Gautam Gambhir, Delhi High Court  
ಸುದ್ದಿಗಳು

ಕೋವಿಡ್ ಔಷಧ ದಾಸ್ತಾನು: ಗೌತಮ್ ಗಂಭೀರ್ ಪ್ರತಿಷ್ಠಾನದ ವಿರುದ್ಧದ ಪ್ರಕರಣ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಈ ಆದೇಶ ಹೊರಡಿಸಿದರು.

Bar & Bench

ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆ ವೇಳೆ ಅಕ್ರಮಾಗಿ ಚಿಕಿತ್ಸೆಗೆ ಬಳಸುವ ಔಷಧಗಳನ್ನು ಸಂಗ್ರಹಿಸಿ ವಿತರಿಸಿದ ಆರೋಪದ ಮೇಲೆ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹಾಗೂ ಬಿಜೆಪಿ ನಾಯಕ ಗೌತಮ್ ಗಂಭೀರ್ ಅವರ ಪ್ರತಿಷ್ಠಾನದ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಈ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 2021ರಲ್ಲಿ ಹೈಕೋರ್ಟ್ ವಿಚಾರಣೆಗೆ ತಡೆ ನೀಡಿತ್ತು.

ಪ್ರಕರಣವನ್ನು ರದ್ದುಗೊಳಿಸುವಂತೆ ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಆದೇಶಗಳನ್ನು ಕೂಡ ಎತ್ತಿಹಿಡಿದಿದೆ.

ಕಾನೂನುಬದ್ಧ ಮಾರಾಟಗಾರರಿಂದ ಔಷಧ ಖರೀದಿಸಿದ್ದ ಪ್ರತಿಷ್ಠಾನ ಬಳಿಕ ವೈದ್ಯಕೀಯ ಶಿಬಿರಗಳಲ್ಲಿ ಅವುಗಳನ್ನು ವಿತರಿಸಿತು. ಔಷಧಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವ ಬಗ್ಗೆ ದೂರು ಇಲ್ಲ ಎಂದು ಪ್ರತಿಷ್ಠಾನ ತಿಳಿಸಿತು.

ಕೋವಿಡ್‌ ಎರಡನೇ ಅಲೆ ವೇಳೆ ಫ್ಯಾಬಿಫ್ಲೂ ಔಷಧದ ಅಕ್ರಮ ದಾಸ್ತಾನು ಮತ್ತು ವಿತರಣೆ ಮಾಡಿದ ಗೌತಮ್‌ ಗಂಭೀರ್‌ ಪ್ರತಿಷ್ಠಾನ ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆಯಡಿ ಅಪರಾಧ ಎಸಗಿದೆ ಎಂದು ದೆಹಲಿಯ ಔಷಧ ನಿಯಂತ್ರಣ ಸಂಸ್ಥೆಯು ಜೂನ್ 2021 ರಲ್ಲಿ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು.

ಜೂನ್ 3, 2021ರ ತನ್ನ ಆದೇಶದಲ್ಲಿ, ಹೈಕೋರ್ಟ್ ಔಷಧ ನಿಯಂತ್ರಕರು ಸಂಬಂಧಿತ ಔಷಧಿಗಳ ಪೂರೈಕೆಯನ್ನು ನಿರ್ಬಂಧಿಸುವ ಅಥವಾ ಹತ್ತಿಕ್ಕುವ ನಡವಳಿಕೆಯನ್ನು ಉಲ್ಲಂಘಿಸುವವರನ್ನು ಮಾತ್ರ ಬಂಧಿಸಬೇಕು ಎಂದು ನಿರ್ದೇಶಿಸಿತ್ತು.

ಪೂರೈಕೆಯನ್ನು ತಡೆಯುವಷ್ಟು ಪ್ರಮಾಣದಲ್ಲಿ ಔಷಧಿ/ಆಮ್ಲಜನಕ ಸಂಗ್ರಹಿಸಿದವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಬೇಕು ಎಂದು ಔಷಧ ನಿಯಂತ್ರಕರಿಗೆ ಹೈಕೋರ್ಟ್‌ ತಿಳಿಸಿತ್ತು.

ತರುವಾಯ, ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದೆದುರು ಪ್ರತಿಷ್ಠಾನದ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿತ್ತು. ಜುಲೈ 2021ರಲ್ಲಿ, ಪ್ರತಿಷ್ಠಾನದ ವಿರುದ್ಧದ ಔಷಧ ನಿಯಂತ್ರಕರು ಆರಂಭಿಸಿದ್ದ ತನಿಖೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಪರಿಹಾರಕ್ಕಾಗಿ ದೆಹಲಿ ಹೈಕೋರ್ಟ್ ಸಂಪರ್ಕಿಸುವಂತೆ ಪ್ರತಿಷ್ಠಾನಕ್ಕೆ ಸೂಚಿಸಿತ್ತು. “ಜನರು ಔಷಧಿಗಾಗಿ ಅಲೆದಾಡುತ್ತಿದ್ದಾಗ, ಹಠಾತ್ತನೆ ಒಂದು ಟ್ರಸ್ಟ್ ಬಂದು ‘ನಾವು ಕೊಡುತ್ತೇವೆ  ಎಂದು ಹೇಳುವುದು ಸರಿಯಲ್ಲ” ಎಂದು ಆಗ ಅದು ತಿಳಿಸಿತ್ತು.

ಗೌತಮ್ ಗಂಭೀರ್ ಪರವಾಗಿ ವಕೀಲರಾದ ಜೈ ಅನಂತ್ ದೇಹದ್ರಾಯ್ ಮತ್ತು ಶ್ರುತಿ ಪ್ರಿಯದರ್ಶಿನಿ ವಾದ ಮಂಡಿಸಿದ್ದರು. ಸರ್ಕಾರವನ್ನು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ (ಎಪಿಪಿ) ಉತ್ಕರ್ಷ್ ಪ್ರತಿನಿಧಿಸಿದ್ದರು.