ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕ್ಷೀಣಿಸುತ್ತಿರುವ ಗಾಳಿಯ ಗುಣಮಟ್ಟ ಕಾಪಾಡಿಕೊಳ್ಳುವುದಕ್ಕಾಗಿ ಕಾಮಗಾರಿಗಳ ಮೇಲೆ ವಿಧಿಸಿದ್ದ ನಿರ್ಬಂಧದಿಂದಾಗಿ ಜೀವನೋಪಾಯ ನಡೆಸಲು ದುಸ್ಸಾಧ್ಯವಾದ ಕಟ್ಟಡ ಕಾರ್ಮಿಕರಿಗೆ ಪರಿಹಾರ ನೀಡಲು ವಿಫಲವಾದ ದೆಹಲಿ ಮುಖ್ಯ ಕಾರ್ಯದರ್ಶಿ ಧರ್ಮೇಂದ್ರ ಅವರನ್ನು ಸುಪ್ರೀಂ ಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ [ವಾಯು ಗುಣಮಟ್ಟ ನಿರ್ವಹಣಾ ಆಯೋಗ (ವಾಯು ಮಾಲಿನ್ಯ) ಮತ್ತು ಜಿಆರ್‌ಎಪಿ IV ಜಾರಿ ಕುರಿತಾದ ಪ್ರಕರಣ].
ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ಅಧಿಕಾರಿಗಳು ನೋಂದಾಯಿತ ಕಾರ್ಮಿಕರಿಗಾದರೂ ಏಕೆ ಪೂರ್ಣ ಮೊತ್ತದ ಪರಿಹಾರ ಮೊತ್ತ ವಿತರಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಪ್ರಶ್ನಿಸಿತು.
ಹಣ ಪಾವತಿಗೆ ಮುಖ್ಯ ಕಾರ್ಯದರ್ಶಿಯವರು 10 ದಿನಗಳ ಕಾಲಾವಕಾಶ ಕೋರಿದರು. ಆಗ ನ್ಯಾಯಾಲಯ, “ಏಕೆ? ಬಾಕಿ ಮೊತ್ತವನ್ನು ನೀವು ಯಾವಾಗ ಪಾವತಿಸುತ್ತೀರಿ? ಕಾರ್ಮಿಕರಾಗಿ ಅವರ ಅಧಿಕೃತತೆಯನ್ನು ಪರಿಶೀಲಿಸಿರುವುದರಿಂದ ಅವರಿಗೆ ₹ 2000 ಪಾವತಿಸಲಾಗಿದೆಯೇ? ಕಾರ್ಮಿಕರು ಹಸಿವಿನಿಂದ ಸಾಯಬೇಕೆಂದು ನೀವು ಬಯಸುತ್ತೀರಾ? ನಾವು ನಿಮಗೆ ತಕ್ಷಣ ನ್ಯಾಯಾಂಗ ನಿಂದನೆ ನೋಟಿಸ್ ನೀಡುತ್ತಿದ್ದೇವೆ, ಪರಿಹಾರ ನೀಡಿಲ್ಲ. ಇದು ಕಲ್ಯಾಣ ರಾಜ್ಯ" ಎಂದು ನ್ಯಾಯಮೂರ್ತಿ ಓಕಾ ಹೇಳಿದರು.
ದೆಹಲಿಯ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಪೀಠದಲ್ಲಿ ನಡೆಯಿತು. ಪಕ್ಕದ ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೊಲಗದ್ದೆಗಳಲ್ಲಿ ಕೂಳೆ ಸುಡುವ ಪ್ರಕರಣಗಳನ್ನು ತಡೆಯಲು ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿದೆ. ಮಾಲಿನ್ಯ ತಡೆಯಲು ಜಿಆರ್‌ಎಪಿ ಹಂತ IVನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಈ ಹಿಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಈ ಸಂಬಂದ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ವ್ಯಾಪ್ತಿಯ ರಾಜ್ಯಗಳಾದ ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗಳು ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ಹಾಜರಾಗುವಂತೆ ಕಳೆದ ವಿಚಾರಣೆ ವೇಳೆ ಪೀಠ ತಾಕೀತು ಮಾಡಿತ್ತು.
ವಾಯು ಮಾಲಿನ್ಯದಿಂದಾಗಿ ಕಾಮಗಾರಿಗಳು ಸ್ಥಗಿತಗೊಂಡ ಪರಿಣಾಮ ಜೀವನೋಪಾಯ ನಡೆಸಲು ದುಸ್ಸಾಧ್ಯವಾದ ಕಟ್ಟಡ ಕಾರ್ಮಿಕರಿಗೆ ಪರಿಹಾರ ನೀಡಲು ರಾಷ್ಟ್ರೀಯ ರಾಜಧಾನಿ ಪ್ರದೇಶದ ವ್ಯಾಪ್ತಿಯ ರಾಜ್ಯಗಳು ವಿಫಲವಾಗಿರುವುದನ್ನು ಅದು ಗಂಭೀರವಾಗಿ ಪರಿಗಣಿಸಿತ್ತು.
ಇಂದು ನಡೆದ ವಿಚಾರಣೆ ವೇಳೆ ದೆಹಲಿ ಸರ್ಕಾರ ಮತ್ತು ದೆಹಲಿ ಮುಖ್ಯ ಕಾರ್ಯದರ್ಶಿ ಅವರ ಕಾರ್ಯವೈಖರಿ ಕುರಿತು ಕೆಂಡಾಮಂಡಲವಾಯಿತು.
ದೆಹಲಿ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ಶಾದಾನ್ ಫರಾಸತ್ ಅವರು ಕಾರ್ಮಿಕರಿಗೆ ತಲಾ ₹ 2000 ರೂಪಾಯಿ ಪಾವತಿಸಲಾಗಿದೆ. ಅಧಿಕಾರಿಗಳು ಏಕೆ ಪೂರ್ಪ ಪರಿಶೀಲನೆ ನಡೆಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಕಟ್ಟಡ ಕಾರ್ಮಿಕರಿಗೆ ₹ 6,000ಕ್ಕಿಂತ ಹೆಚ್ಚು ಸಿಗುತ್ತದೆ ಎಂದು ಹೇಳಿದರು.
ಈ ವೇಳೆ, ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರ ಪ್ರತ್ಯೇಕವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮೇನಕಾ ಗುರುಸ್ವಾಮಿ ಅವರು, ಕಾಯಿದೆಯನ್ವಯ ಪರಿಶೀಲನೆಯ ಅಗತ್ಯವಿದೆ ಎಂದರು. ಆದರೆ ಅದರ ಅವಶ್ಯಕತೆ ಇಲ್ಲ ಎಂದು ಫರಾಸತ್ ಪ್ರತಿವಾದಿಸಿದರು.
ವಿಚಾರಣೆಯ ಒಂದು ಹಂತದಲ್ಲಿ ಹಣ ಪಾವತಿಸುವುದಾಗಿ ಮುಖ್ಯ ಕಾರ್ಯದರ್ಶಿಗಳು ತಿಳಿಸಿದರು. ಆಗ ನ್ಯಾಯಾಲಯ ದೆಹಲಿಯಲ್ಲಿ ಇರುವುದು ಕೇವಲ 90,000 ಕಟ್ಟಡ ಕಾರ್ಮಿಕರೇ? ಉಳಿದವರನ್ನು ಗುರುತಿಸುವ ಕೆಲಸ ಮಾಡುವವರು ಯಾರು? ಎಂದು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯದರ್ಶಿ, ಅಧಿಕೃತ ಪೋರ್ಟಲ್‌ನಲ್ಲಿ ಯಾರು ಬೇಕಾದರೂ ನೋಂದಾಯಿಸಿಕೊಳ್ಳಬಹುದು ಎಂದರು. ಆದರೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ಕಾರ್ಮಿಕರಿಗೆ ಕನಿಷ್ಠ ಪಕ್ಷ ಮಾಹಿತಿ ನೀಡಲಾಗಿದೆಯೇ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ಇಲ್ಲ ಎಂದು ಮುಖ್ಯ ಕಾರ್ಯದರ್ಶಿಯವರು ಹೇಳಿದಾಗ “ಅದಕ್ಕೆ ಏನು ಮಾಡಬೇಕು? ದಾರಿ ಏನು? ನೀವು ನೀಡುವ ಪರಿಹಾರ ಕಾರ್ಮಿಕರಿಗೆ ಹೇಗೆ ತಲುಪುತ್ತದೆ ಎಂಬುದನ್ನು ನಮಗೆ ತಿಳಿಸಿ” ಎಂದು ಪೀಠ ತಾಕೀತು ಮಾಡಿತು.
ನಂತರ ಸಾರ್ವಜನಿಕ ನೋಟಿಸ್ ನೀಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದರು. ದೆಹಲಿಯಲ್ಲಿ ಕೇವಲ 90,000 ಕಾರ್ಮಿಕರು ಇದ್ದಾರೆಯೇ ಎಂಬುದನ್ನು ಖಚಿತಪಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ಕೋರ್ಟ್ ಸೂಚಿಸಿತು. ಆಗ ಕಾರ್ಮಿಕರ ಸಂಖ್ಯೆ ಇರುವುದು ಎಷ್ಟೆಂಬ ಬಗ್ಗೆ ಮರುಪರಿಶೀಲಿಸಬೇಕು ಎಂದು ಕಾರ್ಯದರ್ಶಿ ನುಡಿದರು.
ಇಂದು ಹೊರಡಿಸಿದ ಆದೇಶದಲ್ಲಿ 90,693 ಕಾರ್ಮಿಕರಿಗೆ ₹ 2,000 ಪಾವತಿಸಲಾಗಿದ್ದು, ಉಳಿದ ಹಣವನ್ನು ತಕ್ಷಣವೇ ಪಾವತಿಸಲಾಗುತ್ತದೆ ಎಂದು ನ್ಯಾಯಾಲಯ ದಾಖಲಿಸಿಕೊಂಡಿದೆ.