Delhi High Court with Jawan poster 
ಸುದ್ದಿಗಳು

'ಜವಾನ್ʼ ಚಿತ್ರದ ಅಕ್ರಮ ಪ್ರತಿ ಮಾರಾಟ: ಕ್ರಮಕೈಗೊಳ್ಳಲು ವಾಟ್ಸಾಪ್, ಟೆಲಿಗ್ರಾಮ್‌ಗೆ ದೆಹಲಿ ಹೈಕೋರ್ಟ್ ನಿರ್ದೇಶನ

ಚಿತ್ರದ ಪ್ರತಿಗಳನ್ನು ವಾಟ್ಸಾಪ್ ಮೂಲಕ ಅತ್ಯಲ್ಪ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಿದ್ದಕ್ಕಾಗಿ ರೋಹಿತ್ ಶರ್ಮಾ ಎಂಬಾತನನ್ನು ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡು, ಆತನ ವಾಟ್ಸಾಪ್‌ ಖಾತೆಯನ್ನು ನಿಷ್ಕ್ರಿಯಗೊಳಿಸಲು ಸೂಚಿಸಿದೆ.

Bar & Bench

ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಇತ್ತೀಚಿನ ʼಜವಾನ್‌ʼ ಚಿತ್ರದ ಪೈರೇಟೆಡ್‌ ಪ್ರತಿಗಳನ್ನು ಪ್ರಸಾರ ಮಾಡುವ ಇಲ್ಲವೇ ಮಾರಾಟ ಮಾಡುವ ಎಲ್ಲಾ ವಾಟ್ಸಾಪ್ ಗುಂಪುಗಳು ಮತ್ತು ಟೆಲಿಗ್ರಾಮ್ ಚಾನೆಲ್‌ಗಳನ್ನು ನಿಷ್ಕ್ರಿಯಗೊಳಿಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಸಾಮಾಜಿಕ ಮಾಧ್ಯಮ ಕಂಪನಿಗಳಾದ ಮೆಟಾ ಮತ್ತು ಟೆಲಿಗ್ರಾಮ್‌ಗೆ ನಿರ್ದೇಶನ ನೀಡಿದೆ.

ಅಲ್ಲದೆ ಹಾಗೆ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕಾಗಿ ಈ ಖಾತೆಗಳನ್ನು ನಿರ್ವಹಿಸುವ ಫೋನ್‌ ಚಂದಾದಾರರ ಮಾಹಿತಿ ನೀಡುವಂತೆ ವಾಟ್ಸಾಪ್, ಟೆಲಿಗ್ರಾಮ್ ಸಾಮಾಜಿಕ ಮಾಧ್ಯಮಗಳಿಗೆ ಮತ್ತು ಏರ್‌ಟೆಲ್, ಐಡಿಯಾ-ವೊಡಾಫೋನ್, ರಿಲಯನ್ಸ್ ಜಿಯೋ ಹಾಗೂ ಬಿಎಸ್‌ಎನ್‌ಎಲ್‌ನಂತಹ ಮೊಬೈಲ್ ನೆಟ್‌ವರ್ಕ್ ಆಪರೇಟರ್‌ಗಳಿಗೆ ನ್ಯಾಯಾಲಯ ಸೂಚಿಸಿದೆ.

ಚಿತ್ರದ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಲ್ಲಿಸಿದ್ದ ಮನವಿಯ ಮೇರೆಗೆ ನ್ಯಾಯಮೂರ್ತಿ ಸಿ ಹರಿಶಂಕರ್ ಈ ಆದೇಶ ನೀಡಿದ್ದಾರೆ.

ಚಿತ್ರದ ಪ್ರತಿಗಳನ್ನು ವಾಟ್ಸಾಪ್ ಮೂಲಕ ಅತ್ಯಲ್ಪ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಿದ್ದಕ್ಕಾಗಿ ರೋಹಿತ್‌ ಶರ್ಮಾ ಎಂಬಾತನನ್ನು ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿತು. ಆತನ ವಾಟ್ಸಾಪ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಲು ಮತ್ತು ಅವರ ವಾಟ್ಸಾಪ್ ಗುಂಪು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪುಟಗಳನ್ನು ತೆಗೆದುಹಾಕಲು ನ್ಯಾಯಾಲಯ ಮೆಟಾಗೆ ಸೂಚಿಸಿತು. ಚಿತ್ರದ ನಿರ್ಮಾಣ ಸಂಸ್ಥೆಯಾದ ರೆಡ್‌ ಚಿಲ್ಲೀಸ್‌ ರೋಹಿತ್ ಶರ್ಮಾನ ದುಷ್ಕೃತ್ಯವನ್ನು ಪತ್ತೆ ಹಚ್ಚಿತ್ತು.

ಚಿತ್ರದ ಅಕ್ರಮ ನಕಲು ಪ್ರತಿಗಳನ್ನು ವಿತರಿಸುತ್ತಿರುವ, ಮಾರುತ್ತಿರುವ ಇತರ ವಾಟ್ಸಾಪ್ ಗುಂಪುಗಳು ಮತ್ತು ಟೆಲಿಗ್ರಾಮ್ ಚಾನೆಲ್‌ಗಳನ್ನು ಗುರುತಿಸಿ ಅಂತಹವರ ವಿರುದ್ಧವೂ ಇದೇ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ.