Facebook, Google, Amazon 
ಸುದ್ದಿಗಳು

ಹಣಕಾಸು ವಲಯಕ್ಕೆ ಫೇಸ್‌ಬುಕ್, ಗೂಗಲ್, ಅಮೆಜಾನ್ ಪ್ರವೇಶ: ಕೇಂದ್ರದ ಪ್ರತಿಕ್ರಿಯೆ ಬಯಸಿದ ದೆಹಲಿ ಹೈಕೋರ್ಟ್‌

ʼಟೆಕ್‌-ಫಿನ್‌ʼ ಕಂಪೆನಿಗಳ ಹಣಕಾಸು ವಲಯ ಪ್ರವೇಶ ಮತ್ತು ಕಾರ್ಯಾಚರಣೆ ನಿಯಂತ್ರಿಸಲು ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಮತ್ತು ಆರ್‌ಬಿಐಗೆ ನಿರ್ದೇಶನ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ.

Bar & Bench

ಹಣಕಾಸು ಕ್ಷೇತ್ರದಲ್ಲಿ ಫೇಸ್‌ಬುಕ್, ಗೂಗಲ್, ಅಮೆಜಾನ್‌ನಂತಹ ʼಟೆಕ್‌-ಫಿನ್‌ʼ ಕಂಪೆನಿಗಳ ಪ್ರವೇಶ ಮತ್ತು ಕಾರ್ಯಾಚರಣೆ ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್‌ಗೆ ನಿರ್ದೇಶನ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಈ ಸಂಬಂಧ ಬುಧವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿದೆ. ಇದಲ್ಲದೆ ಸೆಬಿ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮತ್ತು ಪಿಂಚಣಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಗಳೂ ಪ್ರತಿಕ್ರಿಯೆ ನೀಡಬೇಕೆಂದು ತಿಳಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರಿದ್ದ ವಿಭಾಗೀಯ ಪೀಠ‌ ಅರ್ಜಿಯ ವಿಚಾರಣೆ ನಡೆಸಿತು. ಅನ್ವಯಿಕ ಅರ್ಥಶಾಸ್ತ್ರ ಅಧ್ಯಯನ ಮಾಡಿರುವ ಅರ್ಜಿದಾರರಾದ ಡಾ. ರೆಶ್ಮಿ ಪಿ ಭಾಸ್ಕರನ್‌ “ಭಾರತೀಯ ಹಣಕಾಸು ನಿಯಂತ್ರಕರ ಪ್ರಸ್ತುತ ವಿಧಾನ ʼಅನಿಯಂತ್ರಿತʼವಾಗಿದೆ. ಏಕೆಂದರೆ ಅವರು ʼಅನಿಯಂತ್ರಿತʼ ಕಾರ್ಯಾಚರಣೆಗೆ ಮತ್ತು ಜಾಗತಿಕ ತಾಂತ್ರಿಕ ಕಂಪನಿಗಳ ಪ್ರವೇಶಕ್ಕೆ ಅನುಮತಿ ನೀಡುತ್ತಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ಸಮರ್ಪಿತ ನಿಬಂಧನೆಗಳ ಅನುಪಸ್ಥಿತಿಯಿಂದಾಗಿ ಪರವಾನಗಿ ಪಡೆಯದ ಹಣಕಾಸು ಸಂಸ್ಥೆಗಳು (ಅಂದರೆ ಟೆಕ್ ದೈತ್ಯರು) ಅಸ್ತಿತ್ವದಲ್ಲಿರುವ ಘಟಕಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಆರ್ಥಿಕ ಕ್ಷೇತ್ರ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ನಿಯಂತ್ರಿತ ಹಣಕಾಸು ಸಂಸ್ಥೆಗಳೊಂದಿಗೆ ಹಲವಾರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

"ಅಂತಹ ಟೆಕ್‌ಫಿನ್‌ಗಳು ವ್ಯವಸ್ಥಿತ ಅಪಾಯಗಳ ತಡೆ ಖಚಿತಪಡಿಸುವಂತಹ ಯಾವುದೇ ಕಕ್ಷೀದಾರ/ ಗ್ರಾಹಕ / ಹೂಡಿಕೆದಾರರ ಸಂರಕ್ಷಣಾ ನಿಯಮಗಳು ಅಥವಾ ನಿಬಂಧನೆಗಳಿಗೆ ಒಳಪಡುವುದಿಲ್ಲ" ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಮಾಹಿತಿ ಗೌಪ್ಯತೆ ಸಮಸ್ಯೆ ಕುರಿತಂತೆಯೂ ತಕರಾರು ಎತ್ತಿರುವ ಅರ್ಜಿದಾರರು, “ಗ್ರಾಹಕರ ಬಗ್ಗೆ ಹೆಚ್ಚು ನಿಖರವಾದ, ವಿವರವಾದ ಮತ್ತು ವ್ಯಾಪಕವಾದ ಡಿಜಿಟಲೀಕರಣಗೊಂಡ ಮಾಹಿತಿಯನ್ನು ಹೊಂದಿರುವ ಟೆಕ್‌-ಫಿನ್‌ ಘಟಕಗಳು ಗ್ರಾಹಕರ ನಿರ್ಧಾರದ ಮೇಲೆ ಪ್ರಭಾವ ಬೀರಿ ಸಾಂಪ್ರದಾಯಿಕ ಹಣಕಾಸು ಸಂಸ್ಥೆಗಳಿಂದ ಅನಗತ್ಯ ಪ್ರಯೋಜನ ಪಡೆಯುತ್ತವೆ ಎಂದು ಹೇಳಿದ್ದಾರೆ.

ಅರ್ಜಿದಾರರು ಟೆಕ್‌-ಫಿನ್‌ ಪ್ರವೇಶ ಮತ್ತು ಕಾರ್ಯಾಚರಣೆಗಾಗಿ ಕಟ್ಟುನಿಟ್ಟಾದ ಮತ್ತು ದೃಢವಾದ ಚೌಕಟ್ಟನ್ನು ರೂಪಿಸಬೇಕೆಂದು ಕೋರಿದ್ದಾರೆ. ನ್ಯಾಯವಾದಿ ದೀಪಕ್‌ ಮಿಶ್ರಾ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದ್ದು ಜನವರಿ 29ಕ್ಕೆ ಮತ್ತೆ ಅರ್ಜಿಯ ವಿಚಾರಣೆ ನಡೆಯಲಿದೆ.