Rabri Devi, Lalu Yadav Facebook
ಸುದ್ದಿಗಳು

ಐಆರ್‌ಸಿಟಿಸಿ ಹಗರಣ: ನಿತ್ಯ ವಿಚಾರಣೆ ಪ್ರಶ್ನಿಸಿದ್ದ ಲಾಲೂ, ರಾಬ್ಡಿ ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

18,000ಕ್ಕೂ ಹೆಚ್ಚು ಪುಟದ ದಾಖಲೆಗಳಿದ್ದು, ಆರೋಪಕ್ಕೆ ಸಂಬಂಧಿಸಿದ ಆದೇಶ ಸುಮಾರು 250 ಪುಟಗಳನ್ನು ಒಳಗೊಂಡಿದೆ ಎಂದು ಲಾಲು ಮತ್ತು ರಾಬ್ಡಿ ದೇವಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

Bar & Bench

ಐಆರ್‌ಸಿಟಿಸಿ ಹಗರಣಕ್ಕೆ ಸಂಬಂಧಿಸಿದಂತೆ ನಿತ್ಯ ವಿಚಾರಣೆ ನಡೆಸಬಾರದು ಎಂದು ಕೋರಿ  ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಹಾಗೂ ಅವರ ಪತ್ನಿ ರಾಬ್ಡಿ ದೇವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಮನವಿ ನಿರ್ವಹಣಾರ್ಹವಲ್ಲ ಪ್ರಾಯೋಗಿಕವೂ ಅಲ್ಲ ಇಲ್ಲವೇ ಸಮರ್ಥನೀಯವೂ ಅಲ್ಲ ಎಂದು ರೌಸ್‌ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಹೇಳಿದರು.

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ತ್ವರಿತವಾಗಿ ನಡೆಸಲು, ಕಲಾಪ ಮುಂದೂಡುವುದನ್ನು ತಪ್ಪಿಸಲು ಹಾಗೂ ನಿತ್ಯದ ಆಧಾರದಲ್ಲಿ ಸಾಕ್ಷ್ಯ ದಾಖಲಿಸಲು ಸಾಂವಿಧಾನಿಕ ನ್ಯಾಯಾಲಯಗಳು ವಿಚಾರಣಾ ನ್ಯಾಯಾಲಯಗಳಿಗೆ ಸೂಚಿಸಿವೆ. ಹೀಗಾಗಿ ಪ್ರತಿ ವಿಚಾರಣೆ ಮುಗಿದ ಬಳಿಕ ಒಂದು ವಾರಕ್ಕೂ ಮುನ್ನವೇ ಪ್ರಕರಣ ಪಟ್ಟಿ ಮಾಡಬಾರದು ಎಂಬ ಅರ್ಜಿದಾರರ ಮನವಿಯನ್ನು ಮನ್ನಿಸಲಾಗದು ಎಂದು ನ್ಯಾಯಾಧೀಶರು ತಿಳಿಸಿದರು.

ಲಾಲು ಪ್ರಸಾದ್‌ ಅವರು ರೈಲ್ವೆ ಸಚಿವರಾಗಿದ್ದಾಗ ರಾಂಚಿ ಮತ್ತು ಪುರಿಯಲ್ಲಿನ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮಕ್ಕೆ( ಐಆರ್‌ಸಿಟಿಸಿ) ಸೇರಿದ ಹೊಟೆಲ್‌ಗಳನ್ನು ಸುಜಾತಾ ಹೊಟೆಲ್ಸ್‌ ಎನ್ನುವ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಟೆಂಡರ್‌ ನಿಯಮವಳಿಗಳನ್ನು ಬದಲಿಸಿತ್ತು ಎಂದು ಸಿಬಿಐ ಆರೋಪಿಸಿತ್ತು.

ಗುತ್ತಿಗೆ ನೀಡಿಕೆಗೆ ಬದಲಾಗಿ ಲಾಲು ಅವರ ಪತ್ನಿ ರಾಬ್ಡಿ ದೇವಿ ಮತ್ತು ಅವರ ಪುತ್ರ ತೇಜಸ್ವಿ ಯಾದವ್‌ ಅವರಿಗೆ ಕೋಟಿಗಟ್ಟಲೆ ಬೆಲೆಬಾಳುವ ಭೂಮಿಯನ್ನು ಕಡಿಮೆ ಬೆಲೆಗೆ ವರ್ಗಾಯಿಸಿತ್ತು ಎಂದು ಸಿಬಿಐ ಆರೋಪಿಸಿತ್ತು. ಲಾಲು ಮತ್ತವರ ಕುಟುಂಬಸ್ಥರು ತನಿಖೆಯನ್ನು ಪ್ರಶ್ನಿಸಿದ್ದು, ತಮ್ಮ ವಿರುದ್ಧದ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದರು. ಪ್ರಕರಣ ರಾಜಕೀಯ ಪ್ರೇರಿತ ಎಂದು ಅವರು ವಾದಿಸಿದ್ದರು. ಪ್ರಕರಣದಲ್ಲಿ ಯಾದವ್ ಕುಟುಂಬದ ಸದಸ್ಯರಲ್ಲದೆ, 10 ಮಂದಿ ಬೇರೆ ಆರೋಪಿಗಳಿದ್ದಾರೆ.

ಕೆಲ ದಿನಗಳ ಹಿಂದೆ ಲಾಲು ಯಾದವ್ ಮತ್ತು ರಾಬ್ಡಿ ದೇವಿ ಅವರು ನಿತ್ಯದ ವಿಚಾರಣೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇವರಿಬ್ಬರ ಪರವಾಗಿ ಹಿರಿಯ ವಕೀಲ ಮಣೀಂದರ್ ಸಿಂಗ್ ವಾದ ಮಂಡಿಸಿದರು. ಸಿಬಿಐನ ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಡಿ ಪಿ ಸಿಂಗ್ ಅವರು ಮಣೀಂದರ್‌ ಮನವಿಗಳಿಗೆ ಆಕ್ಷೇಪಿಸಿದರು.

[ಆದೇಶದ ಪ್ರತಿ]

CBI_v_Lalu_Prasad_Yadav___Ors.pdf
Preview