Delhi HC with Johnson & Johnson 
ಸುದ್ದಿಗಳು

ನಕಲಿ ವೈದ್ಯಕೀಯ ಉತ್ಪನ್ನ ಪ್ರಕರಣ: ಜಾನ್ಸನ್ & ಜಾನ್ಸನ್‌ಗೆ ₹3.34 ಕೋಟಿ ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಆದೇಶ

ನಕಲಿ ವೈದ್ಯಕೀಯ ಉತ್ಪನ್ನಗಳ ಚಲಾವಣೆ ಕೇವಲ ವಾಣಿಜ್ಯ ಚಿಹ್ನೆ ಉಲ್ಲಂಘನೆಯ ಪ್ರಕರಣವಾಗಿರದೆ ಜೀವಗಳೊಂದಿಗೆ ಚೆಲ್ಲಾಟವಾಡುವ ಗಂಭೀರ ಅಪರಾಧವಾಗಿದೆ ಎಂದು ನ್ಯಾಯಾಲಯ ನುಡಿದಿದೆ.

Bar & Bench

ನಕಲಿ ವೈದ್ಯಕೀಯ ಉತ್ಪನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ರಕ್ಷಣಾ ಉತ್ಪನ್ನಗಳ ದೈತ್ಯ ಕಂಪೆನಿ ಜಾನ್ಸನ್‌ ಅಂಡ್‌ ಜಾನ್ಸನ್‌ಗೆ  ₹3.34 ಕೋಟಿ ಪರಿಹಾರ ನೀಡುವಂತೆ ಪ್ರತಿವಾದಿಗಳಿಗೆ ದೆಹಲಿ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ನಕಲಿ ವೈದ್ಯಕೀಯ ಉತ್ಪನ್ನಗಳು ವಾಣಿಜ್ಯ ಚಿಹ್ನೆ ಉಲ್ಲಂಘನೆ ಪ್ರಕರಣಗಳಿಗಷ್ಟೇ ಸಂಬಂಧಿಸಿರದೆ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತವೆ ಎಂದು ನ್ಯಾಯಮೂರ್ತಿ ಅಮಿತ್ ಬನ್ಸಲ್ ಅವರಿದ್ದ ಪೀಠ ತಿಳಿಸಿದೆ.

"ಪ್ರತಿವಾದಿಗಳು ಮಾರಾಟ ಮಾಡುವ ನಕಲಿ ವೈದ್ಯಕೀಯ ಉತ್ಪನ್ನಗಳು ಸಾರ್ವಜನಿಕ ಆರೋಗ್ಯಕ್ಕೆ ಗಮನಾರ್ಹ ಅಪಾಯ ಉಂಟುಮಾಡುತ್ತವೆ. ವೈದ್ಯಕೀಯ ಸಾಧನಗಳ ನಕಲಿ ತಯಾರಿಕೆ ಕೇವಲ ವಾಣಿಜ್ಯ ಚಿಹ್ನೆ ಉಲ್ಲಂಘನೆಯ ಪ್ರಕರಣವಲ್ಲ, ಇದು ಜನರ ಜೀವಕ್ಕೆ ಅಪಾಯವನ್ನುಂಟುಮಾಡುವ ಗಂಭೀರ ಅಪರಾಧವಾಗಿದೆ. ಪ್ರತಿವಾದಿಗಳ ನಡವಳಿಕೆ  ಸಾರ್ವಜನಿಕರನ್ನು ದಾರಿತಪ್ಪಿಸುವ, ಗ್ರಾಹಕರ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುವ ಮತ್ತು ಆರ್ಥಿಕ ಲಾಭಕ್ಕಾಗಿ ಗ್ರಾಹಕರ ನಂಬಿಕೆಯನ್ನು ಬಳಸಿಕೊಳ್ಳುವ ಉದ್ದೇಶಪೂರ್ವಕ ಪ್ರಯತ್ನವಾಗಿ ಕಂಡುಬರುತ್ತಿದೆ" ಎಂದು ತೀರ್ಪು ಹೇಳಿದೆ.

ವೈದ್ಯಕೀಯ ಸಾಧನಗಳ ನಕಲಿ ತಯಾರಿಕೆ ಕೇವಲ ವಾಣಿಜ್ಯ ಚಿಹ್ನೆ ಉಲ್ಲಂಘನೆಯ ಪ್ರಕರಣವಲ್ಲ, ಅದು ಜೀವಗಳಿಗೆ ಅಪಾಯವನ್ನುಂಟುಮಾಡುವ ಗಂಭೀರ ಅಪರಾಧವಾಗಿದೆ.
ದೆಹಲಿ ಹೈಕೋರ್ಟ್

ಜಾನ್ಸನ್‌ ಅಂಡ್‌ ಜಾನ್ಸನ್‌ ಬಗೆಗಿನ ಸದ್ಭಾವನೆ ಮತ್ತು ಅದರ ವರ್ಚಸ್ಸಿಗೂ ಪ್ರತಿವಾದಿಗಳು ಸರಿಪಡಿಸಲಾಗದಷ್ಟು ಹಾನಿ ಉಂಟುಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿತು.

ಪ್ರತಿವಾದಿಗಳು ಸರ್ಜಿಸೆಲ್‌, ಎಥಿಕಾನ್‌, ಲಿಗಾಕ್ಲಿಪ್‌ ಸೇರಿದಂತೆ ಜಾನ್ಸನ್‌ ಅಂಡ್‌ ಜಾನ್ಸನ್‌ ವಾಣಿಜ್ಯ ಚಿಹ್ನೆಗಳಾಗಿ ನೋಂದಾಯಿಸಿರುವ ಶಸ್ತ್ರಚಿಕಿತ್ಸಾ ಉತ್ಪನ್ನಗಳನ್ನು ಪ್ರತಿವಾದಿಗಳು ನಕಲಿಯಾಗಿ ತಯಾರಿಸಿ ಮಾರಾಟ ಮಾಡಿದ್ದಾರೆ ಎಂದು ಕಂಪೆನಿ ಆರೋಪಿಸಿತ್ತು.

ನಿರ್ಣಾಯಕ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಬಳಸಲಾಗುವ ಈ ನಕಲಿ ಉತ್ಪನ್ನಗಳು ಸ್ವಚ್ಛತಾ ಸಂಸ್ಕರಣೆಗೊಳಪಡದೆ, ಕಲುಷಿತ ಮತ್ತು ಅಸಮರ್ಪಕವಾಗಿ ಆಕ್ಸಿಡೀಕರಣಗೊಂಡಿದ್ದು, ರೋಗಿಗಳ ಸುರಕ್ಷತೆಗೆ ಗಮನಾರ್ಹ ಅಪಾಯಗಳನ್ನುಂಟುಮಾಡುತ್ತವೆ ಎಂದು ಕಂಡುಬಂದಿತ್ತು.

ಅಮೆರಿಕದ ಕೆಂಟುಕಿ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ನರಶಸ್ತ್ರಚಿಕಿತ್ಸಕರೊಬ್ಬರು ಮೆದುಳಿನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸರ್ಜಿಸೆಲ್ ಉತ್ಪನ್ನಗಳು ಅಸಮರ್ಪಕವಾಗಿರುವ ಬಗ್ಗೆ ವರದಿ ಮಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು. ಅರಬ್‌ ಸಂಯುಕ್ತ ಸಂಸ್ಥಾನ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಘಟಕಗಳು ಸೇರಿದಂತೆ ವಿತರಕರ ಸಂಕೀರ್ಣ ಜಾಲದ ಮೂಲಕ ದೆಹಲಿ ಮೂಲದ ಮೆಸರ್ಸ್‌ ಮೆಡ್‌ಸರ್ವ್‌ ಸಂಸ್ಥೆಯ ನಕಲಿ ಉತ್ಪನ್ನಗಳನ್ನು ಪೂರೈಸಲಾಗಿರುವುದು ಪತ್ತೆಯಾಗಿತ್ತು.   

ಈ ಹಿನ್ನೆಲೆಯಲ್ಲಿ ನ್ಯಾಯಾಲಯ ನಕಲಿ ಉತ್ಪನ್ನಗಳಿಂದ ಪ್ರತಿವಾದಿಗಳು ಗಳಿಸಿದ ಅಂದಾಜು ₹9.39 ಕೋಟಿ ಮಾರಾಟದ ಶೇಕಡಾ 25 ರಷ್ಟು ಅರ್ಥಾತ್‌  ₹2.34 ಕೋಟಿ ಪರಿಹಾರವನ್ನು ಜಾನ್ಸನ್‌ ಅಂಡ್‌ ಜಾನ್ಸನ್‌ಗೆ ನೀಡಬೇಕು ಎಂದು ಆದೇಶಿಸಿತು. ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಿರಲು ಮತ್ತು ಪ್ರತಿವಾದಿಗಳ ಅಪ್ರಾಮಾಣಿಕ ಹಾಗೂ ಮೋಸದ ಚಟುವಟಿಕೆಗೆ ಶಿಕ್ಷೆ ವಿಧಿಸುವುದಕ್ಕಾಗಿ ಅದು ಅವರಿಗೆ ₹1 ಕೋಟಿ ದಂಡ ವಿಧಿಸಿತು. ಅಲ್ಲದೆ, ಭವಿಷ್ಯದಲ್ಲಿ ಜಾನ್ಸನ್‌ ಅಂಡ್‌ ಜಾನ್ಸನ್‌ ವಾಣಿಜ್ಯ ಚಿಹ್ನೆ ಬಳಸದಂತೆ ಪ್ರತಿವಾದಿಗಳಿಗೆ ಶಾಶ್ವತ ನಿರ್ಬಂಧ ವಿಧಿಸಿತು.