Internet anonymity, Wikipedia and ANI 
ಸುದ್ದಿಗಳು

ಎಎನ್ಐ ಮಾನನಷ್ಟ ಮೊಕದ್ದಮೆ: ವಿಕಿಪೀಡಿಯ ಬಳಕೆದಾರರಿಗೆ ದೆಹಲಿ ಹೈಕೋರ್ಟ್ ಸಮನ್ಸ್

ವಿಕಿಪೀಡಿಯದಲ್ಲಿರುವ ತನ್ನ ಪುಟದಲ್ಲಿ ಮಾನಹಾನಿಕರ ವಿಚಾರಗಳನ್ನು ಸೇರಿಸಲು ಆನ್‌ಲೈನ್‌ ವಿಶ್ವಕೋಶವಾಗಿರುವ ವಿಕಿಪೀಡಿಯ ಅನುಮತಿಸಿದೆ ಎಂದು ಆರೋಪಿಸಿ ಎಎನ್ಐ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದೆ.

Bar & Bench

ಏಷ್ಯನ್‌ ನ್ಯೂಸ್‌ ಇಂಟರ್‌ನ್ಯಾಷನಲ್‌ (ಎಎನ್‌ಐ) ಸುದ್ದಿ ಸಂಸ್ಥೆ ಕುರಿತಾದ ವಿಕಿಪೀಡಿಯ ಪುಟದಲ್ಲಿ ಮಾನಹಾನಿಕರ ವಿಚಾರಗಳನ್ನು ಸೇರಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ವಿಕಿಪೀಡಿಯ ಬಳಕೆದಾರರಿಗೆ ದೆಹಲಿ ಹೈಕೋರ್ಟ್ ಗುರುವಾರ ಸಮನ್ಸ್ ಜಾರಿ ಮಾಡಿದೆ [ವಿಕಿಮೀಡಿಯಾ ಫೌಂಡೇಷನ್‌ ಇಂಕ್‌ ಮತ್ತು ಎಎನ್‌ಐ ಮೀಡಿಯಾ ಪ್ರೈ ಲಿಮಿಟೆಡ್‌ ಇನ್ನಿತರರ ನಡುವಣ ಪ್ರಕರಣ].

ಬಳಕೆದಾರರ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದೆ ಸಮನ್ಸ್ ನೀಡಲು ವಿಕಿಪೀಡಿಯಕ್ಕೆ ಅವಕಾಶ ನೀಡಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಗಮನಿಸಿದ ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಅವರು ಈ ಆದೇಶ ನೀಡಿದರು.

ಎಎನ್‌ಐ ಕುರಿತು ಮಾನನಷ್ಟ ಆರೋಪ ಮಾಡಿರುವ ತನ್ನ ಬಳಕೆದಾರರ ಗುರುತು ಬಹಿರಂಗಕ್ಕೆ ನಿರ್ದೇಶಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಕಿಪೀಡಿಯ ಈ ಹಿಂದೆ ಮೇಲ್ಮನವಿ ಸಲ್ಲಿಸಿತ್ತು.

ಬಳಕೆದಾರರ ಮಾಹಿತಿಯನ್ನು ನ್ಯಾಯಾಲಯಕ್ಕೆ ಹಂಚಿಕೊಳ್ಳಲು ಈಚೆಗೆ ವಿಕಿಪೀಡಿಯ ಸಮ್ಮತಿಸಿತ್ತು. ಅಲ್ಲದೆ ಎಎನ್‌ಐ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬಳಕೆದಾರರ ಗೋಪ್ಯತೆಯನ್ನು ಕಾಪಾಡಲು ತಾನೇ ಅವರಿಗೆ ನೋಟಿಸ್‌ ನೀಡಲು ವಿಕಿಪಿಡಿಯಾ ಒಪ್ಪಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ವಿಲೇವಾರಿ ಮಾಡಲಾಗಿತ್ತು.

ವಿಭಾಗೀಯ ಪೀಠದ ಮುಂದೆ ನಡೆದ ಬೆಳವಣಿಗೆಗಳನ್ನು  ಏಕಸದಸ್ಯ ಪೀಠಕ್ಕೆ ಎಎನ್‌ಐ ಪರ ವಕೀಲ ಸಿದ್ದಾಂತ್ ಕುಮಾರ್ ಇಂದು ತಿಳಿಸಿದರು.

ವಿಭಾಗೀಯ ಪೀಠದ ಆದೇಶವನ್ನು ಪರಿಶೀಲಿಸಿದ, ನ್ಯಾಯಮೂರ್ತಿ ಪ್ರಸಾದ್ ಅವರು ಅದರಲ್ಲಿ ದಾಖಲಾಗಿರುವ ಒಪ್ಪಿಗೆಯ ನಿಯಮಗಳ ಆದೇಶ ಪಾಲನೆಗಾಗಿ ಹೈಕೋರ್ಟ್ ರಿಜಿಸ್ಟ್ರಿಗೆ ಆದೇಶಿಸಿದರು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 16 ರಂದು ನಡೆಯಲಿದೆ.