
ಮುಂಬೈನಲ್ಲಿ 2006ರ ಜುಲೈ 11ರಂದು ನಡೆದಿದ್ದ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾಗಿದ್ದ ಐವರು ಸೇರಿ ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿ ಈಚೆಗೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧದ ಮೇಲ್ಮನವಿಯನ್ನು ಶೀಘ್ರವಾಗಿ ಪಟ್ಟಿ ಮಾಡುವಂತೆ ಕೋರುವ ತುರ್ತು ಎಂಥದ್ದು ಎಂದು ಮಹಾರಾಷ್ಟ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿತು.
ನ್ಯಾಯಾಲಯ ತನ್ನ ದಿನದ ಕಲಾಪ ಮುಗಿಸುವ ಕೆಲವೇ ಹೊತ್ತಿನ ಮುನ್ನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠದೆದುರು ಪ್ರಕರಣ ಪ್ರಸ್ತಾಪಿಸಲಾಯಿತು.
ಆಗ ನ್ಯಾಯಾಲಯ ʼಇಷ್ಟು ಆತುರವೇಕೆ? ಎಂಟು ಮಂದಿ ಈಗಾಗಲೇ ಬಿಡುಗಡೆಯಾಗಿದ್ದಾರೆ. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಖುಲಾಸೆಗೆ ತಡೆಯಾಜ್ಞೆ ನೀಡಲಾಗುತ್ತದೆʼ ಎಂದಿತು.
ಈ ವಾರವೇ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಮೊದಲೇ ಒಪ್ಪಿದ್ದರೂ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೇಲ್ಮನವಿಯಲ್ಲಿ ವಿಚಾರಣಾ ಪ್ರಕ್ರಿಯೆಗೆ ಸಂಬಂಧಿಸಿದ ಲೋಪ ಇರುವುದನ್ನು ರಿಜಿಸ್ಟ್ರಿ ಪತ್ತೆ ಹಚ್ಚಿದೆ ಎಂದು ಸರ್ಕಾರದ ಪರ ವಕೀಲರು ವಾದಿಸಿದರು.
"ನ್ಯಾಯಪೀಠ ಮಂಗಳವಾರ ಪ್ರಕರಣ ಪಟ್ಟಿ ಮಾಡಲು ಹೇಳಿತ್ತು. ಆದರೆ ಈ ದೋಷವನ್ನು ಈಗಷ್ಟೇ ತಿಳಿಸಲಾಗಿದೆ. ಆದ್ದರಿಂದ ನೋಂದಣಿ ಪ್ರಕ್ರಿಯೆಯಿಂದಾಗಿ ಪ್ರಕರಣ ವಿಚಾರಣೆಗೆ ಬಾರದಿದ್ದರೆ ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಪ್ರಕರಣ ಪ್ರಸ್ತಾಪಿಸುತ್ತಿದ್ದೇವೆ” ಎಂದು ವಕೀಲರು ಹೇಳಿದರು.
ಆದರೆ ಇದಕ್ಕೆ ನ್ಯಾಯಾಲಯ ಆಕ್ಷೇಪಿಸಿದಾಗ ವಕೀಲರು "ಇದು ನಿಜಕ್ಕೂ ಅಪರೂಪದಲ್ಲಿ ಅಪರೂಪ ಪ್ರಕರಣ ಎಂದು ನ್ಯಾಯಾಲಯಕ್ಕೆ ನಾವು ಮನವರಿಕೆ ಮಾಡಿಕೊಡುತ್ತೇವೆ” ಎಂದರು.
ಮುಂಬೈನಲ್ಲಿ 2006ರ ಜುಲೈ 11ರಂದು ನಡೆದಿದ್ದ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಶಕದ ಹಿಂದೆ ವಿಶೇಷ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಐವರು ಆರೋಪಿಗಳು ಹಾಗೂ ಜೀವಾವಧಿ ಸಜೆ ಅನುಭವಿಸುತ್ತಿದ್ದ ಉಳಿದ ಏಳು ಮಂದಿಯನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ಕಳೆದ ಸೋಮವಾರ ಆದೇಶ ಹೊರಡಿಸಿತ್ತು.
ಸಮಂಜಸ ಅನುಮಾನದಾಚೆಗೆ ಪ್ರಕರಣ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣ ವಿಫಲವಾಗಿದೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಶ್ಯಾಮ್ ಚಂದಕ್ ಅವರಿದ್ದ ವಿಶೇಷ ಪೀಠ ತಿಳಿಸಿತ್ತು.