ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವ್ಯಕ್ತಿತ್ವ ಹಕ್ಕು ರಕ್ಷಣೆ: ಮಧ್ಯಂತರ ಆದೇಶ ಹೊರಡಿಸಿದ ದೆಹಲಿ ಹೈಕೋರ್ಟ್

ಅಭಿಮಾನಿ ಖಾತೆಗಳಿಂದಲೇ ಪವನ್ ಅವರ ವ್ಯಕ್ತಿತ್ವ ಹಕ್ಕು ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಅಭಿಮಾನಿ ಖಾತೆಯಿಂದ ವಸ್ತು ವಿಷಯ ಪ್ರಕಟಿಸಲಾಗುತ್ತಿದೆ ಎಂಬ ಹಕ್ಕು ತ್ಯಾಗ ಘೋಷಣೆ ಸೇರಿಸುವಂತೆ ನ್ಯಾಯಾಲಯ ನಿರ್ದೇಶಿಸಿತು.
Pawan Kalyan
Pawan KalyanFacebook
Published on

ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟರಾದ ಪವನ್ ಕಲ್ಯಾಣ್ ಅವರ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ [ಶ್ರೀ ಕೊನಿದಲ ಪವನ್ ಕಲ್ಯಾಣ್ ಮತ್ತು ಅನಾಮಧೇಯ ವ್ಯಕ್ತಿಗಳು ಇನ್ನಿತರರ ನಡುವಣ ಪ್ರಕರಣ].

ಪವನ್ ಕಲ್ಯಾಣ್ ಅವರ ವ್ಯಕ್ತಿತ್ವ ಹಕ್ಕುಗಳನ್ನು ಅನುಮತಿಯಿಲ್ಲದೆ ದುರುಪಯೋಗಪಡಿಸಿಕೊಳ್ಳದಂತೆ ಅಥವಾ ಅವರ ಚಿತ್ರವನ್ನು ಅನುಮತಿಯಿಲ್ಲದೆ ಮಾರಾಟ ಮಾಡದಂತೆ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರು ವಿವಿಧ ಜಾಲಾತಾಣಗಳಿಗೆ ನಿರ್ಬಂಧ ವಿಧಿಸಿದ್ದಾರೆ.

Also Read
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವ್ಯಕ್ತಿತ್ವ ಹಕ್ಕು ಉಲ್ಲಂಘನೆ: ವಾರದೊಳಗೆ ಕ್ರಮಕ್ಕೆ ದೆಹಲಿ ಹೈಕೋರ್ಟ್ ಆದೇಶ

ಪ್ರತಿವಾದಿಗಳು ದಾವೆದಾರರ ಗುಣಲಕ್ಷಣಗಳನ್ನು ಅನುಮತಿ ಇಲ್ಲದೆ ಬಳಸಿರುವುದು ಮೇಲ್ನೋಟಕ್ಕೆ ದಾವೆದಾರರ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆಗೆ ಸಮ ಎಂದು ನ್ಯಾಯಾಲಯ ಹೇಳಿದೆ.

ಪ್ರತಿವಾದಿಗಳು ಕೃತಕ ಬುದ್ಧಿಮತ್ತೆ (ಎಐ), ಡೀಪ್‌ಫೇಕ್‌, ಮಾರ್ಫಿಂಗ್ ಅಥವಾ ಡಿಜಿಟಲ್ ಸಂಕಲನ ಸೇರಿದಂತೆ ಯಾವುದೇ ತಂತ್ರಜ್ಞಾನ ಬಳಸಿಕೊಂಡು ಪವನ್ ಕಲ್ಯಾಣ್ ಅವರ ಹೆಸರು, ಚಿತ್ರ, ಸಾದೃಶ್ಯ ಅಥವಾ ಧ್ವನಿಯನ್ನು ವಾಣಿಜ್ಯ ಲಾಭಕ್ಕಾಗಿ ಅನುಮತಿಯಿಲ್ಲದೆ ಬಳಸುವಂತಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಇರುವ ಅಭಿಮಾನಿ ಖಾತೆಗಳ ಮೂಲಕ ಪವನ್ ಕಲ್ಯಾಣ್ ಅವರ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂಬ ಆರೋಪಗಳನ್ನೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಈ ಹಿನ್ನೆಲೆಯಲ್ಲಿ ಅಭಿಮಾನಿ ಖಾತೆಯಿಂದ ವಸ್ತು ವಿಷಯ ಪ್ರಕಟಿಸಲಾಗುತ್ತಿದೆ ಎಂಬ ಹಕ್ಕು ತ್ಯಾಗ ಘೋಷಣೆ ಸೇರಿಸುವಂತೆ ಅದು ನಿರ್ದೇಶಿಸಿತು.

 “ಖಾತೆ ಮಾಲೀಕರು ತಮ್ಮ ಪ್ರೊಫೈಲ್ ವಿವರಣೆಯಲ್ಲಿ ಅದು ‘ಅಭಿಮಾನಿ ಖಾತೆ’ ಎಂಬ ಹಕ್ಕು ತ್ಯಾಗದ ಸಾಲನ್ನು ಸ್ಪಷ್ಟವಾಗಿ ಸೇರಿಸಿದರೆ, ಆ ಖಾತೆಗಳ ವಿರುದ್ಧ ತೆಗೆದುಹಾಕುವ ಕ್ರಮ ಕೈಗೊಳ್ಳುವ ಅಗತ್ಯ ಬರುವುದಿಲ್ಲ ಎಂದು ಪೀಠ ಹೇಳಿದೆ.

ಅಲ್ಲದೆ, ಮೆಟಾ ಮತ್ತು ಗೂಗಲ್ ಸಂಸ್ಥೆಗಳು ಇಂತಹ ಖಾತೆಗಳ ಮೂಲ ಚಂದಾದಾರರ ಮಾಹಿತಿ ವಿವರಗಳನ್ನು ಮೂರು ವಾರಗಳೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಆದೇಶಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಮೇ 12ರಂದು ನಡೆಯಲಿದೆ.

Also Read
ವ್ಯಕ್ತಿತ್ವ ಹಕ್ಕು ರಕ್ಷಣೆ: ಖ್ಯಾತನಾಮರೆಲ್ಲಾ ದೆಹಲಿ ಹೈಕೋರ್ಟ್‌ಗೆ ಮಾತ್ರವೇ ಅರ್ಜಿ ಸಲ್ಲಿಸುವುದೇಕೆ?

ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಇ- ವಾಣಿಜ್ಯ ಸಂಸ್ಥೆಗಳಲ್ಲಿನ ಹಲವು ಜಾಲತಾಣಗಳಲ್ಲಿ ವಿವಿಧ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಂದ ತಮ್ಮ ಅನುಮತಿ ಇಲ್ಲದೆ ತಮ್ಮ ವ್ಯಕ್ತಿತ್ವದ ಅಂಶಗಳನ್ನು ವಾಣಿಜ್ಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದಾರೆ ಎಂದು ಪವನ್ ಆರೋಪಿಸಿದ್ದರು.

ಎಐ ಮೂಲಕ ತಮ್ಮ ಧ್ವನಿ ನಕಲು, ಡೀಪ್‌ಫೇಕ್‌ಗಳ ಮೂಲಕ ಅನುಕರಣೆ ಹಾಗೂ ಟಿ-ಶರ್ಟ್‌, ಮಗ್‌, ಕೀ ಚೈನ್‌ಗಳಂತಹ ವಸ್ತುಗಳಲ್ಲಿ ತಮ್ಮ ಚಿತ್ರ ಹಾಗೂ ವ್ಯಕ್ತಿತ್ವದ ಅಂಶಗಳನ್ನು ಬಳಸಿ  ಮಾರಾಟ ಮಾಡಲಾಗುತ್ತಿದೆ ಎಂದು ಅವರು ವಾದಿಸಿದ್ದರು.

Kannada Bar & Bench
kannada.barandbench.com