'ಗಾಂಧಿ ಗೋಡ್ಸೆ-ಏಕ್ ಯುದ್ಧ್' ಸಿನಿಮಾ ನಿರ್ಮಾಪಕ ರಾಜಕುಮಾರ್ ಸಂತೋಷಿ ವಿರುದ್ಧ ಸಹ ನಿರ್ಮಾಪಕ ಜೂಲನ್ ಪ್ರಸಾದ್ ಗುಪ್ತಾ ಅವರು ಹೂಡಿರುವ ಚೆಕ್ ಅಮಾನ್ಯ ಪ್ರಕರಣದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯ ಶನಿವಾರ ಜಾಮೀನು ಸಹಿತ ವಾರಂಟ್ ಹೊರಡಿಸಿದೆ [ಜೂಲನ್ ಪ್ರಸಾದ್ ಮತ್ತು ಸಂತೋಷಿ ಪ್ರೊಡಕ್ಷನ್ಸ್ಇನ್ನಿತರರ ನಡುವಣ ಪ್ರಕರಣ].
ಸಮನ್ಸ್ ಜಾರಿ ಮಾಡಿದ್ದರೂ ಸಂತೋಷಿ ಹಾಜರಾಗದಿರುವುದು ಉದ್ದೇಶಪೂರ್ವಕವಾಗಿ ತೋರುತ್ತಿದೆ ಎಂದು ಮ್ಯಾಜಿಸ್ಟ್ರೇಟ್ ಆಕಾಶ್ ಶರ್ಮಾ ತಿಳಿಸಿದರು.
ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಲು ಸಂತೋಷಿ ಪ್ರೊಡಕ್ಷನ್ಸ್ ಸಂಸ್ಥೆ ಮತ್ತು ಗುಪ್ತಾಅವರ ನಡುವೆ ಒಪ್ಪಂದ ಏರ್ಪಟ್ಟಿತ್ತು. ಇದರ ಆಧಾರದ ಮೇಲೆ ₹ 1 ಕೋಟಿಯ ಚೆಕ್ ಅನ್ನು ಸಂತೋಷಿ ಅವರು ಗುಪ್ತಾ ಅವರಿಗೆ ನೀಡಿದ್ದರು. ಆದರೆ ಈ ಚೆಕ್ ಅಮಾನ್ಯಗೊಂಡಿತ್ತು.
ಸಮನ್ಸ್ ಪ್ರತಿ ಜುಲೈ 2ರಂದಷ್ಟೇ ಕೈ ಸೇರಿದೆ. ಈ ಹಿನ್ನೆಲೆಯಲ್ಲಿ ಸಂತೋಷಿ ಅವರು ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು ಎಂದು ಅವರ ಪರ ವಕೀಲರು ವಾದ ಮಂಡಿಸಿದರು. ಇದಕ್ಕೆ ಗುಪ್ತಾ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು.
ಏಪ್ರಿಲ್ 14ರಂದೇ ಸಂತೋಷಿ ಅವರಿಗೆ ಸಮನ್ಸ್ ನೀಡಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ, ಸಂತೋಷಿ ಉದ್ದೇಶಪೂರ್ವಕವಾಗಿಯೇ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ತೀರ್ಮಾನಿಸಿತು. ಅಂತೆಯೇ ಸಂತೋಷಿ ವಿರುದ್ಧ ಅದು ಜಾಮೀನು ಸಹಿತ ವಾರೆಂಟ್ ಹೊರಡಿಸಿತು.
ಗಮನಾರ್ಹ ಸಂಗತಿ ಎಂದರೆ ಬೇರೊಂದು ಚೆಕ್ ಅಮಾನ್ಯ ಪ್ರಕರಣದಲ್ಲಿ ಸಂತೋಷಿ ಅವರಿಗೆ ₹ 20 ಲಕ್ಷ ದಂಡದ ಜೊತೆಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.