Rajasthan CM Gehlot, Union ministeri Shekhawat and Rouse Avenue Courts
Rajasthan CM Gehlot, Union ministeri Shekhawat and Rouse Avenue Courts  
ಸುದ್ದಿಗಳು

ಕೇಂದ್ರ ಸಚಿವ ಶೆಖಾವತ್ ಮಾನನಷ್ಟ ಮೊಕದ್ದಮೆ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಖುಲಾಸೆಗೆ ದೆಹಲಿ ನ್ಯಾಯಾಲಯ ನಕಾರ

Bar & Bench

ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ ಅವರು ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಖುಲಾಸೆಗೊಳಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ [ಗಜೇಂದ್ರ ಸಿಂಗ್ ಶೇಖಾವತ್  ಮತ್ತು ಅಶೋಕ್ ಗೆಹ್ಲೋಟ್ ನಡುವಣ ಪ್ರಕರಣ].

ಶೆಖಾವತ್ ಅವರು ಆಗಸ್ಟ್ 7 ಮತ್ತು ಆಗಸ್ಟ್ 21 ರಂದು ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದರಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಗೆಹ್ಲೋಟ್ ಕೋರಿದ್ದರು.

ಆದರೆ ದಾಖಲೆಗಳನ್ನು ಒದಗಿಸಲು ಮತ್ತು ಪರಿಶೀಲನೆ ಮಾಡಲೆಂದು ಪ್ರಕರಣವನ್ನು ಆ ದಿನಗಳಂದು ಪಟ್ಟಿ ಮಾಡಲಾಗಿತ್ತು ಎಂಬುದನ್ನು ಪರಿಗಣಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಹರ್ಜೀತ್ ಸಿಂಗ್ ಜಸ್ಪಾಲ್ ಅವರಿದ್ದ ಪೀಠ  ಅಂದು ದೂರುದಾರರ ಹಾಜರಿ ಅಗತ್ಯವಿರಲಿಲ್ಲ ಎಂದು ಹೇಳಬಹುದು ಎಂಬುದಾಗಿ ತಿಳಿಸಿತು.

ಸಂಜೀವಿನ ಹಗರಣದ ಸಂಬಂಧ ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಅವರು ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ವಿರುದ್ಧ ವ್ಯಾಪಕ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗೆಹ್ಲೋಟ್ ವಿರುದ್ಧ ಮಾನಹಾನಿ ದಾವೆಯನ್ನು ಶೆಖಾವತ್‌ ಅವರು ಹೂಡಿದ್ದರು.

ಶೆಖಾವತ್‌ ವಿರುದ್ಧ ಗೆಹ್ಲೋಟ್‌ ಆರೋಪ ಮಾಡಿದ್ದಾರೋ ಇಲ್ಲವೋ ಎಂದು ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ವರದಿ ಸಲ್ಲಿಸಿದ್ದರು. ವರದಿಯಲ್ಲಿ ಅವರು ಆರೋಪ ಮಾಡಲಾಗಿದೆ ಎಂಬ ಉತ್ತರ ಬಂದಿದ್ದ ಹಿನ್ನೆಲೆಯಲ್ಲಿ ಗೆಹ್ಲೋಟ್‌ಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿತ್ತು.

ಗೆಹ್ಲೋಟ್‌ ಅವರ ಪರವಾಗಿ ಹಿರಿಯ ವಕೀಲ ಮೋಹಿತ್ ಮಾಥುರ್ ಅವರು ವಾದ ಮಂಡಿಸಿದರು. ಶೆಖಾವತ್ ಅವರನ್ನು ಮತ್ತೊಬ್ಬ ಹಿರಿಯ ವಕೀಲ ವಿಕಾಸ್ ಪಹ್ವಾ ಪ್ರತಿನಿಧಿಸಿದ್ದರು. ದೂರುದಾರರ ಅನುಪಸ್ಥಿತಿ ಉದ್ದೇಶಪೂರ್ವಕವಾಗಿದೆ ಹಾಗೂ ಆ ಮೂಲಕ ಆರೋಪಿಯ ನೋವನ್ನು ದೀರ್ಘವಾಗಿಸಲು ಕಾರಣವಾಗಿದೆ ಎನ್ನುವ ಸಂದರ್ಭಗಳಲ್ಲಿ ನ್ಯಾಯಾಲಯವು ಕಾನೂನಿನ ಅಡಿಯಲ್ಲಿ ಒದಗಿಸಲಾದ ವಿವೇಚನೆ  ಚಲಾಯಿಸಬಹುದು. ಪ್ರಸಕ್ತ ಪ್ರಕರಣದಲ್ಲಿ ಈ ಅಂಶ ಕಂಡುಬರುತ್ತಿಲ್ಲ ಎಂದ ನ್ಯಾಯಾಲಯ ಗೆಹ್ಲೋಟ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Gajendra_Singh_Shekhawat_Vs__Ashok_Gehlot.pdf
Preview