ಉದ್ಯೋಗಕ್ಕಾಗಿ ಜಮೀನು ಹಗರಣ: ಲಾಲೂ ವಿರುದ್ಧದ ವಿಚಾರಣೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಲಾಲುಪ್ರಸಾದ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ 2004-2009ರ ಅವಧಿಯಲ್ಲಿ ತಮ್ಮ ಕುಟುಂಬದ ಹೆಸರಿಗೆ ಭೂಮಿ ವರ್ಗಾಯಿಸಿಕೊಂಡು ರೈಲ್ವೆಯಲ್ಲಿ ನೇಮಕಾತಿ ಮಾಡಿದ್ದಾರೆ ಎಂದು ಆರೋಪಿಸಲಾದ ಪ್ರಕರಣ ಇದಾಗಿದೆ.
Lalu Prasad Yadav
Lalu Prasad YadavFacebook
Published on

ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಲಾಲೂ ಪ್ರಸಾದ್ ಯಾದವ್ ವಿರುದ್ಧ ವಿಚಾರಣಾ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ.

ಸಿಬಿಐ 2022ರಲ್ಲಿ ತಮ್ಮ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಯಾದವ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಯುತ್ತಿರುವಾಗ ವಿಚಾರಣಾ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ತಡೆ ನೀಡಬೇಕೆಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದರು.

Also Read
ಉದ್ಯೋಗಕ್ಕಾಗಿ ಜಮೀನು ಹಗರಣ: ಲಾಲೂ ಪ್ರಸಾದ್ ಯಾದವ್ ಹಾಗೂ ಪುತ್ರರಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ನ್ಯಾಯಮೂರ್ತಿ ರವೀಂದರ್ ದುಡೇಜಾ ಅವರು ಮೇ 29 ರಂದು ಸಿಬಿಐಗೆ ನೋಟಿಸ್ ಜಾರಿ ಮಾಡಿದರು. ಆದರೆ ವಿಚಾರಣಾ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ತಡೆ ನೀಡಲು ಯಾವುದೇ ಬಲವಾದ ಕಾರಣಗಳು ಕಂಡುಬಂದಿಲ್ಲ ಎಂದರು.

ಲಾಲೂ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ , ತನಿಖೆ ನಡೆಸುವ ಮುನ್ನ ತಮ್ಮ ಕಕ್ಷಿದಾರರ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 17-ಎ ಅಡಿಯಲ್ಲಿ ವಿಚಾರಣೆ ನಡೆಸಲು ಸಿಬಿಐ ಕಡ್ಡಾಯ ತನಿಖಾ ಅನುಮತಿ ಪಡೆದಿಲ್ಲ. ಅಂತಹ ತನಿಖೆ ಅನೂರ್ಜಿತವಾಗುತ್ತದೆ ಎಂದು ವಾದಿಸಿದರು.

ಆದರೆ, ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ ಪಿ ಸಿಂಗ್ ಅವರು  , ಈ ನಿಬಂಧನೆ ಜಾರಿಗೆ ಬರುವ ಮೊದಲು ಮಾಡಿದ ಅಪರಾಧಗಳಿಗೆ ಸರ್ಕಾರದಿಂದ ಅನುಮತಿ ಪಡೆಯುವ ಕುರಿತು ಸೆಕ್ಷನ್ 17-ಎ ಅನ್ವಯಿಕತೆಯ ಸವಾಲು ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠದೆದುರು ಪರಿಗಣನೆಯಲ್ಲಿದೆ ಎಂದು ವಾದಿಸಿದರು.

Also Read
ಮೇವು ಹಗರಣ: ಡೊರಂಡಾ ಖಜಾನೆ ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನು ನೀಡಿದ ಜಾರ್ಖಂಡ್‌ ಹೈಕೋರ್ಟ್‌

ಆರೋಪ ನಿಗದಿ ಹಂತದಲ್ಲಿ ಲಾಲೂ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಈ ವಾದ ಮಾಡಬಹುದು ಎಂದು ಅವರು ವಾದಿಸಿದರು. ವಾದಗಳನ್ನು ಪರಿಗಣಿಸಿ, ನ್ಯಾಯಾಲಯ ವಿಚಾರಣೆಗೆ ತಡೆ ಕೋರಿ ಲಾಲೂ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಸಿಬಲ್‌ ಅವರಲ್ಲದೆ ಮತ್ತೊಬ್ಬ ಹಿರಿಯ ವಕೀಲ ಮಣೀಂದರ್‌ ಸಿಂಗ್‌ ಮತ್ತು ತಂಡ ಕೂಡ ವಾದ ಮಂಡಿಸಿತು.

ಲಾಲುಪ್ರಸಾದ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ 2004-2009ರ ಅವಧಿಯಲ್ಲಿ ತಮ್ಮ ಕುಟುಂಬದ ಹೆಸರಿಗೆ ಭೂಮಿ ವರ್ಗಾಯಿಸಿಕೊಂಡು ರೈಲ್ವೆಯಲ್ಲಿ ನೇಮಕಾತಿ ಮಾಡಿದ್ದಾರೆ ಎಂದು ಆರೋಪಿಸಲಾದ ಪ್ರಕರಣ ಇದಾಗಿದೆ.

Kannada Bar & Bench
kannada.barandbench.com