Delhi High Court, CISF 
ಸುದ್ದಿಗಳು

ಮಹಿಳಾ ಪೇದೆ ಸುಳ್ಳು ಆರೋಪ: 25 ವರ್ಷದ ಬಳಿಕ ಸಿಐಎಸ್ಎಫ್ ಅಧಿಕಾರಿ ವಿರುದ್ಧದ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಮಾಜಿ ಕಮಾಂಡೆಂಟ್ ವಿರುದ್ಧದ ಆರೋಪದಲ್ಲಿ ಪ್ರತೀಕಾರದ ವಾಸನೆ ಇದೆ ಎಂದ ನ್ಯಾಯಾಲಯ, ಕಮಾಂಡೆಂಟ್ ಅವರ ಸೇವೆ ವಜಾಗೊಳಿಸುವ 2005ರ ಆದೇಶ ರದ್ದುಗೊಳಿಸಿತು.

Bar & Bench

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಮಹಿಳಾ ಪೇದೆಯೊಬ್ಬರು 1999ರಲ್ಲಿ ಮಾಡಿದ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಈಚೆಗೆ ತೀರ್ಪು ನೀಡಿರುವ ದೆಹಲಿ ಹೈಕೋರ್ಟ್‌ ಮಾಜಿ ಕಮಾಂಡೆಂಟ್ ಅವರನ್ನು ಸೇವೆಯಿಂದ ವಜಾಗೊಳಿಸಿದ 2005ರಲ್ಲಿ ಹೊರಡಿಸಿದ್ದ ಆದೇಶವನ್ನು ಈಚೆಗೆ ರದ್ದುಗೊಳಿಸಿತು.

ತನಗೆ ಆರ್ಥೀಕ ಪರಿಹಾರ ಬೇಡ, ಬದಲಿಗೆ ನನ್ನ ಗೌರವ ನನಗೆ ಮರಳಿ ದೊರಕುವಂತಾಗಬೇಕು ಎಂದು ಅಧಿಕಾರಿ ಕೋರಿದ್ದರು.

ಅಧಿಕಾರಿಯ ಗೌರವ ಮರುಸ್ಥಾಪಿಸುವುದೇ ತಾನು ಮಾಡಬಹುದಾದ ಕನಿಷ್ಠ ಕಾರ್ಯ ಎಂದು ನ್ಯಾಯಮೂರ್ತಿ ದಿನೇಶ್ ಮೆಹ್ತಾ ಮತ್ತು ನ್ಯಾಯಮೂರ್ತಿ ವಿಮಲ್ ಕುಮಾರ್ ಯಾದವ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

“ಸುಮಾರು 25 ವರ್ಷಗಳ ಅವಧಿ ಕಳೆದಿದ್ದು, ಅರ್ಜಿದಾರರು ಈಗ 72 ವರ್ಷ ವಯಸ್ಸನ್ನು ತಲುಪಿರುವುದನ್ನು ಗಮನಿಸಿದರೆ, ನಮ್ಮ ದೃಷ್ಟಿಯಲ್ಲಿ ‘ಕಡ್ಡಾಯ ನಿವೃತ್ತಿ ಆದೇಶದಿಂದ ನಾಶಗೊಂಡಿರುವ ಅವರ ಗೌರವವನ್ನು ಮರುಸ್ಥಾಪಿಸುವುದೇ ನಾವು ಮಾಡಬಹುದಾದ ಕನಿಷ್ಠ ಕಾರ್ಯ” ಎಂದ ಅದು, ಅರ್ಜಿದಾರರ ವಿರುದ್ಧ ಜಾರಿಗೊಳಿಸಿದ್ದ ಕಡ್ಡಾಯ ನಿವೃತ್ತಿ ಆದೇಶ ರದ್ದುಗೊಳಿಸಿತು.

ಅರ್ಜಿದಾರರು 1976ರಲ್ಲಿಸಿಐಎಸ್‌ಎಫ್‌ಗೆ ಸೇರ್ಪಡೆಗೊಂಡಿದ್ದು, 1998ರಲ್ಲಿ ಸಹಾಯಕ ಕಮಾಂಡಂಟ್ ಹುದ್ದೆಗೆ ಬಡ್ತಿ ಪಡೆದಿದ್ದರು. 1999ರಲ್ಲಿ ಮಹಿಳಾ ಪೇದೆಯೊಬ್ಬರು ತಮ್ಮ ಬಗ್ಗೆ ಅನುಚಿತ ಹೇಳಿಕೆ ನೀಡಿ, ತಮ್ಮೊಂದಿಗೆ ಅಕ್ರಮ ಸಂಬಂಧಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಜೊತೆಗೆ, ಅರ್ಜಿದಾರರು ಇನ್ನಿಬ್ಬರು ಮಹಿಳೆಯರಿಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದೂ ದೂರಿದ್ದರು.

 ಅರ್ಜಿದಾರರ ವಿರುದ್ಧ ನಡೆದ ಎರಡು ಪ್ರಾಥಮಿಕ ತನಿಖೆಗಳ ವೇಳೆ ಅವರು ದೋಷಮುಕ್ತರಾಗಿದ್ದರು. ಆದರೆ, ಮಹಿಳಾ ಅಧಿಕಾರಿಯೊಬ್ಬರಿಂದ ನಡೆಸಲಾದ ಮೂರನೇ ತನಿಖೆಯಲ್ಲಿ ಮಹಿಳೆಯ ದೂರು ನಿಜ ಎಂಬಂತೆ ತೋರುತ್ತದೆ ಎಂದು ತೀರ್ಮಾನಕ್ಕೆ ಬರಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಯನ್ನು 2005ರಲ್ಲಿ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು.

ಇದನ್ನು ಅರ್ಜಿದಾರರು 2006ರಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮೊದಲ ಎರಡು ವಿಚಾರಣೆಗಳು ಅರ್ಜಿದಾರರನ್ನು ದೋಷಮುಕ್ತಗೊಳಿಸಿದ ನಂತರ, ಅವರ ವಿರುದ್ಧ ಮೂರನೇ ಬಾರಿಗೆ ತನಿಖೆ ನಡೆಸಿದ್ದು ಸಮರ್ಥನೀಯವಲ್ಲ ಎಂದು ಡಿಸೆಂಬರ್ 19 ರಂದು ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ.

ದೂರುದಾರೆಯ ಪತ್ರದಲ್ಲಿ ಅಸ್ಪಷ್ಟತೆ ಇದ್ದು ಪ್ರತಿಕಾರದ ಅಂಶಗಳಿವೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಮತ್ತಿಬ್ಬರು ಮಹಿಳೆಯರು ಮಾಡಿದ ಕಿರುಕುಳ ಆರೋಪ ಸಾಬೀತಾಗಿಲ್ಲ ಎಂದು ಪೀಠ ನುಡಿಯಿತು.

ಅರ್ಜಿದಾರರ ವಿರುದ್ಧ ದೂರುದಾರರು ಮಾಡಿರುವ ಆರೋಪಗಳು ಯಾವುದೋ ದುರುದ್ದೇಶದಿಂದ ಪ್ರೇರಿತವಾಗಿವೆ ಎಂದು ನ್ಯಾಯಾಲಯ ತೀರ್ಮಾನಿತು. ಈ ಹಿನ್ನೆಲೆಯಲ್ಲಿ, ಹೈಕೋರ್ಟ್ 2005ರ ಕಡ್ಡಾಯ ನಿವೃತ್ತಿ ಆದೇಶವನ್ನು ರದ್ದುಗೊಳಿಸಿದ ಅದು, ಅರ್ಜಿದಾರರು ನಿವೃತ್ತಿ ವಯಸ್ಸಿನವರೆಗೆ ಸಿಐಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿದ್ದಂತೆ ಪರಿಗಣಿಸಬೇಕು ಎಂದು ಆದೇಶಿಸಿತು. ಅದಕ್ಕೆ ಅನುಗುಣವಾಗಿ ಅವರ ಪಿಂಚಣಿ ಸೌಲಭ್ಯವನ್ನೂ  ಪರಿಷ್ಕರಿಸುವಂತೆ ಆದೇಶ ನೀಡಿತು.