ್ಷಿಸುವುದಿಲ್ಲ. ಅದು ಕೆಲವೊಮ್ಮೆ ಕುಟುಕಬಹುದು, ಕೆಲವೊಮ್ಮೆ ಅಭಿರುಚಿ ಹಾಗೂ ಶಿಷ್ಟಾಚಾರದ ಎಲ್ಲೆ ಮೀರಬಹುದು. ಆದರೆ ಕೆಟ್ಟ ಭಾಷೆಗೆ ಪರಿಹಾರ ಪೊಲೀಸ್ ಠಾಣೆಯ ಬಾಗಿಲು ತಟ್ಟುವುದು ಅಲ್ಲ; ಉತ್ತಮ ಭಾಷೆ, ತೀಕ್ಷ್ಣ ಪ್ರತಿವಾದ ಮತ್ತು ಬಲವಾದ ವಾದವೇ ಸೂಕ್ತ ಪರಿಹಾರ. ಸಾರ್ವಜನಿಕ ಅಧಿಕಾರ ಹೊಂದಿರುವ ನಾಯಕರು ದಪ್ಪ ಚರ್ಮ ಬೆಳೆಸಿಕೊಳ್ಳಬೇಕು, ಏಕೆಂದರೆ ಅವರು ಹೊಗಳುಭಟರನ್ನು ಆಳುವುದಿಲ್ಲ ಬದಲಿಗೆ ಸ್ವತಂತ್ರ ನಾಗರಿಕರಿರುವ ಸಮಾಜವನ್ನು ಆಳುತ್ತಾರೆ” ಎಂದು ನ್ಯಾಯಾಧೀಶ ಸೆಹ್ಲೋತ್ ಹೇಳಿದ್ದರು. ಇದನ್ನು ಪ್ರಶ್ನಿಸಿ ಚೌಧರಿ ಅವರು ಅರ್ಜಿ ಸಲ್ಲಿಸಿದ್ದಾರೆ.
[ಆದೇಶದ ಪ್ರತಿ]