Delhi High Court Judgment on Marital Rape  
ಸುದ್ದಿಗಳು

ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಲು ಕೋರಿದ ಮನವಿ: ಭಿನ್ನ ತೀರ್ಪು ನೀಡಿದ ದೆಹಲಿ ಹೈಕೋರ್ಟ್

ವೈವಾಹಿಕ ಅತ್ಯಾಚಾರ ಸಂವಿಧಾನದ ಉಲ್ಲಂಘನೆ ಎಂದು ನ್ಯಾ. ರಾಜೀವ್ ಶಕ್ದರ್ ಹೇಳಿದರೆ ಐಪಿಸಿಯ 375 ಬಿ ಮತ್ತು 198-ಬಿ ಸೆಕ್ಷನ್‌ಗಳನ್ನು ನ್ಯಾ. ಸಿ ಹರಿಶಂಕರ್ ಎತ್ತಿಹಿಡಿದರು.

Bar & Bench

ವೈವಾಹಿಕ ಅತ್ಯಾಚಾರ ಪ್ರಕರಣದ ತೀರ್ಪಿನಲ್ಲಿ ಐಪಿಸಿ ಸೆಕ್ಷನ್‌ 375 ಬಿಯ ಸಿಂಧುತ್ವ ಕುರಿತಂತೆ ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠ ಬುಧವಾರ ಭಿನ್ನ ತೀರ್ಪು ನೀಡಿದೆ.

ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧರ್ ಮತ್ತು ಸಿ ಹರಿ ಶಂಕರ್ ಅವರು ತಮ್ಮ ತೀರ್ಪಿನಲ್ಲಿ ಭಿನ್ನ ನಿಲುವು ವ್ಯಕ್ತಪಡಿಸಿದರು. ವೈವಾಹಿಕ ಅತ್ಯಾಚಾರ ಸಂವಿಧಾನದ ಉಲ್ಲಂಘನೆ ಎಂದು ನ್ಯಾ. ಶಕ್ದರ್ ಹೇಳಿದರೆ ಐಪಿಸಿಯ 375 ಬಿ ಮತ್ತು 198- ಬಿ ಸೆಕ್ಷನ್‌ಗಳನ್ನು ನ್ಯಾ. ಹರಿಶಂಕರ್ ಎತ್ತಿಹಿಡಿದರು.

ಪತ್ನಿಯ ಸಮ್ಮತಿ ಇಲ್ಲದೆ ಆಕೆಯೊಂದಿಗೆ ಪತಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಾಗುವುದಿಲ್ಲ ಎಂದು ಹೇಳುವ 375 ಬಿ ಸೆಕ್ಷನ್‌ನ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ಫೆಬ್ರವರಿ 21ರಂದು ಈ ಸಂಬಂಧ ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಪ್ರಕರಣದಲ್ಲಿ ಹಿರಿಯ ನ್ಯಾಯವಾದಿಗಳಾದ ರೆಬೆಕಾ ಜಾನ್‌ ಮತ್ತು ರಾಜಶೇಖರ ರಾವ್‌ ಅವರು ಅಮಿಕಸ್‌ ಕ್ಯೂರಿಯಾಗಿ ನೇಮಕಗೊಂಡಿದ್ದರು.

ಪ್ರಕರಣ ಸಾಮಾಜಿಕ ಮತ್ತು ಕೌಟುಂಬಿಕ ಜೀವನದ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರಬಹುದಾದ್ದರಿಂದ, ರಾಜ್ಯ ಸರ್ಕಾರಗಳು, ಮತ್ತಿತರ ಭಾಗೀದಾರರೊಂದಿಗೆ ಸಮಾಲೋಚಿಸಿದ ಬಳಕವಷ್ಟೇ ಕೇಂದ್ರ ಸರ್ಕಾರ ನಿಲುವು ತಳೆಯಲಿದೆ ಎಂದು ಈ ಹಿಂದಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ತಿಳಿಸಿದ್ದರು.

ಆದರೆ ಪ್ರಕರಣ ಮುಂದೂಡಲು ನಿರಾಕರಿಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸುವ ಮೊದಲು ಇತರ ಪಕ್ಷಕಾರರ ಅಭಿಪ್ರಾಯ ಕೇಳಿತ್ತು.