ಬೀದಿ ನಾಯಿಗಳಿಗೆ ಆಹಾರ ಕೊಡುವವರನ್ನು ಹೊಣೆ ಮಾಡುವ ಕುರಿತು ತಾನು ಆಡಿದ ಮಾತು ಗಂಭೀರವಾದುದು: ಸುಪ್ರೀಂ ಕೋರ್ಟ್

ನ್ಯಾಯಾಲಯ ವ್ಯಂಗ್ಯವಾಗಿ ಕೆಲ ಹೇಳಿಕೆ ನೀಡಿರಬಹುದು. ಆದರೆ ಹೇಳಿಕೆಗಳು ನಾಯಿಗಳಿಗೆ ಆಹಾರ ನೀಡುವವರ ಮೇಲೆ ದಾಳಿ ನಡೆಸುವುದು ಸೇರಿದಂತೆ ದುಷ್ಪರಿಣಾಮಗಳಿಗೆ ಕಾರಣವಾಗಿವೆ ಎಂದು ವಕೀಲರು ಹೇಳಿದರು.
Stray dog
Stray dog
Published on

ಬೀದಿ ನಾಯಿಗಳು ದಾಳಿ ನಡೆಸಿದರೆ ಅವುಗಳಿಗೆ ಆಹಾರ ನೀಡುವವರನ್ನು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂಬ ಮಾತು ಸೇರಿದಂತೆ ಬೀದಿ ನಾಯಿ ಹಾವಳಿ ಪ್ರಕರಣದ ವಿಚಾರಣೆ ವೇಳೆ ತಾನು ನೀಡಿದ ಹೇಳಿಕೆಗಳು ಗಂಭೀರವಾದಂತಹವು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ನ್ಯಾಯಾಲಯ ವ್ಯಂಗ್ಯವಾಗಿ ಕೆಲ ಹೇಳಿಕೆ ನೀಡಿರಬಹುದು. ಆದರೆ ಅವು ನಾಯಿಗಳಿಗೆ ಆಹಾರ ನೀಡುವವರ ಮೇಲೆ ದಾಳಿ ನಡೆಸುವುದು ಸೇರಿದಂತೆ ದುರದೃಷ್ಟಕರ ಪರಿಣಾಮಗಳಿಗೆ ಕಾರಣವಾಗಿವೆ ಎಂದು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠದ ಗಮನಕ್ಕೆ ತಂದರು. ಈ ವೇಳೆ, ಪೀಠವು ಅದು ವ್ಯಂಗ್ಯದ ಮಾತಲ್ಲ, ಗಂಭೀರವಾದ ಮಾತು ಎನ್ನುವುದನ್ನು ಸ್ಪಷ್ಟಪಡಿಸಿತು.

Also Read
ಬೀದಿ ನಾಯಿ ಹಾವಳಿ: ಅಧಿಕಾರಿಗಳ ನಿಷ್ಕ್ರಿಯತೆ ಬಗ್ಗೆ ಸುಪ್ರೀಂ ತರಾಟೆ

“ಕೆಲವೊಮ್ಮೆ ನ್ಯಾಯಾಲಯದ ಟಿಪ್ಪಣಿಗಳು ದುರದೃಷ್ಟಕರ ಪರಿಣಾಮಗಳಿಗೆ ಕಾರಣವಾಗುತ್ತವೆ. ಉದಾಹರಣೆಗೆ, ನ್ಯಾಯಮೂರ್ತಿಗಳು ನಾಯಿಗಳು ಮನುಷ್ಯರಿಗೆ ಕಚ್ಚಿದರೆ ಅವುಗಳಿಗೆ ಆಹಾರ ನೀಡುವವರನ್ನು ಹೊಣೆಗಾರರನ್ನಾಗಿಸಬೇಕು ಎಂದು ಹೇಳಿದ್ದರು. ಬಹುಶಃ ಅದು ವ್ಯಂಗ್ಯದ ಮಾತಾಗಿರಬಹುದು,” ಎಂದು ಭೂಷಣ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಥ್, “ಇಲ್ಲ, ನಾವು ಅದನ್ನು ವ್ಯಂಗ್ಯವಾಗಿ ಹೇಳಿಲ್ಲ. ತುಂಬಾ ಗಂಭೀರವಾಗಿ ಮಾತನಾಡಿದ್ದೇವೆ” ಎಂದು ಉತ್ತರಿಸಿದರು.

ಪ್ರಶಾಂತ್‌ ಭೂಷಣ್‌ ಅವರು ಮುಂದುವರೆದು ಆಹಾರ ನೀಡುವವರನ್ನು ಥಳಿಸುವಂತಹ ಘಟನೆಗಳು ನಡೆಯುತ್ತಿವೆ. ನ್ಯಾಯಾಲಯದ ಹೇಳಿಕೆ ಆಧರಿಸಿ ಥಳಿತವನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ ಎಂದರು.

ಇದಕ್ಕೆ ನ್ಯಾಯಾಲಯ, “ನಮ್ಮ ಹೇಳಿಕೆಗಳು ವಕೀಲರೊಂದಿಗೆ ನಡೆಯುವ ಮಾತುಕತೆಯ ವೇಳೆ, ಮೌಖಿಕವಾಗಿ ಮಾಡಲ್ಪಟ್ಟ ಟಿಪ್ಪಣಿಗಳು. ಅದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ,” ಎಂದು ಹೇಳಿತು.

ಭಾರತದಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸ ಸಮಾನವಾಗಿ ಜಾರಿಗೆ ಬರದೆ ಇರುವುದನ್ನು ಉಲ್ಲೇಖಿಸಿದ ವಕೀಲ ಪ್ರಶಾಂತ್‌ ಭೂಷಣ್‌, ಪಾರದರ್ಶಕ ಮತ್ತು ಹೊಣೆಗಾರಿಕೆಯಿಂದ ಕೂಡಿದ ವ್ಯವಸ್ಥೆ ಅಗತ್ಯವೆಂದು ಸಲಹೆ ನೀಡಿದರು. ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗದ ಬೀದಿ ನಾಯಗಳ ಕುರಿತು ದೂರು ನೀಡುವ ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳುವ ವ್ಯವಸ್ಥೆ ಇರಬೇಕೆಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ ಪರ ಹಾಜರಾದ ಹಿರಿಯ ವಕೀಲ ರಾಜು ರಾಮಚಂದ್ರನ್, ವಿಚಾರಣೆಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವುದರಿಂದ ವಕೀಲ ಸಮುದಾಯ ಹಾಗೂ ನ್ಯಾಯಾಂಗ ಎರಡಕ್ಕೂ ಜವಾಬ್ದಾರಿ ಇದೆ ಎಂದರು. ಇದಕ್ಕೆ ತಲೆದೂಗಿದ ನ್ಯಾಯಾಲಯ ಅದಕ್ಕಾಗಿಯೇ ಇನ್ನಷ್ಟು ಟಿಪ್ಪಣಿಗಳನ್ನು ಮಾಡುವ ವಿಚಾರದಲ್ಲಿ ಸಂಯಮ ಕಾಯ್ದುಕೊಳ್ಳಲಾಗಿದೆ ಎಂದಿತು.

ಅಲ್ಲದೆ ಮನೇಕಾ ಗಾಂಧಿ ಅವರು ನೀಡಿದ ಕೆಲ ಹೇಳಿಕೆಗಳ ಬಗ್ಗೆ ಇದೇ ವೇಳೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇಷ್ಟಾದರೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತಿಲ್ಲ ಅದೇ ಹೆಚ್ಚುಗಾರಿಕೆ ಎಂದು ನ್ಯಾಯಾಲಯ ನುಡಿಯಿತು.

ರಾಮಚಂದ್ರನ್ ಅವರು, ಬೀದಿ ನಾಯಿಗಳ ನಿಯಂತ್ರಣಕ್ಕೆ ರೇಬೀಸ್ ನಿಯಂತ್ರಣ ಯೋಜನೆಗಳು ಹಾಗೂ ಜನನ ನಿಯಂತ್ರಣ ಯೋಜನೆಗಳ ಮಹತ್ವವನ್ನು ಒತ್ತಿ ಹೇಳಿದರು. ಇಂತಹ ಯೋಜನೆಗಳಿಗೆ ಬಜೆಟ್ ಹಂಚಿಕೆ ಸಂಬಂಧ ಮನೇಕಾ ಗಾಂಧಿಯವರ ಕೊಡುಗೆಗಳೇನು ಎಂದು ನ್ಯಾಯಾಲಯ ಇದೇ ವೇಳೆ  ರಾಮಚಂದ್ರನ್‌ ಅವರನ್ನು ಪ್ರಶ್ನಿಸಿತು.

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದ (ಎನ್‌ಎಲ್‌ಎಸ್‌ಐಯು) ಸಿಎಸ್‌ವಿಆರ್‌ ಕಾರ್ಯಕ್ರಮಗಳ ಫಲಿತಾಂಶಗಳ ಬಗ್ಗೆ ವಕೀಲರೊಬ್ಬರು  ಗಮನ ಸೆಳೆದರು. "ನಾಯಿಗಳ ಸಂಖ್ಯೆ 40 ರಿಂದ 20ಕ್ಕೆ ಇಳಿದಿದೆ. ಕಳೆದ ವರ್ಷ ನಾಯಿ ಕಡಿತದ ಪ್ರಕರಣ ಶೂನ್ಯವಾಗಿತ್ತು " ಎಂದು ಅವರು ಹೇಳಿದರು.

Also Read
ಶಾಲಾ ಕಾಲೇಜು, ಹೆದ್ದಾರಿಗಳಲ್ಲಿ ಬೀದಿ ನಾಯಿ, ಬೀಡಾಡಿ ದನಗಳ ಹಾವಳಿ ತಡೆಯಲು ಸುಪ್ರೀಂ ಕೋರ್ಟ್ ನಿರ್ದೇಶನ

ಪ್ರಕರಣದ ಮುಂದಿನ ವಿಚಾರಣೆ 2026ರ ಜನವರಿ 28ರಂದು ನಡೆಯಲಿದೆ. ಆ ದಿನ ಅಮಿಕಸ್ ಕ್ಯೂರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಾದಗಳನ್ನು ಸುಪ್ರೀಂ ಕೋರ್ಟ್ ಆಲಿಸುವ ನಿರೀಕ್ಷೆಯಿದೆ.

ಶ್ವಾನ ಮನಃಶಾಸ್ತ್ರಜ್ಞ ಆಕಾಶ್ ಶುಕ್ಲಾ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ದವೆ, ವಿವಿಧ ಅರ್ಜಿದಾರರ ಪರವಾಗಿ ವಕೀಲರಾದ ರಾಹುಲ್ ಕೌಶಿಕ್,  ಎನ್ ಎಂ ಕಪಾಡಿಯಾ, ಜಸ್ದೀಪ್ ಧಿಲ್ಲೋನ್, ವಕೀಲೆಯರಾದ  ಜಾಸ್ಮಿನ್ ದಾಮ್ಕೆವಾಲಾ, ಐಶ್ವರ್ಯಾ ಸಿಂಗ್ ವಾದ ಮಂಡಿಸಿದರು.

Kannada Bar & Bench
kannada.barandbench.com