ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ಗೆ ನೀಡಿದ್ದ ಮಧ್ಯಂತರ ಜಾಮೀನನ್ನು 4 ವಾರ ವಿಸ್ತರಿಸಿ ದೆಹಲಿ ಹೈಕೋರ್ಟ್ ಡಿಸೆಂಬರ್ 20ರಂದು ಆದೇಶ ನೀಡಿದೆ [ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಸಿಬಿಐ ನಡುವಣ ಪ್ರಕರಣ].
ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸೆಂಗರ್ ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಹತ್ತು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ಹೈಕೋರ್ಟ್‌ನ ವಿವಿಧ ಪೀಠಗಳು ವಿಚಾರಣೆ ನಡೆಸುತ್ತಿರುವ ಎರಡೂ ಪ್ರಕರಣಗಳಲ್ಲಿ ಆತ ಜಾಮೀನು ಕೋರಿದ್ದ.
ನ್ಯಾಯಾಲಯವು ಈ ಹಿಂದೆ ಸೆಂಗರ್‌ಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ವೈದ್ಯಕೀಯ ಕಾರಣಗಳಿಗಾಗಿ ಡಿಸೆಂಬರ್ 20 ರವರೆಗೆ ಅಮಾನತುಗೊಳಿಸಿತ್ತು . ತಮಗೆ ನೀಡಿರುವ ಮಧ್ಯಂತರ ಜಾಮೀನನ್ನು 5 ತಿಂಗಳ ಕಾಲ ವಿಸ್ತರಿಸುವಂತೆ ಆತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಗರ್‌ಗೆ ನೀಡಿದ್ದ ನಾಲ್ಕು ವಾರಗಳ ಮಧ್ಯಂತರ ಜಾಮೀನನ್ನು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರ ವಿಭಾಗೀಯ ಪೀಠ ವಿಸ್ತರಿಸಿದ್ದು ಇದರಿಂದ ಆತ ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಮೂಲವ್ಯಾಧಿ ಚಿಕಿತ್ಸೆಗಳ ನಂತರ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಮಯಾವಕಾಶ ಕಲ್ಪಿಸಿದೆ.
ಜನವರಿ 10 ರಿಂದ ಜನವರಿ 15, 2025 ರ ನಡುವೆ ವೈದ್ಯಕೀಯ ಸಮಾಲೋಚನೆಗಾಗಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಗೆ ಭೇಟಿ ನೀಡಲು ನ್ಯಾಯಾಲಯ ಆತನಿಗೆ ಅನುಮತಿ ನೀಡಿದ್ದು ಜನವರಿ 20, 2025 ರಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಶರಣಾಗುವಂತೆ ಸೂಚಿಸಿದೆ. ಜೊತೆಗೆ ಪೂರ್ವಾನುಮತಿ ಇಲ್ಲದೆ ದೆಹಲಿ ತೊರೆಯುವಂತಿಲ್ಲ, ಏಮ್ಸ್ ಆಸ್ಪತ್ರೆ ಹಾಗೂ ಮನೆ ಹೊರತುಪಡಿಸಿ ಬೇರೆಡೆ ತೆರಳುವಂತಿಲ್ಲ, ಸಿಬಿಐ ಅಧಿಕಾರಿ ಸೇರಿದಂತೆ ಪೊಲೀಸರು ನಿಗಾ ವಹಿಸಬೇಕು, ತನ್ನ ಸಹಾಯಕ್ಕಾಗಿ ಒಬ್ಬ ಅಟೆಂಡರನ್ನು ಮಾತ್ರ ನೇಮಿಸಿಕೊಳ್ಳಬೇಕು ಎಂಬಂತಹ ಷರತ್ತುಗಳನ್ನು ವಿಧಿಸಿದೆ.
ಉನ್ನಾವೊ ಅತ್ಯಾಚಾರ ಸಂತ್ರಸ್ತೆಯನ್ನು ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ 20 ಜೂನ್ 2017ರಲ್ಲಿ ಅಪಹರಿಸಿ ಅತ್ಯಾಚಾರ ಮಾಡಿದ್ದ. ಅಲ್ಲದೆ ಆಕೆಯನ್ನು ₹ 60,000ಕ್ಕೆ ಮಾರಾಟ ಮಾಡಲಾಗಿತ್ತು. ಈ ಮಧ್ಯೆ ಆಕೆಗೆ ಮಾಖಿ ಪೊಲೀಸ್ ಠಾಣೆಯಲ್ಲಿ ರಕ್ಷಣೆ ದೊರೆತಿತ್ತು.
ಸಂತ್ರಸ್ತೆ ಚಲಿಸುತ್ತಿದ್ದ ಕಾರಿಗೆ, ನಂಬರ್ ಪ್ಲೇಟ್ ಇಲ್ಲದ ಲಾರಿಯೊಂದು 2018ರಲ್ಲಿ ಡಿಕ್ಕಿ ಹೊಡೆದು ಇಡೀ ಪ್ರಕರಣ ವಿವಾದದ ಸ್ವರೂಪ ಪಡೆದುಕೊಂಡಿತು. ಘಟನೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ಪರ ವಕೀಲರು ತೀವ್ರವಾಗಿ ಗಾಯಗೊಂಡರೆ ಆಕೆಯ ಇಬ್ಬರು ಚಿಕ್ಕಮ್ಮಂದಿರು ಇಹಲೋಕ ತ್ಯಜಿಸಿದರು. ಕೆಲ ದಿನಗಳ ಬಳಿಕ ವಕೀಲ ಕೂಡ ಮೃತಪಟ್ಟರು. ಘಟನೆಯ ಹಿಂದೆ ಸೆಂಗರ್ ಕೈವಾಡ ಇದೆ ಎಂದು ವಕೀಲರ ಪತ್ನಿ ದೂರಿದ್ದರು.
ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಸೆಂಗರ್‌ಗೆ 2019ರ ಡಿಸೆಂಬರ್‌ನಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಅತ್ಯಾಚಾರ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಸಜೆ ಮತ್ತು ಕಸ್ಟಡಿ ಸಾವಿನ ಪ್ರಕರಣದಲ್ಲಿ 10 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಜೈಲುಶಿಕ್ಷೆ ಅನುಭವಿಸುತ್ತಿರುವ ಸೆಂಗರ್ ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ತನ್ನ ಶಿಕ್ಷೆಯನ್ನು 20 ವಾರಗಳ ಕಾಲ ಅಮಾನತ್ತಿನಲ್ಲಿರಿಸಿ ಜಾಮೀನು ನೀಡುವಂತೆ ಕೋರಿದ್ದ.