ದೆಹಲಿ ನ್ಯಾಯಾಲಯ ಸೋಮವಾರ ಕೆಂಪು ಕೋಟೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಮೀರ್ ರಶೀದ್ ಅಲಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ನೀಡಿದೆ.
ಅಲಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪಟಿಯಾಲ ಹೌಸ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶೆ ಅಂಜು ಬಜಾಜ್ ಚಂದನಾ ಅವರು ಈ ಆದೇಶ ಹೊರಡಿಸಿದರು.
ನವೆಂಬರ್ 10ರಂದು 10 ಜನರ ಸಾವಿಗೆ ಕಾರಣವಾದ ಆತ್ಮಹತ್ಯಾ ಬಾಂಬ್ ದಾಳಿ ನಡೆಸಲು ಸ್ಫೋಟಕ ತುಂಬಿದ ಕಾರನ್ನು ಚಲಾಯಿಸಿದ್ದ ಶಂಕಿತ ಡಾ. ಉಮರ್ ಉನ್ ನಬಿ ಜೊತೆ ಪಿತೂರಿ ನಡೆಸಿದ ಆರೋಪದ ಮೇಲೆ ಅಲಿಯನ್ನು ಎನ್ಐಎ ಬಂಧಿಸಿತ್ತು. ದಾಳಿಗೆ ಬಳಸಲಾದ ಹುಂಡೈ ಐ20 ಕಾರಿನ ಮಾಲೀಕ ಅಲಿ ಎಂದು ಆರೋಪಿಸಲಾಗಿದೆ.
ನವೆಂಬರ್ 16ರಂದು ಎನ್ಐಎ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಅಲಿ ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ ನಿವಾಸಿಯಾಗಿದ್ದು, ಭಾರೀ ಶೋಧ ಕಾರ್ಯಾಚರಣೆ ನಂತರ ದೆಹಲಿಯಲ್ಲಿ ಬಂಧಿತನಾಗಿದ್ದ.
"ಆಮೀರ್ [ರಶೀದ್ ಅಲಿ] ಕಾರನ್ನು ಖರೀದಿಸಲು ದೆಹಲಿಗೆ ಬಂದಿದ್ದ. ಇದನ್ನು ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಕೊಂಡೊಯ್ಯಲು ಬಳಸಲಾಯಿತು. ಐಇಡಿ ವಾಹನದ ಮೃತ ಚಾಲಕನ ಗುರುತನ್ನು ವಿಧಿವಿಜ್ಞಾನದ ಮೂಲಕ ಗುರುತಿಸಲಾಗಿದೆ. ಆತ ಪುಲ್ವಾಮಾ ಜಿಲ್ಲೆಯ ನಿವಾಸಿಯಾಗಿದ್ದು, ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಸಾಮಾನ್ಯ ವೈದ್ಯಕೀಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಉಮರ್ ಉನ್ ನಬಿ" ಎಂದು ಎನ್ಐಎ ತಿಳಿಸಿದೆ.