ಯಮುನಾ ನದಿಯ ದಡದಲ್ಲಿರುವ ಮಜ್ನು ಕಾ ತಿಲಾದಲ್ಲಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತರ ಶಿಬಿರವನ್ನು ತೆರವುಗೊಳಿಸದಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ತಡೆ ನೀಡುಬೇಕು ಎಂದು ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ರವಿ ರಂಜನ್ ಸಿಂಗ್ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಇನ್ನಿತರರ ನಡುವಣ ಪ್ರಕರಣ ].
ಸುಮಾರು 800 ನಿವಾಸಿಗಳನ್ನು ಹೊಂದಿರುವ ಈ ಶಿಬಿರ ಯಮುನಾ ನದಿಯ ಪ್ರವಾಹ ಪ್ರದೇಶದಲ್ಲಿದೆ ಎಂದ ನ್ಯಾಯಮೂರ್ತಿ ಧರ್ಮೇಶ್ ಶರ್ಮಾ ಅವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನದಂತೆ ಯಮುನಾ ನದಿಯನ್ನು ರಕ್ಷಿಸುವ ಸಲುವಾಗಿ ಈ ಪ್ರದೇಶದಲ್ಲಿನ ಅತಿಕ್ರಮಿತ ನಿರ್ಮಿತಿಗಳನ್ನು ತೆರವುಗೊಳಿಸಲು ಡಿಡಿಎ ಒತ್ತಡದಲ್ಲಿದೆ ಎನ್ನುವುದನ್ನು ಗಮನಿಸಿದರು.
ಮಾನವೀಯ ಅಥವಾ ಸಹಾನುಭೂತಿಯ ವಿಚಾರಗಳಿದ್ದರೂ ಅವುಗಳನ್ನು ಪರಿಗಣಿಸದೆ ನಡೆಯುತ್ತಿರುವ ತೆರವು ಅಥವಾ ನದಿ ಪುನರುಜ್ಜೀವನ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತು.
ನಿರಾಶ್ರಿತರನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಲು ತಾನು ಪ್ರಾಮಾಣಿಕ ಪ್ರಯತ್ನ ಮಾಡಿದರೂ, ಅಧಿಕಾರಶಾಹಿಯ ನಿರ್ಲಕ್ಷ್ಯದಿಂದಾಗಿ ಈ ಪ್ರಯತ್ನಗಳು ವಿಫಲವಾದವು ಎಂದು ಇದೇ ವೇಳೆ ಪೀಠ ಹೇಳಿತು.
ಪರಿಸರ ಸೂಕ್ಷ್ಮ ಯಮುನಾ ನದಿಯ ಪ್ರವಾಹ ಪ್ರದೇಶಗಳನ್ನು ರಕ್ಷಿಸುವುದು ಅಗತ್ಯ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಇದು ಪರಿಸರ ದೃಷ್ಟಿಕೋನದಿಂದ ಮಾತ್ರವಲ್ಲದೆ ಸುಪ್ರೀಂ ಕೋರ್ಟ್, ಎನ್‌ಜಿಟಿ ಹಾಗೂ ಈ ನ್ಯಾಯಾಲಯ ನೀಡಿದ್ದ ನಿರ್ದೇಶನಗಳನ್ನು ಪಾಲಿಸುವ ಅಗತ್ಯವಿದೆ. ಈ ನಿರ್ದೇಶನಗಳು ಪರಿಸರ ಸಮಗ್ರತೆಯನ್ನು ಕಾಪಾಡುವ ಮತ್ತು ದೆಹಲಿ ನಿವಾಸಿಗಳು ಜೊತೆಗೆ ಭವಿಷ್ಯದ ಪೀಳಿಗೆಗೆ ಸ್ವಚ್ಛ ಮತ್ತು ಆರೋಗ್ಯಕರ ಪರಿಸರದ ಮೂಲಭೂತ ಮಾನವ ಹಕ್ಕನ್ನು ಸುರಕ್ಷಿತಗೊಳಿಸುವ ಗುರಿ ಹೊಂದಿವೆ ಎಂದು ನ್ಯಾಯಾಲಯ ವಿವರಿಸಿದೆ.
ಪಾಕಿಸ್ತಾನಿ-ಹಿಂದೂ ನಿರಾಶ್ರಿತರನ್ನು ಸ್ಥಳಾಂತರಿಸಲು ಮತ್ತು ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಹಿಂಜರಿಯುತ್ತಿರುವುದನ್ನು ಟೀಕಿಸಿದ ನ್ಯಾಯಾಲಯ ನಿರಾಶ್ರಿತರನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಲು ತಾನು ಪ್ರಾಮಾಣಿಕ ಪ್ರಯತ್ನ ಮಾಡಿದರೂ, ಅಧಿಕಾರಶಾಹಿಯ ನಿರ್ಲಕ್ಷ್ಯದಿಂದಾಗಿ ಈ ಪ್ರಯತ್ನಗಳು ವಿಫಲವಾದವು ಎಂದು ಹೇಳಿತು. ಪ್ರತಿಯೊಂದು ಇಲಾಖೆಯು ಈ ಜವಾಬ್ದಾರಿ ತನ್ನದಲ್ಲವೆಂದು ಬೇರೆ ಇಲಾಖೆಯೆಡೆಗೆ ಬೆರಳು ತೋರಿಸಿ ನುಣುಚಿಕೊಂಡ ಬಗ್ಗೆಯೂ ಬೇಸರಿಸಿತು. ವಿಶೇಷವಾಗಿ ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಯಿಂದ ವಿಮುಖವಾದ ಬಗ್ಗೆ ಬೇಸರಿಸಿತು.
ನಿರಾಶ್ರಿತರ ದುಃಸ್ಥಿತಿಯನ್ನು ಸುಧಾರಿಸಲು ನೀತಿ ನಿರೂಪಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ತನಗೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]