
ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ರಾಶಿ ಪತ್ತೆಯಾದ ಆರೋಪಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖಾ ಸಮಿತಿ ಸಲ್ಲಿಸಿದ್ದ ವರದಿಯ ಪ್ರತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಸುಪ್ರೀಂ ಕೋರ್ಟ್ ಈಚೆಗೆ ನಿರಾಕರಿಸಿದೆ.
ಮಹಾರಾಷ್ಟ್ರ ಮೂಲದ ವಕೀಲ ಅಮೃತ್‌ಪಾಲ್ ಸಿಂಗ್ ಖಾಲ್ಸಾ ಅವರು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ವರದಿಯ ಪ್ರತಿ ಕೋರಿದ್ದರು. ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸಲು ಶಿಫಾರಸು ಮಾಡಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಕಳುಹಿಸಿದ ಪತ್ರದ ಪ್ರತಿ ನೀಡುವಂತೆಯೂ ಅವರು ಮನವಿ ಮಾಡಿದ್ದರು.
ಈ ಕುರಿತು ಮೇ 9 ರಂದು ಸಲ್ಲಿಸಲಾದ ಆರ್‌ಟಿಐ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಹಿಮಾನಿ ಸರದ್ ಅವರು ತಿರಸ್ಕರಿಸಿದ್ದಾರೆ. ಭಾರತದ ಸುಪ್ರೀಂ ಕೋರ್ಟ್ ಮತ್ತು ಸುಭಾಷ್ ಚಂದ್ರ ಅಗರ್‌ವಾಲ್ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಮಾಹಿತಿ ಬಹಿರಂಗಪಡಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ನ್ಯಾ.ವರ್ಮಾ ಅವರ ದೆಹಲಿ ನಿವಾಸದಲ್ಲಿ ಮಾರ್ಚ್ 14ರ ಸಂಜೆ ಅಗ್ನಿ ಅವಗಢ ಸಂಭವಿಸಿತ್ತು. ಈ ವೇಳೆ ಅಗ್ನಿಶಾಮಕ ದಳ ಬೆಂಕಿ ನಂದಿಸುವಾಗ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿದೆ ಎಂಬ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ವಿಚಾರವಾಗಿ ನ್ಯಾ. ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.
ಘಟನೆಯ ತನಿಖೆಗಾಗಿ ಅಂದಿನ ಸಿಜೆಐ ಖನ್ನಾ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನೊಳಗೊಂಡ ಸಮಿತಿ ರಚಿಸಿದ್ದರು.
ಮಾರ್ಚ್ 25ರಂದು ತನಿಖೆ ಆರಂಭಿಸಿದ್ದ ಸಮಿತಿ ಮೇ4 ರಂದು ಅಂದಿನ ಸಿಜೆಐ ಖನ್ನಾ ಅವರಿಗೆ ವರದಿ ಸಲ್ಲಿಸಿತ್ತು. ನ್ಯಾ. ವರ್ಮಾ ಅವರು ರಾಜೀನಾಮೆ ನೀಡಬೇಕು ಇಲ್ಲವೇ ವಾಗ್ದಂಡನಾ ಪ್ರಕ್ರಿಯೆ ಎದುರಿಸಬೇಕು ಎಂದು ವರದಿ ಸ್ವೀಕರಿಸಿದ್ದ ನ್ಯಾ. ಖನ್ನಾ ತಿಳಿಸಿದ್ದರು. ಆದರೆ ನ್ಯಾ. ವರ್ಮಾ ಅವರು ರಾಜೀನಾಮೆ ನೀಡಲು ಒಪ್ಪದ ಹಿನ್ನೆಲೆಯಲ್ಲಿ ನ್ಯಾ. ವರ್ಮಾ ಅವರನ್ನು ವಜಾಗೊಳಿಸುವಂತೆ ತಿಳಿಸಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದಿದ್ದರು.