Umar Khalid, Sharjeel Imam, Gulfisha Fatima, Meeran Haider, Supreme Court  
ಸುದ್ದಿಗಳು

ದೆಹಲಿ ಗಲಭೆ ಪ್ರಕರಣ: ಉಮರ್, ಶಾರ್ಜೀಲ್ ಮತ್ತಿತರರು ಶಾಶ್ವತ ವಿಳಾಸದ ವಿವರ ನೀಡುವಂತೆ ಸುಪ್ರೀಂ ಸೂಚನೆ

ಆರೋಪಿಯೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ದವೆ ಅವರು “ಶಾಶ್ವತ ವಿಳಾಸವೇ? ಜೈಲೇ ಅವರ ಈಗಿನ ವಿಳಾಸ ಎಂದು ಗಮನ ಸೆಳೆದರು.

Bar & Bench

ದೆಹಲಿ ಗಲಭೆ ಪಿತೂರಿ ಪ್ರಕರಣದ ಆರು ಆರೋಪಿಗಳು ತಮ್ಮ ಶಾಶ್ವತ ವಿಳಾಸದ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.

ಆರು ಆರೋಪಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಾದಾಬ್ ಅಹ್ಮದ್ ಹಾಗೂ ಮೊಹಮ್ಮದ್ ಸಲೀಮ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠ  ಈ ನಿರ್ದೇಶನ ನೀಡಿತು.

ಆರೋಪಿಯೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್‌ ದವೆ ಅವರು “ಶಾಶ್ವತ ವಿಳಾಸವೇ? ಜೈಲೇ ಅವರ ಈಗಿನ ವಿಳಾಸ ಎಂದು ಗಮನ ಸೆಳೆದರು.

ಆಗ ಈ ಹಿಂದಿನ ವಿಳಾಸದ ವಿವರ ನೀಡುವಂತೆ ನ್ಯಾ. ಅರವಿಂದ್‌ ಕುಮಾರ್‌ ಪ್ರತಿಕ್ರಿಯಿಸಿದರು. ಆರೋಪಿಗಳಿಗೆ ಅದನ್ನು ಸಲ್ಲಿಸಲು ಸೂಚಿಸುವುದಾಗಿ ದವೆ ತಿಳಿಸಿದರು.

 ಪ್ರಕರಣದ ವಾದಗಳು ಬಹಳ ದಿನಗಳಿಂದ ನಡೆಯುತ್ತಿದ್ದು, ವಾದಿಗಳು ಪ್ರತಿವಾದಿಗಳನ್ನು ಪ್ರತಿನಿಧಿಸುತ್ತಿರುವ ವಕೀಲರು ತಮ್ಮ ವಾದ ಮೊಟಕುಗೊಳಿಸಬೇಕು ಎಂದು ನ್ಯಾಯಾಲಯ ಹೇಳಿತು.

"ನೀವು ಜಾಮೀನು ಪ್ರಕರಣದ ಕುರಿತು ಎರಡನೇ ಮೇಲ್ಮನವಿಯಂತೆ ವಾದಿಸುತ್ತಿದ್ದೀರಿ" ಎಂದು ಪೀಠ ಟೀಕಿಸಿತು. ನಂತರ ಭವಿಷ್ಯದ ವಾದ ಮಂಡನೆಗೆ ಸಂಬಂಧಿಸಿದಂತೆ ಕಾಲಮಿತಿ ನಿಗದಿಪಡಿಸಿತು. ಮೌಖಿಕ ವಾದಗಳು 15 ನಿಮಿಷ ಮೀರುವಂತಿಲ್ಲ. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ನೀಡುವ ಸ್ಪಷ್ಟೀಕರಣ 30 ನಿಮಿಷ ಮೀರಬಾರದು ಎಂದಿತು.

ನಂತರ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು. ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ 2020 ರ ಫೆಬ್ರವರಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಾಗ ಈಶಾನ್ಯ ದೆಹಲಿಯಲ್ಲಿ ಗಲಭೆ ಉಂಟಾಗಿತ್ತು. ದೆಹಲಿ ಪೊಲೀಸರ ಪ್ರಕಾರ ಘಟನೆಯಲ್ಲಿ 53 ಜನರು ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು.

ಬಹುತೇಕ ಆರೋಪಿಗಳ ಮೇಲೆ ವಿವಿಧ ಎಫ್‌ಐಆರ್‌ಗಳು ದಾಖಲಾಗಿದ್ದು  ನ್ಯಾಯಾಲಯಗಳಲ್ಲಿ ಹಲವು ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಹೆಚ್ಚಿನವರು 2020ರಿಂದ ಬಂಧನದಲ್ಲಿದ್ದಾರೆ.