ನಟ ನಂದಮೂರಿ ತಾರಕ ರಾಮರಾವ್ ಜೂನಿಯರ್ (ಜ್ಯೂನಿಯರ್ ಎನ್‌ಟಿಆರ್) ಅವರ ಹೆಸರನ್ನು ಬಳಸಿಕೊಂಡು ಅನಧಿಕೃತವಾಗಿ ವಸ್ತುಗಳನ್ನು ಮಾರಾಟ ಮಾಡದಂತೆ ವಿವಿಧ ವ್ಯಾಪಾರಸ್ಥರು ಹಾಗೂ ಇ ವಾಣಿಜ್ಯ ಕಂಪೆನಿಗಳಿಗೆ ದೆಹಲಿ ಹೈಕೋರ್ಟ್ ತಡೆ ಆದೇಶ ನೀಡಿದೆ [ನಂದಮೂರಿ ತಾರಕ ರಾಮರಾವ್ ಜ್ಯೂನಿಯರ್ ಮತ್ತು ಅನಾಮಧೇಯ ವ್ಯಕ್ತಿಗಳ ನಡುವಣ ಪ್ರಕರಣ] .
ಎನ್‌ಟಿಆರ್ ಜೂನಿಯರ್ ಅವರು ಭಾರತದಲ್ಲಿ ವ್ಯಾಪಕವಾಗಿ ಪ್ರಸಿದ್ಧಿ ಪಡೆದ ವ್ಯಕ್ತಿಯಾಗಿದ್ದು ಅವರಿಗೆ ಖ್ಯಾತನಾಮರ ಸ್ಥಾನಮಾನ ಇದೆ. ಈ ಖ್ಯಾತನಾಮರ ಸ್ಥಾನಮಾನ ಸ್ವಾಭಾವಿಕವಾಗಿಯೇ ಅವರ ವ್ಯಕ್ತಿತ್ವ ಮತ್ತು ಅದರೊಂದಿಗೆ ಸಂಬಂಧಿಸಿದ ಲಕ್ಷಣಗಳಿಗೆ ಹಕ್ಕು ಸ್ವಾಮ್ಯ ಒದಗಿಸುತ್ತದೆ ಎಂದು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರು ಹೇಳಿದರು.
“ಮೇಲ್ನೋಟಕ್ಕೆ ದಾವೆದಾರರ ಹೆಸರು, ರೂಪಸಾದೃಶ್ಯ ಹಾಗೂ ಚಿತ್ರವನ್ನು ಒಳಗೊಂಡಂತೆ ಅವರ ವ್ಯಕ್ತಿತ್ವದ ಲಕ್ಷಣಗಳು ಮತ್ತು/ಅಥವಾ ಅದರ ಅಂಶಗಳು, ದಾವೆದಾರರ ವ್ಯಕ್ತಿತ್ವ ಹಕ್ಕುಗಳ ಅಡಿಯಲ್ಲಿ ರಕ್ಷಿಸಬಹುದಾದ ಅಂಶಗಳಾಗಿವೆ. ಅನುಮತಿ ಇಲ್ಲದೆ, ಮೂರನೇ ವ್ಯಕ್ತಿಗಳು ತಮ್ಮ ವಾಣಿಜ್ಯ ಲಾಭಕ್ಕಾಗಿ ದಾವೆದಾರರ ವ್ಯಕ್ತಿತ್ವ ಹಕ್ಕುಗಳನ್ನು ಬಳಸಿ ಸರಕುಗಳನ್ನು ಮಾರಾಟ ಮಾಡಿದಲ್ಲಿ, ಅದರ ವಿರುದ್ಧ ಪ್ರತಿಬಂಧಕಾಜ್ಞೆಗೆ (ಇಂಜಂಕ್ಷನ್) ಮನವಿ ಮಾಡುವ ಹಕ್ಕು ದಾವೆದಾರರಿಗೆ ಇದೆ” ಎಂದು ನ್ಯಾಯಾಲಯ ತೀರ್ಪು ನೀಡಿತು.
ಹೀಗಾಗಿ ಹಕ್ಕು ಉಲ್ಲಂಘನೆ ಮಾಡಲಾಗಿರುವ ಲಿಂಕ್‌ಗಳನ್ನು ತೆಗೆದುಹಾಕುವಂತೆ ನಿರ್ದೇಶಿಸಿದ ನ್ಯಾಯಾಲಯ ಮಾರಾಟಕ್ಕೆ ಸಹಾಯ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಇ- ವಾಣಿಜ್ಯ ವೇದಿಕೆಗಳಿಗೆ ಅದು ನಿರ್ದೇಶಿಸಿತು.
“ದಾವೆದಾರರ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸಿ ತಮ್ಮ ಜಾಲತಾಣಗಳಲ್ಲಿ ಪ್ರಚಾರ ಮಾಡಿ ಮಾರಾಟಕ್ಕೆ ಇಡಲಾಗಿರುವ ವಸ್ತುಗಳನ್ನು ಸರಕು ಪಟ್ಟಿಯಿಂದ ತೆಗೆದುಹಾಕಬೇಕು” ಎಂದು ನ್ಯಾಯಾಲಯ ಸೂಚಿಸಿತು.
ಅಲ್ಲದೆ, ನ್ಯಾಯಾಲಯದ ಆದೇಶವಿಲ್ಲದೆ ದೂರುಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಅಮೆಜಾನ್, ಮೀಶೊ, ಫ್ಲಿಪ್‌ಕಾರ್ಟ್ ಮತ್ತು ಶಾಪ್ಸಿ ಸೇರಿದಂತೆ ಇ–ವಾಣಿಜ್ಯ ಜಾಲತಾಣಗಳು ತೆಗೆದುಕೊಂಡ ನಿಲುವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.ಇಂತಹ ಪ್ರಕರಣಗಳಲ್ಲಿ ಇ ವಾಣಿಜ್ಯ ಸಂಸ್ಥೆಗಳು ಕೈಕಟ್ಟಿ ಕೂರುವಂತಿಲ್ಲ ಎಂದು ಅದು ಎಚ್ಚರಿಕೆ ನೀಡಿತು.
“ಈ ಸಂಸ್ಥೆಗಳು ಮರುಮಾರಾಟಗಾರರ ಹಕ್ಕು ಉಲ್ಲಂಘನಾ ಕೃತ್ಯಗಳಿಗೆ ತಾವು ಜವಾಬ್ದಾರರಲ್ಲ ಎಂದು ಹೇಳಿ ಸುರಕ್ಷಿತ ಆಶ್ರಯವನ್ನು ಕೋರುತ್ತವೆ. ಆದರೆ, ದಾವೆದಾರರು ಅಥವಾ ದೂರುದಾರರು ಮಾರಾಟವಾಗುತ್ತಿರುವ ವಸ್ತುಗಳು ತಮ್ಮ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ ಎಂದು ಸ್ಪಷ್ಟವಾಗಿ ಇ ವಾಣಿಜ್ಯ ಸಂಸ್ಥೆಗಳಿಗೆ ದೂರು ಸಲ್ಲಿಸಿದ್ದಲ್ಲಿ, ಈ ನ್ಯಾಯಾಲಯದ ಅಭಿಪ್ರಾಯದಲ್ಲಿ ಇಂತಹ ಸಂಸ್ಥೆಗಳು ಕೈಕಟ್ಟಿ ಕೂರುವಂತಿಲ್ಲ,” ಎಂದು ನ್ಯಾಯಾಲಯ ವಿವರಿಸಿತು.
ನೋಂದಾಯಿತ ವಾಣಿಜ್ಯಚಿಹ್ನೆ ಹಾಗೂ ಹಕ್ಕುಸ್ವಾಮ್ಯ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ನಿರ್ವಹಿಸುವ ಕುರಿತು ತಮ್ಮ ಆಡಳಿತ ನೀತಿಯನ್ನು ವಿವರಗಳನ್ನು ದಾಖಲೆಯಲ್ಲಿ ನೀಡುವಂತೆ ಇ ವಾಣಿಜ್ಯ ಸಂಸ್ಥೆಗಳಿಗೆ ನ್ಯಾಯಾಲಯ ಇದೇ ವೇಳೆ ನಿರ್ದೇಶನ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಮೇ 19 ರಂದು ನಡೆಯಲಿದೆ.