Delhi High Court 
ಸುದ್ದಿಗಳು

ನೌಕರರ ಭವಿಷ್ಯ ನಿಧಿಗೆ ಭಾರತದಲ್ಲಿರುವ ವಿದೇಶಿ ಉದ್ಯೋಗಿಗಳು ದೇಣಿಗೆ ನೀಡಬೇಕು: ದೆಹಲಿ ಹೈಕೋರ್ಟ್

1952ರ ಇಪಿಎಫ್ ಯೋಜನೆಯನ್ನು ವಿದೇಶಿ ಪ್ರಜೆಗಳಿಗೂ ಅನ್ವಯಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ಭಾರತದಲ್ಲಿ ಕೆಲಸ ಮಾಡುತ್ತಿರುವ ಭವಿಷ್ಯ ನಿಧಿ ಸವಲತ್ತಿನಿಂದ ಹೊರಗೆ ಇರಿಸದೆ ಇರುವಂತಹ ಅಂತಾರಾಷ್ಟ್ರೀಯ ಕಾರ್ಮಿಕರು ಕಡ್ಡಾಯವಾಗಿ ನೌಕರರ ಭವಿಷ್ಯ ನಿಧಿಗೆ ದೇಣಿಗೆ ನೀಡಬೇಕು ಎಂದು 2008 ಮತ್ತು 2010ರಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಆದೇಶಗಳನ್ನು ಈಚೆಗೆ ಎತ್ತಿಹಿಡಿದಿರುವ ದೆಹಲಿ ಹೈಕೋರ್ಟ್ ಸ್ಪೈಸ್‌ ಜೆಟ್‌ ಮತ್ತು ಎಲ್‌ಜಿ ಎಲೆಕ್ಟ್ರಾನಿಕ್ಸ್ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಿದೆ [ಸ್ಪೈಸ್‌ಜೆಟ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

1952ರ ಇಪಿಎಫ್ ಯೋಜನೆಯನ್ನು ವಿದೇಶಿ ಪ್ರಜೆಗಳಿಗೂ ಅನ್ವಯಿಸುವಂತೆ ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಮತ್ತು ಭಾರತೀಯ ಮತ್ತು ವಿದೇಶಿ ಕಾರ್ಮಿಕರ ನಡುವಿನ ವರ್ಗೀಕರಣಕ್ಕೆ ಸಾಂವಿಧಾನಿಕವಾಗಿ ಅನುಮತಿ ಇದೆ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಹೇಳಿದೆ.

“ಈ ಅಧಿಸೂಚನೆಗಳಲ್ಲಿ ಯಾವುದೇ ಕಾನೂನು ದೋಷವಿಲ್ಲ ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ.” ಎಂದು ಅದು ಹೇಳಿತು.

ಅಕ್ಟೋಬರ್ 1, 2008ರಲ್ಲಿ ಮೊದಲ ಅಧಿಸೂಚನೆ ಹೊರಡಿಸಿ ಜಿಎಸ್ಆರ್ 706(ಇ) ಮೂಲಕ, ಇಪಿಎಫ್ ಯೋಜನೆ, 1952ಕ್ಕೆ 83ನೇ ಪ್ಯಾರಾ ಸೇರ್ಪಡೆ ಮಾಡಲಾಯಿತು. ಇದರಿಂದ ಅಂತಾರಾಷ್ಟ್ರೀಯ ನೌಕರರ ಕುರಿತು ವಿಶೇಷ ನಿಯಮಗಳನ್ನು ರೂಪಿಸಲಾಯಿತು.

ಸೆಪ್ಟೆಂಬರ್ 3, 2010ರಂದು ಎರಡನೇ ಅಧಿಸೂಚನೆ ಹೊರಡಿಸಿ ಜಿಎಸ್ಆರ್ 148(ಇ) (ಸೆಪ್ಟೆಂಬರ್ 3, 2010) ಮೂಲಕ 83ನೇ ಪ್ಯಾರಾವನ್ನು ಬದಲಾಯಿಸಿ, “ಅಂತಾರಾಷ್ಟ್ರೀಯ ನೌಕರ” ಎಂಬ ವ್ಯಾಖ್ಯಾನವನ್ನು ಸ್ಪಷ್ಟಪಡಿಸಿ, ಸಾಮಾಜಿಕ ಸುರಕ್ಷತಾ ಒಪ್ಪಂದದಡಿ (ಎಸ್‌ಎಸ್‌ಎ) “ಹೊರತುಪಡಿಸಲಾದ ನೌಕರರು” ಎಂಬ ವರ್ಗವನ್ನುರಚಿಸಿ, ಉದ್ಯೋಗ ಪಡೆದ ದಿನದಿಂದಲೇ ಇಪಿಎಫ್ ಸದಸ್ಯತ್ವ ಮತ್ತು ಕೊಡುಗೆ ಕಡ್ಡಾಯ ಎಂದು ನಿಯಮ ರೂಪಿಸಲಾಗಿತ್ತು.

ಮಾರ್ಚ್ 14, 2011ರಂದು ಬಾಕಿ ಇಪಿಎಫ್ ಮೊತ್ತ ಪಾವತಿಸುವಂತೆ ನೀಡಲಾಗಿದ್ದ ನೋಟಿಸ್ ಮತ್ತು ಮಾರ್ಚ್ 15, 2012ರಂದ ಹೊರಡಿಸಲಾಗಿದ್ದ ಸೆಕ್ಷನ್ 7ಎ ಸಮನ್ಸನ್ನು ಸ್ಪೈಸ್‌ಜೆಟ್‌ ಪ್ರಶ್ನಿಸಿತ್ತು. ಎಲ್‌ಜಿ ಎಲೆಕ್ಟ್ರಾನಿಕ್ಸ್ ಕೂಡ ಇದೇ ಬಗೆಯ ಆಕ್ಷೇಪ ಎತ್ತಿತ್ತು.

ವಿದೇಶಿ ಉದ್ಯೋಗಿಗಳು ವೇತನ ಎಷ್ಟೇ ಹೆಚ್ಚಿದ್ದರೂ ಇಪಿಎಫ್ ಕಡ್ಡಾಯವಾಗಿದೆ. ಆದರೆ ಆದರೆ ಭಾರತೀಯ ಉದ್ಯೋಗಿಗಳಿಗೆ ₹15,000 ಮೇಲ್ಪಟ್ಟ ವೇತನ ಇರುವವರಿಗೆ ಇಪಿಎಫ್ ಕಡ್ಡಾಯವಲ್ಲವಾಗಿರುವುದರಿಂದ 83ನೇ ಪ್ಯಾರಾ ಭಾರತೀಯ ಮತ್ತು ವಿದೇಶಿ ಉದ್ಯೋಗಿಗಳನ್ನು ಕಾನೂನಾತ್ಮಕವಾಗಿ ತಪ್ಪಾಗಿ ವಿಭಜಿಸುತ್ತದೆ ಎಂಬುದು ಕಂಪೆನಿಗಳ ವಾದವಾಗಿತ್ತು.

ಇಪಿಎಫ್ ಹಣವನ್ನು ನೌಕರ 58 ವರ್ಷದ ನಂತರವಷ್ಟೇ ಪಡೆಯಬಹುದಾದ್ದರಿಂದ ಭಾರತದಲ್ಲಿ ಕಡಿಮೆ ಅವಧಿಗೆ ಸೇವೆ ಸಲ್ಲಿಸುವ ವಿದೇಶಿಯರಿಗೆ ಅನ್ವಯಿಸುವುದು ಅಸಾಧ್ಯ ಎಂದು ಅವು ತಿಳಿಸಿದ್ದವು.

ಸಾಮಾನ್ಯ ಕಾನೂನು ಪ್ರಶ್ನೆಗಳಿದ್ದುದರಿಂದ ಎರಡೂ ಕಂಪೆನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಒಟ್ಟಿಗೆ ಆಲಿಸಿದ ನ್ಯಾಯಾಲಯ ಸಂವಿಧಾನದ 14ನೇ ವಿಧಿಯ ಸಕಾರಣ ವರ್ಗೀಕರಣ ಪರೀಕ್ಷೆ ಅನ್ವಯಿಸಿತು. ಆ ಮೂಲಕ ವಿದೇಶಿ ಮತ್ತು ಭಾರತೀಯ ಉದ್ಯೋಗಿಗಳ ನಡುವಿನ ಅನುಮತಿಸಲಾದ ವರ್ಗೀಕರಣವನ್ನು ಎತ್ತಿಹಿಡಿಯಿತು. ಪ್ರಮಾಣಿತ ಆರ್ಥಿಕ ಮತ್ತು ಅಂತಾರಾಷ್ಟ್ರೀಯ ಕಾರಣಗಳಿಗೆ ಆಧಾರಿತವಾಗಿದೆ ಎಂದಿತು.

ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಈ ಸಂಬಂಧ ನೀಡಿದ್ದ ತೀರ್ಪನ್ನು ತಿರಸ್ಕರಿಸಿದ ಅದು ಈ ಪ್ರಕರಣದಲ್ಲಿ ಮಾಡಿದ ವರ್ಗೀಕರಣಕ್ಕೆ ಆರ್ಥಿಕ ಒತ್ತಡ ಮತ್ತು ಅಂತಾರಾಷ್ಟ್ರೀಯ ಬಾಧ್ಯತೆ ಎಂಬ ಯುಕ್ತಿ ಇದೆ. ಇದು ಕರ್ಣಾಟಕ ಹೈಕೋರ್ಟ್ ತೀರ್ಪಿನಲ್ಲಿ ಕಂಡುಬರುವುದಿಲ್ಲ ಎಂದಿತು.

ಇಪಿಎಫ್‌ ಹಣವನ್ನು 58 ವರ್ಷದ ಬಳಿಕವಷ್ಟೇ ಪಡೆಯುವ ನಿಯಮ ಕುರಿತಂತೆ ಪ್ರತಿಕ್ರಿಯಿಸಿದ ಅದು ಅಂತಾರಾಷ್ಟ್ರೀಯ ಸಾಮಾಜಿಕ ಸುರಕ್ಷತಾ ಒಪ್ಪಂದವನ್ನು ಭಾರತದಲ್ಲಿ ಜಾರಿಗೆ ತರುವುದಕ್ಕಾಗಿ 83ನೇ ಪ್ಯಾರಾವನ್ನು ಸೇರ್ಪಡೆ ಮಾಡಲಾಗಿದ್ದು. ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳುವುದು ಸಾರ್ವಭೌಮ ಪ್ರಭುತ್ವದ ಹಕ್ಕಾಗಿದೆ. ಈ ನಿಯಮ ರದ್ದುಪಡಿಸಿದರೆ ಸಾಮಾಜಿಕ ಸುರಕ್ಷತಾ ಒಪ್ಪಂದವನ್ನು ಜಾರಿಗೊಳಿಸುವ ಕಾನೂನಿಗೆ ಆಧಾರವೇ ಇಲ್ಲವಾಗುತ್ತದೆ ಎಂದಿತು.

ಕಡೆಗೆ ನ್ಯಾಯಾಲಯ 2008 ಮತ್ತು 2010ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗಳು ಮಾನ್ಯವಾಗಿರುವುದರಿಂದ ಅವುಗಳನ್ನು ಆಧರಿಸಿ ಹೊರಡಿಸಿದ ಉಳಿದ ಸುತ್ತೋಲೆ ಮತ್ತು ನೋಟಿಸ್‌ಗಳನ್ನು ಪ್ರಶ್ನಿಸಲು ಯಾವುದೇ ಆಧಾರವಿಲ್ಲ ಎಂದು ತಿಳಿಸಿತು. ಅಂತೆಯೇ ರಿಟ್ ಅರ್ಜಿಗಳನ್ನು ವಜಾಗೊಳಿಸಿತು.