HDFC Bank 
ಸುದ್ದಿಗಳು

ಅನಧಿಕೃತವಾಗಿ ₹74 ಲಕ್ಷ ಹಣ ವರ್ಗಾವಣೆ: ಎಚ್‌ಡಿಎಫ್‌ಸಿ, ಆರ್‌ಬಿಐ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

ನೋಂದಾಯಿತ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ತಿರುಚಿ ತನ್ನ ಖಾತೆಯಿಂದ ₹74 ಲಕ್ಷ ಹಣ ಬಿಡಿಸಿಕೊಳ್ಳಲಾಗಿದೆ ಎಂದು ಗ್ರಾಹಕರೊಬ್ಬರು ದೂರಿದ್ದರು.

Bar & Bench

ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ವಂಚನೆ ಮೂಲಕ ಹಣ ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪ್ರತಿಕ್ರಿಯೆ ಕೇಳಿದೆ [ಮನಮೋಹನ್‌ ಕುಮಾರ್‌ ಮತ್ತು ಆರ್‌ಬಿಐ ಇನ್ನಿತರರ ನಡುವಣ ಪ್ರಕರಣ]

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ವಂಚನೆ ಮೂಲಕ ನಡೆಸಲಾಗಿರುವ ವಹಿವಾಟನ್ನು ರದ್ದುಗೊಳಿಸಲು ಹಾಗೂ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕಾಸ್ ಮಹಾಜನ್ ನೋಟಿಸ್ ಜಾರಿ ಮಾಡಿದ್ದಾರೆ.

ತಮ್ಮ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ₹74,61,990 ಮೊತ್ತವನ್ನು ವಂಚನೆಯಿಂದ ಬಿಡಿಸಿಕೊಳ್ಳಲಾಗಿದೆ ಎಂದು ಅರ್ಜಿದಾರರಾದ ಮನಮೋಹನ್ ಕುಮಾರ್ ದೂರಿದ್ದರು. ತನ್ನ ಖಾತೆಗೆ ಜೋಡಿಸಲಾಗಿದ್ದ ನೋಂದಾಯಿತ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ತಿರುಚಿ ಹಣ ಪಡೆಯಲಾಗಿದೆ ಎಂದು ಅವರು ಹೇಳಿದ್ದರು.

ಎಚ್‌ಡಿಎಫ್‌ಸಿ ಆರಂಭದಲ್ಲಿ ವಹಿವಾಟನ್ನು ರದ್ದುಗೊಳಿಸಿ ಹಣವನ್ನು ಅರ್ಜಿದಾರರ ಖಾತೆಗೆ ಮರಳಿ ಹಾಕಿತ್ತು. ಆದರೆ ನಂತರ ಬ್ಯಾಂಕ್  ವಂಚನೆಯ ವಹಿವಾಟು ನಡೆದಿಲ್ಲ ಎಂದು ತಿಳಿಸಿ ಹಣವನ್ನು ವಾಪಸ್ ಪಡೆದಿತ್ತು. ತನ್ನ ಸೇವೆಗಳಲ್ಲಿ ಕೊರತೆ ಉಂಟಾಗಿಲ್ಲ. ವಹಿವಾಟಿಗೆ ಸಂಬಂಧಿಸಿದಂತೆ ಒಟಿಪಿ ದೃಢೀಕರಿಸಲಾಗಿದೆ ಎಂದು ಅದು ಕುಮಾರ್ ಅವರಿಗೆ ತಿಳಿಸಿತ್ತು. ನಂತರ, ಕುಮಾರ್ ಆರ್‌ಬಿಐನ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸಿದ್ದರು. ಅದು ಕೂಡ ಎಚ್‌ಡಿಎಫ್‌ಸಿಯ ತಪ್ಪಿಲ್ಲ ಎಂದು ತೀರ್ಪು ನೀಡಿತು. ಹೀಗಾಗಿ ಅವರು ಹೈಕೋರ್ಟ್‌ ಕದ ತಟ್ಟಿದ್ದರು.

ವಂಚನೆ ಮೂಲಕ ವರ್ಚುವಲ್‌ ಡೆಬಿಟ್‌ ಕಾರ್ಡ್‌ ಸೃಷ್ಟಿಯಾಗಿರುವುದನ್ನು ಮತ್ತು ನೋಂದಾಯಿತ ಸಂಪರ್ಕ ವಿವರಗಳ ಅನಧಿಕೃತ ಬದಲಾವಣೆಗೆ ಯಾವುದೇ ವಿವರಣೆ ನೀಡದ ಬ್ಯಾಂಕ್ ತನ್ನ ಕಕ್ಷಿದಾರರ ಮೇಲೆ ಆರೋಪ ಹೊರಿಸಲು ಯತ್ನಿಸುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಅರ್ಜಿದಾರ ಈ ಯಾವುದೇ ವಿವರಗಳನ್ನು ಯಾರೊಂದಿಗೂ ಹಂಚಿಕೊಂಡಿಲ್ಲ ಎಂದು ಅವರು ತಿಳಿಸಿದರು.