Delhi High Court  
ಸುದ್ದಿಗಳು

ಇಂಡೋನೇಷ್ಯಾದಲ್ಲಿ ಭಾರತೀಯರಿಗೆ ಗಲ್ಲುಶಿಕ್ಷೆ: ನೆರವಾಗಲು ವಿದೇಶಾಂಗ ಸಚಿವಾಲಯ, ದೂತಾವಾಸಕ್ಕೆ ದೆಹಲಿ ಹೈಕೋರ್ಟ್ ಸೂಚನೆ

ಶಿಕ್ಷೆಗೊಳಗಾದವರಿಗೆ ಮೇಲ್ಮನವಿ ಸಲ್ಲಿಸಲು ಸೂಕ್ತ ಕಾನೂನು ನೆರವು ನೀಡುವಂತೆ ಇಂಡೋನೇಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನಿರ್ದೇಶಿಸಿರುವ ಪೀಠ ಈ ವಿಚಾರವಾಗಿ ವಿದೇಶಾಂಗ ಸಚಿವಾಲಯ ರಾಜತಾಂತ್ರಿಕ ಯತ್ನ ಮುಂದುವರೆಸುವಂತೆ ಹೇಳಿದೆ.

Bar & Bench

ಮಾದಕವಸ್ತು ಹೊಂದಿದ್ದ ಕಾರಣಕ್ಕೆ ಇಂಡೋನೇಷ್ಯಾದಲ್ಲಿ ಮರಣದಂಡನೆಗೆ ಗುರಿಯಾಗಿರುವ ಮೂವರು ಭಾರತೀಯ ಪ್ರಜೆಗಳಿಗೆ ಕಾನೂನು ನೆರವು ನೀಡುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಭಾರತದ ವಿದೇಶಾಂಗ ಸಚಿವಾಲಯ ಮತ್ತು ಇಂಡೋನೇಷ್ಯದಲ್ಲಿರುವ ಭಾರತೀಯ ದೂತಾವಾಸಕ್ಕೆ ನಿರ್ದೇಶನ ನೀಡಿದೆ [ ಎನ್. ದೀಪಿಕಾ  ಮತ್ತಿತರರು ಹಾಗೂ ಭಾರತೀಯ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ ].

ಶಿಕ್ಷೆಗೊಳಗಾದವರಿಗೆ ಮೇಲ್ಮನವಿ ಸಲ್ಲಿಸಲು ಸೂಕ್ತ ಕಾನೂನು ನೆರವು ನೀಡುವಂತೆ ಇಂಡೋನೇಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನಿರ್ದೇಶಿಸಿರುವ ಪೀಠ ಈ ವಿಚಾರವಾಗಿ ವಿದೇಶಾಂಗ ಸಚಿವಾಲಯ ರಾಜತಾಂತ್ರಿಕ ಯತ್ನ ಮುಂದುವರೆಸುವಂತೆ ಹೇಳಿದೆ.

"ಅನ್ವಯವಾಗುವ ಅಂತರರಾಷ್ಟ್ರೀಯ ವಿಧಿ ವಿಧಾನಗಳು ಮತ್ತು ಭಾರತೀಯ ಪ್ರಜೆಗಳ ರಕ್ಷಣೆಗಾಗಿ ಇಂಡೋನೇಷ್ಯಾ ಸರ್ಕಾರದೊಂದಿಗೆ ರಾಜತಾಂತ್ರಿಕ ಮಟ್ಟದಲ್ಲಿ ಪ್ರಕರಣ ಮುಂದುವರೆಸಲು ವಿದೇಶಾಂಗ ಸಚಿವಾಲಯ, ಭಾರತ ಒಕ್ಕೂಟಕ್ಕೆ ನಿರ್ದೇಶಿಸಲಾಗಿದೆ" ಎಂದು ಪೀಠ ವಿವರಿಸಿದೆ.

ಮರಣದಂಡನೆ ಎದುರಿಸುತ್ತಿರುವ ಮೂವರು ಭಾರತೀಯ ಪ್ರಜೆಗಳಾದ ರಾಜು ಮುತ್ತುಕುಮಾರನ್, ಸೆಲ್ವದುರೈ ದಿನಕರನ್ ಮತ್ತು ಗೋವಿಂದಸಾಮಿ ವಿಮಲ್ಕಂಧನ್ ಅವರ ಪತ್ನಿಯರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸಚಿನ್ ದತ್ತ ಈ ಆದೇಶ ಹೊರಡಿಸಿದರು.

ಈ ಮೂವರು ಭಾರತೀಯರು ಇಂಡೋನೇಷ್ಯಾದ ಹಡಗುಕಟ್ಟೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವರದಿಗಳ ಪ್ರಕಾರ ಮಾದಕವಸ್ತು ಕ್ರಿಸ್ಟಲ್ ಮೆತ್ ಕಳ್ಳಸಾಗಣೆ ನಡೆಸಿದ ಆರೋಪದ ಮೇಲೆ ಅವರನ್ನು ಜುಲೈ 2024ರಲ್ಲಿ ಬಂಧಿಸಲಾಗಿತ್ತು. ಇಂಡೋನೇಷ್ಯಾದ ನ್ಯಾಯಾಲಯ ತಪ್ಪಿತಸ್ಥರೆಂದು ಪರಿಗಣಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.ಙ

ಹೀಗಾಗಿ ತುರ್ತು ಪರಿಹಾರ ಕೋರಿ ಅವರ ಪತ್ನಿಯರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಇಂಡೋನೇಷ್ಯಾದಲ್ಲಿ ಮೇಲ್ಮನವಿ ಸಲ್ಲಿಸಲು ಕೇವಲ ಏಳು ದಿನಗಳ ಕಾಲ ಮಿತಿ ಇದ್ದು ತಮಗೆ ತೀರ್ಪಿನ ಪ್ರತಿ ತಡವಾಗಿ ದೊರೆತಿದೆ. ಅಲ್ಲದೆ ಇಂಡೋನೇಷ್ಯದ ನ್ಯಾಯಾಲಯಗಳೆದುರು ಮೇಲ್ಮನವಿ ಸಲ್ಲಿಸಲು ತಾವು ಶಕ್ತರಲ್ಲ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.

ಶುಕ್ರವಾರ ಈ ಸಂಬಂಧ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿರುವ ನ್ಯಾ. ದತ್ತಾ ಅವರು ಮಂಗಳವಾರಕ್ಕೆ (ಮೇ 6) ಪ್ರಕರಣ ಮುಂದೂಡಿದರು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

N__Deepika___Ors_Vs_Union_of_India___Anr.pdf
Preview