Delhi riots 
ಸುದ್ದಿಗಳು

ದೆಹಲಿ ಗಲಭೆ: ಸದ್ಯಕ್ಕೆ ಆರೋಪ ನಿಗದಿಯ ಅಂತಿಮ ಆದೇಶ ನೀಡದಂತೆ ವಿಚಾರಣಾ ನ್ಯಾಯಾಲಯಕ್ಕೆ ದೆಹಲಿ ಹೈಕೋರ್ಟ್ ಸೂಚನೆ

ಪ್ರಕರಣದಲ್ಲಿ ಪೊಲೀಸರು ಸಂಗ್ರಹಿಸಿರುವ ವಿಡಿಯೋ, ದಾಖಲೆಗಳು ಮತ್ತಿತರ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವಂತೆ ಕೋರಿ ಆರೋಪಿಗಳಲ್ಲಿ ಒಬ್ಬರಾದ ಹೋರಾಟಗಾರ್ತಿ ದೇವಾಂಗನಾ ಕಲಿತಾ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಈ ಆದೇಶ ನೀಡಿದೆ ನ್ಯಾಯಾಲಯ.

Bar & Bench

ದೆಹಲಿ ಗಲಭೆ ಸಂಚಿನ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯ ಸದ್ಯಕ್ಕೆ ಆರೋಪ ನಿಗದಿ ಸಂಬಂಧ  ಅಂತಿಮ ಆದೇಶ ನೀಡದಂತೆ ದೆಹಲಿ ಹೈಕೋರ್ಟ್ ಗುರುವಾರ ಸೂಚಿಸಿದೆ.  [ದೇವಾಂಗನಾ ಕಲಿತಾ  ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ]

ವಿಚಾರಣಾ ನ್ಯಾಯಾಲಯದಲ್ಲಿ ಆರೋಪಕ್ಕೆ ಸಂಬಂಧಿಸಿದಂತೆ ವಾದ ಆಲಿಸಲಾಗುತ್ತಿದ್ದು ಅದನ್ನು ಮುಂದುವರೆಸುವಂತೆ ನಿರ್ದೇಶಿಸಲಾಗಿದೆ. ಆದರೆ ಹೈಕೋರ್ಟ್‌ ಪ್ರಕರಣ ಆಲಿಸುವವರೆಗೆ ವಿಚಾರಣಾ ನ್ಯಾಯಾಲಯ ಅಂತಿಮ ಆದೇಶ ನೀಡುವಂತಿಲ್ಲ ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ತಿಳಿಸಿದರು.

 ಪ್ರಕರಣದಲ್ಲಿ ಪೊಲೀಸರು ಸಂಗ್ರಹಿಸಿರುವ ವಿಡಿಯೋಗಳು, ದಾಖಲೆಗಳು ಮತ್ತಿತರ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವಂತೆ ಕೋರಿ ಆರೋಪಿಗಳಲ್ಲಿ ಒಬ್ಬರಾದ ಪಿಂಜ್ರಾ ಥೋಡ್‌ ಹೋರಾಟಗಾರ್ತಿ ದೇವಾಂಗನಾ ಕಲಿತಾ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಈ ಆದೇಶ ನೀಡಿದೆ.

ವಿಡಿಯೋ ದೃಶ್ಯಾವಳಿ ಮತ್ತು ವಾಟ್ಸಾಪ್‌ ಸಂದೇಶಗಳ ಪ್ರತಿ ಒದಗಿಸುವಂತೆ ತಾನು ಮಾಡಿದ್ದ ಮನವಿ ನಿರಾಕರಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕಲಿತಾ ಹೈಕೋರ್ಟ್‌ಗೆ ಎರಡು ಅರ್ಜಿ ಸಲ್ಲಿಸಿದ್ದಾರೆ.

ಒಂದು ಪ್ರಕರಣು ದೆಹಲಿ ಗಲಭೆಯ ಹಿಂದಿನ ಭಾರೀ ಪಿತೂರಿಗೆ ಸಂಬಂಧಿಸಿದ್ದರೆ, ಇನ್ನೊಂದು ಜಾಫ್ರಾಬಾದ್ ಮೇಲ್ಸೇತುವೆ ಬಳಿ ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಯ ಹತ್ಯೆ ಕುರಿತಾಗಿದೆ.

ಕಲಿತಾ ಪರ ವಾದ ಮಂಡಿಸಿದ ವಕೀಲ ಆದಿತ್ ಎಸ್ ಪೂಜಾರಿ ಅವರು ಆರೋಪಿಗಳಿಗೆ ದಾಖಲೆಗಳನ್ನು ಒದಗಿಸಿಲ್ಲ ಎಂದು ತಿಳಿಸಿದರು. ಏಕೆ ದಾಖಲೆಗಳನ್ನು ಒದಗಿಸಿಲ್ಲ ಎಂದು ದೆಹಲಿ ಪೊಲೀಸರನ್ನು ನ್ಯಾಯಾಲಯ ಪ್ರಶ್ನಿಸಿತು.

ಆಗ ದೆಹಲಿ ಗಲಭೆ ಪ್ರಕರಣಗಳ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು ತಮ್ಮ ಬಳಿ ಕಡತ ಇಲ್ಲದ ಕಾರಣ ಸಮಯಾವಕಾಶ ನೀಡುವಂತೆ ಕೋರಿದರು. ಪ್ರಕರಣದ ನಿರ್ವಹಣೆಯ ಬಗ್ಗೆ ಮೊದಲು ವಾದ ಮಾಡುವುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಸಮ್ಮತಿಸದ ನ್ಯಾಯಾಲಯ ಪ್ರಕರಣವನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿತು.