ಉಳಿದೆಲ್ಲಾ ಚ್ಯವನ್‌ಪ್ರಾಶ್ ತಯಾರಕರು ವಂಚಕರು ಎಂದು ಕರೆದಿದ್ದ ಪತಂಜಲಿ ಆಯುರ್ವೇದದ ಹೊಸ ಜಾಹೀರಾತು ಪ್ರಸಾರ ಮಾಡದಂತೆ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ [ಡಾಬರ್ ಇಂಡಿಯಾ ಲಿಮಿಟೆಡ್ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್ ನಡುವಣ ಪ್ರಕರಣ].
ಸಾಮಾಜಿಕ ಮಾಧ್ಯಮ ಕಂಪನಿಗಳು, ಓವರ್ ದಿ ಟಾಪ್ (ಒಟಿಟಿ) ವೇದಿಕೆಗಳು ಮತ್ತು ಪ್ರಸಾರಕರು ಮೂರು ದಿನಗಳೊಳಗೆ ಜಾಹೀರಾತಿಗೆ ನಿರ್ಬಂಧ ವಿಧಿಸಬೇಕು ಎಂದು ನ್ಯಾಯಮೂರ್ತಿ ತೇಜಸ್ ಕಾರಿಯ ಅವರು ಸೂಚಿಸಿದ್ದಾರೆ.
ಇಡಿಯಾಗಿ ಎಲ್ಲಾ ಚ್ಯವನ್‌ಪ್ರಾಶ್ ಉತ್ಪನ್ನಗಳನ್ನು ಅವಹೇಳನ ಮಾಡುವ ಉದ್ದೇಶ ಜಾಹೀರಾತಿಗೆ ಇದೆ ಎಂದು ತೀರ್ಪು ಹೇಳಿದೆ.
ಮೇಲ್ನೋಟಕ್ಕೆ ತಡೆಯಾಜ್ಞೆ ನೀಡಲು ಅಗತ್ಯವಾದ ವಾದ ಮಂಡಿಸಲಾಗಿದೆ. ಜಾಹೀರಾತಿನಲ್ಲಿ ಬಾಬಾ ರಾಮದೇವ್ ಕಾಣಿಸಿಕೊಂಡಿರುವ ಕಾರಣ, ಅವರ ಮಾತು ನಿಜ ಎಂದು ಜನ ನಂಬುವ ಸಾಧ್ಯತೆ ಹೆಚ್ಚಿದೆ. ಪತಂಜಲಿ ತನ್ನ ಜಾಹೀರಾತಿನಲ್ಲಿ ಡಾಬರ್ ಉತ್ಪನ್ನವನ್ನು ಹೆಸರಿಸಿಲ್ಲವಾದರೂ ಚ್ಯವನ್‌ಪ್ರಾಶ್ ಉತ್ಪನ್ನಗಳೆಲ್ಲಾ ವಂಚನೆಯಿಂದ ಕೂಡಿವೆ ಎಂದು ಹೇಳಿರುವುದರಿಂದ ಉಳಿದ ಚ್ಯವನ್‌ಪ್ರಾಶ್ ಉತ್ಪನ್ನಗಳನ್ನೂ ಅವಹೇಳನ ಮಾಡಿದಂತಾಗಿದೆ. ಇದು ಅನ್ಯಾಯದ ಪೈಪೋಟಿ ಎಂದು ನ್ಯಾಯಾಲಯ ವಿವರಿಸಿದೆ.
ತುಲನಾತ್ಮಕ ಜಾಹೀರಾತಿಗೆ ಅನುಮತಿ ಇದೆಯಾದರೂ ಅದು ಪ್ರತಿಸ್ಪರ್ಧಿಯ ಉತ್ಪನ್ನವನ್ನು ಅವಹೇಳನ ಮಾಡುವ ಮಟ್ಟಕ್ಕೆ ಹೋಗಬಾರದು. ಜಾಹೀರಾತೊಂದು ಅನುಮತಿಸಲಾದ ಎಲ್ಲೆ ಮೀರಿದರೆ ಮತ್ತು ಅದು ಸುಳ್ಳು, ದಾರಿತಪ್ಪಿಸುವ, ಅನ್ಯಾಯ ಅಥವಾ ಮೋಸಗೊಳಿಸುವಂತಿದ್ದರೆ ಸಂವಿಧಾನದ 19(1)(ಎ) ವಿಧಿಯಡಿ ಅದಕ್ಕೆ ರಕ್ಷಣೆ ದೊರೆಯದು ಎಂದ ನ್ಯಾಯಾಲಯ ನಿರ್ಬಂಧ ವಿಧಿಸಿತು.
ಪತಂಜಲಿಯ ಹೊಸ “ಸ್ಪೆಷಲ್ ಚ್ಯವನ್‌ಪ್ರಾಶ್”ಜಾಹೀರಾತಿನಲ್ಲಿ ಉಳಿದೆಲ್ಲಾ ಚ್ಯವನ್‌ಪ್ರಾಶ್ ಬ್ಯಾಂಡ್‌ಗಳನ್ನು ವಂಚಕರು ಎಂದು ಕರೆಯುತ್ತಿದ್ದಾರೆ ಎಂದು ದೂರಿ ಪತಂಜಲಿ ವಿರುದ್ಧ ಡಾಬರ್ ಕಂಪೆನಿ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು.
ನಮ್ಮದು 1949ರಿಂದ ಮಾರುಕಟ್ಟೆಯಲ್ಲಿ ಮುಂಚೂಣಿ ಬ್ರ್ಯಾಂಡ್ ಆಗಿದೆ. ಚ್ಯವನ್‌ಪ್ರಾಶ್ ಮಾರುಕಟ್ಟೆಯಲ್ಲಿ ಶೇ.61 ಪಾಲು ಹೊಂದಿದೆ. ಹಾಗಿದ್ದರೂ ಪತಂಜಲಿ ಎಲ್ಲರನ್ನೂ ವಂಚಕರೆಂದು ಬಿಂಬಿಸಲು ಹೊರಟಿದೆ. ಇದೊಂದು ಸಾಮಾನ್ಯೀಕೃತ ಅವಹೇಳನವಾಗಿದ್ದು ಇದರಿಂದ ಗ್ರಾಹಕರಲ್ಲಿ ಇಡೀ ಆಯುರ್ವೇದ ಚ್ಯವನ್‌ಪ್ರಾಶ್ ಮೇಲೆ ಅವಿಶ್ವಾಸ ಮೂಡುತ್ತದೆ ಎಂದು ಡಾಬರ್ ಅರ್ಜಿಯಲ್ಲಿ ತಿಳಿಸಿತ್ತು.