Homeless people  Image for representative purpose
ಸುದ್ದಿಗಳು

ಶೀತಗಾಳಿ: ರಾತ್ರಿ ಆಶ್ರಯ ಕೇಂದ್ರಗಳಲ್ಲಿನ ಅಸಮರ್ಪಕ ಸೌಲಭ್ಯಗಳ ಬಗ್ಗೆ ದೆಹಲಿ ಹೈಕೋರ್ಟ್‌ ಸ್ವಯಂ ಪ್ರೇರಿತ ಪ್ರಕರಣ

ಆಶ್ರಯ ಕೇಂದ್ರಗಳಲ್ಲಿ ಅಗತ್ಯವಿರುವ ಸಮರ್ಪಕ ಸೌಲಭ್ಯಗಳನ್ನು ಒದಗಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

Bar & Bench

ತೀವ್ರ ಶೀತ ಗಾಳಿಯಿಂದ ತತ್ತರಿಸಿರುವ ದೆಹಲಿಯಲ್ಲಿನ ರಾತ್ರಿ ಆಶ್ರಯ ಕೇಂದ್ರಗಳಲ್ಲಿ ಸ್ಥಳಾವಕಾಶ ಮತ್ತು ಸೌಲಭ್ಯದ ಕೊರತೆ ಇರುವ ಹಿನ್ನೆಲೆಯಲ್ಲಿ, ದೆಹಲಿ ಹೈಕೋರ್ಟ್ ಸೋಮವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠ ಸೂಚಿಸಿತು.  

ಕೊರೆಯುವ ಚಳಿಯಿಂದ ನಗರ ವಾಸಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳುವ ನಿರೀಕ್ಷೆ ಇದೆ ಎಂದು ನ್ಯಾಯಾಲಯ ಭರವಸೆ ವ್ಯಕ್ತಪಡಿಸಿತು.

"ದೇವರ ದಯೆಯಿಂದ ಅಂತಹ ಪರಿಸ್ಥಿತಿ ಬರಬಾರದಾದರೂ, ನಮ್ಮಲ್ಲಿ ಯಾರಾದರೂ ಒಂದು ರಾತ್ರಿ ಅಲ್ಲಿ ಉಳಿದರೆ ಏನಾಗುತ್ತದೆ ಎಂಬ ಕಲ್ಪನೆ ನಮಗಿಲ್ಲ. ಸಂವೇದನಾಶೀಲವಾಗಿ ವರ್ತಿಸಿ,” ಎಂದು ನ್ಯಾಯಾಲಯ ಪ್ರಾಧಿಕಾರಗಳಿಗೆ ತಿಳಿ ಹೇಳಿತು. ಪ್ರಕರಣವನ್ನು ಜನವರಿ 14ರಂದು ವಿಚಾರಣೆ ನಡೆಸಲಾಗುವುದು ಎಂದು ಅದು ತಿಳಿಸಿದೆ.

ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರನ್ನು ಒಳಗೊಂಡ ಮತ್ತೊಂದು ಪೀಠ ಪ್ರಕರಣವನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಹರಿಶಂಕರ್‌ ಮತ್ತು ಶುಕ್ಲಾ ಅವರು, ಜನವರಿ 11ರಂದು ದಿ ಹಿಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿತ್ತು.

ಪತ್ರಿಕೆಯಲ್ಲಿ ದೆಹಲಿಯ ತಾಪಮಾನ 5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಗೆ ಕುಸಿದಿದ್ದರೂ, ರಾತ್ರಿ ಆಶ್ರಯ ಕೇಂದ್ರಗಳಲ್ಲಿ ಜಾಗದ ಕೊರತೆಯಿಂದಾಗಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಚಿಕಿತ್ಸೆಗೆಂದು ಬರುವ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಏಮ್ಸ್‌ ಮೆಟ್ರೋ ನಿಲ್ದಾಣದ ಹೊರಗೆ ರಾತ್ರಿ ಕಳೆಯುತ್ತಿರುವುದು ವರದಿಯಾಗಿತ್ತು.

ಚಿಕಿತ್ಸೆಗಾಗಿ ಉತ್ತರ ಪ್ರದೇಶ, ಹರಿಯಾಣ, ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳಿಂದ ಬರುವ ಅನೇಕ ಮಂದಿಗೆ ಯಾವುದೇ ವಸತಿಗೃಹಗಳಲ್ಲಿ ತಂಗುವಷ್ಟು ಹಣಕಾಸಿನ ಸಾಮರ್ಥ್ಯ ಇರುವುದಿಲ್ಲ. ಆಶ್ರಯ ಕೇಂದ್ರಗಳಲ್ಲಿ ಸ್ಥಳಾವಕಾಶ, ಸೌಲಭ್ಯಗಳಿಲ್ಲದ ಈ ಮಂದಿ ಕೊರೆವ ಚಳಿಯಲ್ಲಿಯೇ ಬೀದಿಗಳಲ್ಲಿ ರಾತ್ರಿ ದೂಡಬೇಕಾಗಿರುವ ಬಗ್ಗೆ ವರದಿ ಗಮನ ಸೆಳೆದಿತ್ತು.