ನ್ಯಾಯಾಂಗ ಭ್ರಷ್ಟವಾಗಿದೆ ಎಂದು ಕರೆದ ವಕೀಲರೊಬ್ಬರ ವಿರುದ್ಧ ದೆಹಲಿ ಹೈಕೋರ್ಟ್ ಇತ್ತೀಚೆಗೆ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದೆ [ಗುಂಜನ್ ಕುಮಾರ್ ಮತ್ತಿತರರು ಹಾಗೂ ವೇದಾಂತ್ ನಡುವಣ ಪ್ರಕರಣ] .
ವೇದಾಂತ್ ಎಂಬ ವಕೀಲರು "ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಅಜಾಗರೂಕವಾಗಿ ಆರೋಪ ಮಾಡಿದ್ದು ಅದು ನ್ಯಾಯಾಂಗವನ್ನು ನಿಂದಿಸುವಂತಿದ್ದು ಅಪಮಾನಕರ ಹಾಗೂ ಅಪವಾದಕಾರಿಯಾಗಿದೆ ಎಂದು ಸೆಪ್ಟೆಂಬರ್ 19ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಅಮಿತ್ ಶರ್ಮಾ ಅವರು ತಿಳಿಸಿದ್ದಾರೆ.
“ಈ ಟೀಕೆಗಳು ನ್ಯಾಯಾಲಯದ ಅಧಿಕಾರವನ್ನು ಅಪಮಾನಗೊಳಿಸುವಂತೆ ಮತ್ತು ಕೀಳಾಗಿ ಕಾಣುವಂತೆ ಇದೆ. ಜೊತೆಗೆ, ಇದು ನ್ಯಾಯಾಂಗ ಪ್ರಕ್ರಿಯೆ ಮತ್ತು ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತೆ ತೋರುತ್ತದೆ. ಪ್ರಸ್ತುತ ಪ್ರಕರಣದ ವಾಸ್ತವಾಂಶ ಮತ್ತು ಪರಿಸ್ಥಿತಿ ಗಮನಿಸಿದರೆ, ಅರ್ಜಿಯಲ್ಲಿ ಸಲ್ಲಿಸಲಾಗಿರುವ ಮಾಹಿತಿಯನ್ನು ಪರಿಶೀಲಿಸಿದ ಮೇಲೆ, ಪ್ರತಿವಾದಿ 1971ರ ನ್ಯಾಯಾಲಯ ನಿಂದನೆ ಕಾಯಿದೆಯ ಸೆಕ್ಷನ್ 2 (ಸಿ) ರಲ್ಲಿ ವ್ಯಾಖ್ಯಾನಿಸಿದಂತೆ "ಕ್ರಿಮಿನಲ್ ನ್ಯಾಯಾಂಗ ನಿಂದನೆ" ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ” ಎಂದು ನ್ಯಾಯಾಲಯ ವಿವರಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 19, 2025ರಂದು ನಡೆಯಲಿದೆ.
ಹಿಂದಿನ ಸಿವಿಲ್ ನ್ಯಾಯಾಲಯದ ಆದೇಶವನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣೆಗಳಿಗೆ ಹಾಜರಾಗದೆ ಇದ್ದುದಕ್ಕಾಗಿ ವಕೀಲ ವೇದಾಂತ್ ಅವರ ವಿರುದ್ಧ ಸಲ್ಲಿಸಲಾದ ಸಿವಿಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿತ್ತು. ಪ್ರತಿವಾದಿ ವಕೀಲ ಹಾಗೂ ವಾಯುವ್ಯ ದೆಹಲಿಯ ಸಿವಿಲ್ ನ್ಯಾಯಾಧೀಶರ ವಿರುದ್ಧ ಪಿತೂರಿ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ವೇದಾಂತ್ ಮಾಡಿದ್ದರು.
ವೇದಾಂತ್ ಅವರು ಜನವರಿ 2024 ರಲ್ಲಿ ಬೇಷರತ್ ಕ್ಷಮೆಯಾಚಿಸಿದ್ದರಾದರೂ ನ್ಯಾಯಾಂಗ ಭಯೋತ್ಪಾದನೆ, ನ್ಯಾಯಾಂಗ ತುರ್ತುಸ್ಥಿತಿ, ನ್ಯಾಯಾಂಗ ಭ್ರಷ್ಟಾಚಾರ ಮತ್ತು ನ್ಯಾಯಾಂಗದಿಂದ ಸಾಮೂಹಿಕ ಪಿತೂರಿ ನಡೆದಿದೆ ಎಂದು ಹೇಳುವುದನ್ನು ಮುಂದುವರೆಸಿದ್ದರು. ಜೊತೆಗೆ ನ್ಯಾಯಾಂಗ ಎಂಬುದು "ಆಡುಗಳನ್ನು ಸಿಂಹಗಳಾಗಿ ಮತ್ತು ಸಿಂಹಗಳನ್ನು ಆಡುಗಳನ್ನಾಗಿ ಪರಿವರ್ತಿಸುತ್ತದೆ" ಎಂದು ಆರೋಪಿಸಿದ್ದರು.
ಈ ಹೇಳಿಕೆಗಳು ಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿ ಶರ್ಮಾ ಅವರು ವಕೀಲ ವೇದಾಂತ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದರು.