Gautam gambhir twitter
ಸುದ್ದಿಗಳು

ವಂಚನೆ ಆರೋಪ: ಗಂಭೀರ್ ವಿರುದ್ಧದ ಪ್ರಕರಣ ಮುಕ್ತಾಯ ಆದೇಶ ರದ್ದುಪಡಿಸಿದ ದೆಹಲಿ ನ್ಯಾಯಾಲಯ; ಇ ಡಿ ಪರಿಶೀಲನೆಗೆ ಇಂಗಿತ

ನಡೆದಿರುವ ವಂಚನೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ಅನುಸೂಚಿತ ಅಪರಾಧವಾಗಿರುವುದರಿಂದ, ಪ್ರಕರಣವನ್ನು ಇ ಡಿ ತನಿಖೆ ಮಾಡಬೇಕಾದ ಅಗತ್ಯ ಬೀಳಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

ವಂಚನೆ ಪ್ರಕರಣದಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಅವರನ್ನು ಆರೋಪ ಮುಕ್ತಗೊಳಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು ದೆಹಲಿ ನ್ಯಾಯಾಲಯ ಇತ್ತೀಚೆಗೆ ರದ್ದುಗೊಳಿಸಿದೆ.

ಹಣ ಪಡೆದು ಮನೆಗಳನ್ನು ನೀಡಲು ವಿಫಲವಾದ ಗೌತಮ್‌ ಗಂಭೀರ್‌ ನಂಟು ಹೊಂದಿರುವ ಮೂರು ರಿಯಲ್‌ ಎಸ್ಟೇಟ್‌ ಕಂಪೆನಿಗಳಾದ ರುದ್ರಾ ಬಿಲ್ಡ್‌ವೆಲ್ ರಿಯಾಲ್ಟಿ, ಎಚ್‌ಆರ್ ಇನ್‌ಫ್ರಾಸಿಟಿ ಮತ್ತು ಯುಎಂ ಆರ್ಕಿಟೆಕ್ಚರ್ಸ್ ವಿರುದ್ಧ ಮನೆ ಖರೀದಿದಾರರು ಪ್ರಕರಣ ದಾಖಲಿಸಿದ್ದರು. ಗಂಭೀರ್ ಅವರು ರುದ್ರಾದ ಹೆಚ್ಚುವರಿ ನಿರ್ದೇಶಕರಲ್ಲದೆ, ಯೋಜನೆಯ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದರು.

ಪ್ರಕರಣ ಮುಕ್ತಾಯಗೊಳಿಸುವಂತೆ ಮ್ಯಾಜಿಸ್ಟೇಟ್‌ ನ್ಯಾಯಾಲಯ ನೀಡಿದ ಆದೇಶ ಸಂಸದರಾಗಿದ್ದ ಗಂಭೀರ್‌ ಅವರ ವಿರುದ್ಧದ ಆರೋಪಗಳ ಕುರಿತು ತೀರ್ಪು ನೀಡುವಲ್ಲಿ 'ಮನಸ್ಸೊಂದರ ಅಸಮರ್ಪಕ ಅಭಿವ್ಯಕ್ತಿ'ಯಾಗಿದೆ ಎಂದು ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಹೇಳಿದರು.

ಬ್ರ್ಯಾಂಡ್ ಅಂಬಾಸಿಡರ್ ಆಗಿ ಹೂಡಿಕೆದಾರರೊಂದಿಗೆ ಯಾವುದೇ ತೆರನಾಗಿ ನೇರ ಸಂಪರ್ಕ ಹೊಂದಿದ್ದ ಗಂಭಿರ್‌ ವಿರುದ್ಧದ ಆರೋಪಗಳು ಹೆಚ್ಚಿನ ತನಿಖೆಗೆ ಅರ್ಹವಾಗಿವೆ. ರುದ್ರಾ ಬಿಲ್ಡ್‌ವೆಲ್ ರಿಯಾಲ್ಟಿಯಲ್ಲಿ ಗಂಭೀರ್‌ ಅವರ ಪಾತ್ರ ಇದೆ ಎಂದಿರುವ ಅದು ಹೂಡಿಕೆದಾರರ ಹಣ ಗಂಭೀರ್‌ ಅವರ ಪಾಲಾಗಿದೆಯೇ ಎಂದು ಕೂಡ ಪ್ರಶ್ನಿಸಿದೆ.

ರುದ್ರಾದ  ಹೆಚ್ಚುವರಿ ನಿರ್ದೇಶಕರಾಗಿದ್ದ ಅವರು ಬ್ರ್ಯಾಂಡ್‌ ಅಂಬಾಸಿಡರ್ ಅಷ್ಟೇ ಆಗಿರದೆ, ಕಂಪನಿಯೊಂದಿಗೆ ಹಣಕಾಸಿನ ವಹಿವಾಟುಗಳನ್ನು ಹೊಂದಿದ್ದಾರೆ. ಆದರೆ ಉಳಿದ ಆರೋಪಿಗಳೊಡನೆ ಗಂಭೀರ್‌ ಅವರ ಆರೋಪಗಳನ್ನು ಮ್ಯಾಜಿಸ್ಟೇಟ್‌ ನ್ಯಾಯಾಲಯದ ಆದೇಶ ಸಾಮಾನ್ಯೀಕರಿಸಿದೆ ಎಂದು ಅದು ಹೇಳಿದೆ.

ನಡೆದಿರುವ ವಂಚನೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಅನುಸೂಚಿತ ಅಪರಾಧವಾಗಿರುವುದರಿಂದ, ಪ್ರಕರಣವನ್ನು ಇ ಡಿ ತನಿಖೆ ಮಾಡಬೇಕಾದ ಅಗತ್ಯ ಬೀಳಬಹುದು ಎಂದು ನ್ಯಾಯಾಲಯ ಅಭಿಮತ ವ್ಯಕ್ತಪಡಿಸಿದೆ

ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಚಾರಣಾ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ಮೂರು ಪರಿಶೀಲನಾ ಅರ್ಜಿಗಳನ್ನು ಅದೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.