ಯಮುನಾ ನದಿ ದಂಡೆ, ನದಿಪಾತ್ರ ಮತ್ತು ನದಿಗೆ ಹರಿಯುವ ಕಾಲುವೆಗಳ ಮೇಲಿನ ಎಲ್ಲಾ ಅತಿಕ್ರಮಣಗಳನ್ನು ಮತ್ತು ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್ ಈಚೆಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ಆದೇಶಿಸಿದೆ [ಶಬ್‌ನಮ್ ಬರ್ನಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]
ಯಮುನೆಯ ತೀರದಿಂದ ಅಕ್ರಮ ನಿರ್ಮಿತಿಗಳನ್ನು ತೆರವುಗೊಳಿಸಲು ದೆಹಲಿ ಮಹಾನಗರ ಪಾಲಿಕೆ (MCD), ಪೊಲೀಸ್ ಇಲಾಖೆ, ಮೆಟ್ರೋ ಮತ್ತಿತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಡಿಡಿಎ ಉಪಾಧ್ಯಕ್ಷರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.
ನ್ಯಾಯಾಲಯದ ಆದೇಶ ಅನುಪಾಲನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಸೆಪ್ಟೆಂಬರ್ 9ರಂದು ವಿಚಾರಣೆ ನಡೆಯಲಿದೆ.
ಯಮುನಾ ನದಿ ದಂಡೆಯಲ್ಲಿನ ಅಕ್ರಮ ನಿರ್ಮಾಣವನ್ನು ಕೆಡವಲು ನಿರ್ದೇಶನ ನೀಡುವಂತೆ ಕೋರಿ ಶಬ್‌ನಮ್ ಬರ್ನಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ. ಇನ್ನು ಮುಂದೆ ನದಿ ದಡ ಮತ್ತು ಜಲಾನಯನ ಪ್ರದೇಶಗಳನ್ನು ಒತ್ತುವರಿ ಮಾಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.
ನದಿಯ ಪ್ರವಾಹ ಪ್ರದೇಶ ವಲಯವು ನಿರ್ಮಾಣ ಚಟುವಟಿಕೆ ನಿಷಿದ್ದ ವಲಯವಾಗಿದ್ದು ನದಿ ಪರಿಸರದ ಬಹುಮುಖ್ಯ ಭಾಗವಾಗಿದೆ ಎಂದು ಸರ್ಕಾರದ ಅಧಿಕಾರಿಗಳ ಪರ ವಕೀಲರು ಪೀಠದ ಗಮನಕ್ಕೆ ತಂದರು. ಈ ಪ್ರದೇಶದಲ್ಲಿನ ಅತಿಕ್ರಮಣದಿಂದಾಗಿ ನೀರು ಪಕ್ಕದ ಪ್ರದೇಶಗಳಿಗೆ ನುಗ್ಗುತ್ತದೆ ಎಂಬುದನ್ನು ಅಧಿಕಾರಿಗಳು ಒಪ್ಪಿಕೊಂಡರು.
ವಾದ ಆಲಿಸಿದ ಹೈಕೋರ್ಟ್ ಯಮುನಾ ನದಿ ಮತ್ತು ಅದರ ಸಮೀಪದ ಪ್ರದೇಶಗಳಲ್ಲಿನ ಎಲ್ಲಾ ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಆದೇಶಿಸಿತು.