ಯಮುನೆಯ ದಡದಲ್ಲಿ ಛತ್ ಪೂಜೆ: ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಯಮುನಾ ನದಿ ಹೆಚ್ಚು ಕಲುಷಿತಗೊಂಡಿದ್ದು ಆ ನೀರಿನಲ್ಲಿ ಇಳಿಯುವುದು ಯಾರಿಗೂ ಸುರಕ್ಷಿತವಲ್ಲ ಎಂದ ಪೀಠ ಪಿಐಎಲ್ ವಜಾಗೊಳಿಸಿತು.
Yamuna river
Yamuna river
Published on

ಯಮುನಾ ನದಿಯ ದಡದಲ್ಲಿ ಛತ್ ಪೂಜೆ ಮಾಡಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.

ನದಿ ದಂಡೆಯಲ್ಲಿ ಸಾರ್ವಜನಿಕರಿಗೆ ಛತ್ ಪೂಜೆ ಮಾಡಲು ಅವಕಾಶ ನೀಡುವಂತೆ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಮತ್ತು ಪ್ರಾದೇಶಿಕ ಉಪ ವಿಭಾಗಾಧಿಕಾರಿ ಅವರಿಗೆ ನಿರ್ದೇಶನ ನೀಡುವಂತೆ ಕೋರಿ ಪೂರ್ವಾಂಚಲ್ ನವ ನಿರ್ಮಾಣ ಸಂಸ್ಥಾನ ಪಿಐಎಲ್‌ ಸಲ್ಲಿಸಿತ್ತು.

Also Read
ಯಮುನಾ ದಂಡೆಯ ಅತಿಕ್ರಮಣ ತೆರವುಗೊಳಿಸಲು ಡಿಡಿಎಗೆ ದೆಹಲಿ ಹೈಕೋರ್ಟ್ ಆದೇಶ

ನದಿಯ ದಡ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು  ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದೂ ಅರ್ಜಿ ಕೋರಿತ್ತು.

ಯಮುನಾ ನದಿ ಹೆಚ್ಚು ಕಲುಷಿತಗೊಂಡಿದ್ದು ಆ ನೀರಿನಲ್ಲಿ ಇಳಿಯುವುದು ಯಾರಿಗೂ ಸುರಕ್ಷಿತವಲ್ಲ ಎಂದ ಮುಖ್ಯ ನ್ಯಾಯಮೂರ್ತಿ ಮನಮೋಹನ್  ಮತ್ತು ನ್ಯಾಯಮೂರ್ತಿ  ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಪಿಐಎಲ್ ವಜಾಗೊಳಿಸಿತು.

“ನಿಮ್ಮ ಪೂಜೆಯಿಂದ ನದಿ ಕಲುಷಿತವಾಗುತ್ತದೆ ಎಂದಲ್ಲ. ನದಿ ಈಗಾಗಲೇ ಕಲುಷಿತಗೊಂಡಿರುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ನಾವು ಹೇಳುತ್ತಿದ್ದೇವೆ” ಎಂದು  ಮುಖ್ಯ ನ್ಯಾ. ಮನಮೋಹನ್ ಹೇಳಿದರು.

ಪೂಜೆ ವೇಳೆ ಸೊಂಟದವರೆಗಿನ ನದಿ ನೀರಿನಲ್ಲಿ ನಿಂತು ಪೂಜಾ ವಿಧಿ ನೆರವೇರಿಸಲಾಗುತ್ತದೆ. ಇದಕ್ಕೆ (ಆರೋಗ್ಯದ ದೃಷ್ಟಿಯಿಂದ) ಅವಕಾಶ ನೀಡಲಾಗದು ಎಂದು ನ್ಯಾ. ಗೆಡೆಲಾ ಹೇಳಿದರು.

ದೆಹಲಿ ಸರ್ಕಾರದ ಪರ ವಕೀಲರು ಕೂಡ  ಪೀಠದ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಯಮುನೆ ಅತಿಹೆಚ್ಚು ಕಲುಷಿತಗೊಂಡಿದ್ದು ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶವಿತ್ತರೆ ಅವರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದರು.

Also Read
ಗಂಗಾ-ಯಮುನಾ ನಡುವಿನ ಭೂಮಿ ಒಡೆತನ ತನ್ನದು ಎಂದ ವ್ಯಕ್ತಿಗೆ ₹10,000 ದಂಡ ವಿಧಿಸಿದ ದೆಹಲಿ ಹೈಕೋರ್ಟ್

ನದಿಗೆ ಚರಂಡಿ ನೀರನ್ನು ಹರಿಬಿಡುತ್ತಿರುವ ಬಗ್ಗೆ ಶಬ್ನಮ್‌ ಬರ್ನಿ ಪ್ರಕರಣದ ತೀರ್ಪಿನಲ್ಲಿ ತಾನು ಪ್ರಸ್ತಾಪಿಸಿರುವುದನ್ನು ಪೀಠ ಉಲ್ಲೇಖಿಸಿತು.

“ಕಡೆಗಳಿಗೆಯಲ್ಲಿ ನಾವು ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ. ಅರ್ಜಿದಾರರು ಶುಚಿ ಕಾರ್ಯದಲ್ಲಿ ಕೈಜೋಡಿಸುವುದಾದರೆ ಹಾಗೆ ಮಾಡಬಹುದು” ಎಂದು ಪೀಠ ಅರ್ಜಿ ವಜಾಗೊಳಿಸಿತು.

Kannada Bar & Bench
kannada.barandbench.com