Saket Gokhale, Lakshmi Puri  Instagram
ಸುದ್ದಿಗಳು

ಲಕ್ಷ್ಮಿ ಪುರಿ ಮಾನಹಾನಿ ಪ್ರಕರಣ: ಸಾಕೇತ್ ಗೋಖಲೆ ವಿರುದ್ಧದ ಆದೇಶ ಹಿಂಪಡೆಯಲು ದೆಹಲಿ ಹೈಕೋರ್ಟ್ ನಕಾರ

ಸ್ವಿಟ್ಜರ್‌ಲೆಂಡ್‌ನಲ್ಲಿ ಆದಾಯ ಮೀರಿದ ಆಸ್ತಿ ಖರೀದಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಅವರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಮೊಕದ್ದಮೆ ಹೂಡಿದ್ದರು.

Bar & Bench

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ ಹಾಗೂ ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಪುರಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಅವರು ₹50 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ ತೀರ್ಪನ್ನು ಹಿಂಪಡೆಯಲು ದೆಹಲಿ ಹೈಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ಈ ಸಂಬಂಧ ಸಾಕೇತ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ತಿರಸ್ಕರಿಸಿದರು.

"ನೀವು ತುಂಬಾ ಚೆನ್ನಾಗಿ ವಾದಿಸಿದ್ದೀರಿ ಆದರೆ ನಾವು ನಿಮಗೆ ಸಹಾಯ ಮಾಡಲಾಗದು. ನಿಮ್ಮ ಎರಡೂ ಅರ್ಜಿಗಳನ್ನು ನಾವು ತಿರಸ್ಕರಿಸಬೇಕಾಗಿದೆ " ಎಂದು ನ್ಯಾಯಾಲಯವು ಗೋಖಲೆ ಅವರ ವಕೀಲರಿಗೆ ತಿಳಿಸಿದೆ.

ಮೊಕದ್ದಮೆಯ ನೋಟಿಸ್ ಬೇರೆ ಯಾವುದೋ ವಿಳಾಸಕ್ಕೆ ಹೋಗಿದೆ ಎಂಬ ಗೋಖಲೆ ಅವರ ವಾದವನ್ನು ನ್ಯಾಯಾಲಯ ಇದೇ ವೇಳೆ ತಿರಸ್ಕರಿಸಿತು. ಅವರ ಪರ ವಕೀಲರು ನ್ಯಾಯಾಲಯದ ಮುಂದೆ ಹಾಜರಾಗಿ ಈಗಾಗಲೇ ವಕಾಲತ್‌ನಾಮ ಸಲ್ಲಿಸಿದ್ದಾರೆ ಎಂಬುದನ್ನು ಗಮನಿಸಿದ ಅದು, ಒಮ್ಮೆ ಪ್ರತಿವಾದಿಯು ಹಾಜರಾದ ನಂತರ ನೋಟಿಸ್‌ ನೀಡಲಾಗಿದೆಯೇ ಇಲ್ಲವೆ ಎಂಬುದು ಮುಖ್ಯವಾಗುವುದಿಲ್ಲ ಎಂದಿತು. ಆದೇಶ ಹಿಂಪಡೆಯಲು ಕೋರಿರುವ ಅರ್ಜಿಯನ್ನು ತಡವಾಗಿ ಸಲ್ಲಿಸಿರುವ ಬಗ್ಗೆಯೂ ಅದು ಪ್ರಶ್ನಿಸಿತು.

ಲಕ್ಷ್ಮಿ ಪುರಿ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ಆದಾಯ ಮೀರಿದ ಆಸ್ತಿ  ಖರೀದಿಸಿದ್ದಾರೆ ಎಂದು ಸಾಕೇತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಮಾಜಿ ರಾಜತಂತ್ರಜ್ಞೆ ಲಕ್ಷ್ಮಿ ಮೊಕದ್ದಮೆ ಹೂಡಿದ್ದರು.

ಗೋಖಲೆ ಅವರು ಲಕ್ಷ್ಮಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಜುಲೈ 1, 2024ರಂದು ಹೈಕೋರ್ಟ್‌ ತೀರ್ಪು ನೀಡಿತ್ತು. ಲಕ್ಷ್ಮಿ ಅವರಿಗೆ ₹50 ಲಕ್ಷ ಪರಿಹಾರ ನೀಡಬೇಕು ಜೊತೆಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಕ್ಷಮೆಯಾಚನೆ ಪ್ರಕಟಿಸಬೇಕು ಎಂದು ಆದೇಶಿಸಿತ್ತು.

ಈ ತೀರ್ಪಿನ ವಿರುದ್ಧ ಗೋಖಲೆ ಅವರು ನಾಗರಿಕ ಪ್ರಕ್ರಿಯಾ ಸಂಹಿತೆಯ ಆದೇಶ IX ನಿಯಮ 13ರ ಅಡಿ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.  ಮತ್ತೊಂದೆಡೆ, ಲಕ್ಷ್ಮಿ ಪುರಿ ಜುಲೈ 2024ರ ತೀರ್ಪನ್ನು ಜಾರಿಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ನೀಡಿದ್ದ ಆದೇಶವನ್ನು ಪಾಲಿಸಲು ಸಂಸದ ಸಾಕೇತ್‌ ಗೋಖಲೆ ವಿಫಲರಾಗಿರುವ ಕಾರಣಕ್ಕೆ ಅವರ ವೇತನದ ಒಂದು ಭಾಗವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹೈಕೋರ್ಟ್‌ ಆದೇಶಿಸಿತ್ತು.

ಕಳೆದ ವರ್ಷ ನೀಡಿದ್ದ ತೀರ್ಪಿನಲ್ಲಿ ನೀಡಲಾದ ನಿರ್ದೇಶನ ಪಾಲಿಸದಿದ್ದಕ್ಕಾಗಿ ಲಕ್ಷ್ಮಿ ಪುರಿ ಅವರು ಗೋಖಲೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನೂ ಹೂಡಿದ್ದಾರೆ.