ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ ಕಾಯಿದೆ) ಅಡಿಯಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಮಾಹಿತಿ ಒದಗಿಸುವುದಕ್ಕಾಗಿ ನಿಯಮ ರೂಪಿಸಲು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ 3 ತಿಂಗಳ ಗಡುವು ನೀಡಿದೆ [ಆದಿತ್ಯ ಚೌಹಾಣ್ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ] .
ಅಸ್ತಿತ್ವದಲ್ಲಿರುವ ಆರ್‌ಟಿಐ ನಿಯಮಗಳು ಇಮೇಲ್ ಅಥವಾ ಪೆನ್ ಡ್ರೈವ್ ರೀತಿಯ ನಿರ್ದಿಷ್ಟ ಸಾಧನಗಳಲ್ಲಿ ಮಾಹಿತಿಯನ್ನು ಪಡೆಯುವಂತೆ ತಿಳಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಮಾಹಿತಿ ಬಯಸುವವರು ಆರ್‌ಟಿಐ ಕಾಯಿದೆಯಡಿಯಲ್ಲಿನ ಹಕ್ಕುಗಳ ನಿಜವಾದ ಉದ್ದೇಶವನ್ನು ಅರಿತುಕೊಳ್ಳುವುದಕ್ಕಾಗಿ ಇನ್ನಷ್ಟು ನಿಯಮ ರೂಪಿಸುವ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿದೆ.
ಆಧುನಿಕ ಮತ್ತು ಎಲೆಕ್ಟ್ರಾನಿಕ್ ವಿಧಾನದಲ್ಲಿ ಆರ್‌ಟಿಐ ಮಾಹಿತಿಯನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಆದಿತ್ಯ ಚೌಹಾಣ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)ಸಲ್ಲಿಸಿದ್ದರು.
ಮಾಹಿತಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ನೀಡಬಹುದು ಎಂದು ಆರ್‌ಟಿಐ ಕಾಯಿದೆ ಹೇಳಿದ್ದರೂ, ಅಧಿಕಾರಿಗಳು ಇಮೇಲ್ ಅಥವಾ ಪೆನ್ ಡ್ರೈವ್ ಮೂಲಕ ವಿವರಗಳನ್ನು ಬಹಿರಂಗಪಡಿಸಲು ಹಿಂಜರಿಯುತ್ತಿದಾರೆ ಎಂದು ಅರ್ಜಿ ದೂರಿತ್ತು.
ವಾದ ಆಲಿಸಿದ ನ್ಯಾಯಾಲಯ ಮಾಹಿತಿ ಹಕ್ಕು ಕಾಯಿದೆ ಮಾಹಿತಿಯ ಹಕ್ಕನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪಡೆಯುವ ಹಕ್ಕನ್ನು ಒಳಗೊಂಡಿದೆ ಎಂದು ಹೇಳುತ್ತದೆಯಾದರೂ ಆರ್‌ಟಿಐ ನಿಯಮಗಳು ಅದಕ್ಕೆ ಅವಕಾಶ ನೀಡಿಲ್ಲ ಎಂದು ತಿಳಿಸಿ ಅಗತ್ಯವಿರುವ ನಿಯಮ ರೂಪಿಸಲು ಸರ್ಕಾರಕ್ಕೆ ಆದೇಶಿಸಿತು.