Jabalpur Bench of Madhya Pradesh High Court, Couple  
ಸುದ್ದಿಗಳು

ಮದುವೆ ಸರಿಪಡಿಸಲಾಗದಷ್ಟು ಮುರಿದು ಬಿದ್ದಾಗಲೂ ವಿಚ್ಛೇದನ ನೀಡದಿರುವುದು ಯಾತನೆ ಉಂಟುಮಾಡುತ್ತದೆ: ಮಧ್ಯಪ್ರದೇಶ ಹೈಕೋರ್ಟ್

ಒಟ್ಟಿಗೆ ವಾಸಿಸುವ ಸಾಧ್ಯತೆ ಇಲ್ಲದಿರುವಾಗ ಸಂಗಾತಿಯೊಬ್ಬರು ವಿಚ್ಛೇದನ ಕೋರಿದಾಗ ಅದನ್ನು ವಿರೋಧಿಸುವುದು ಕೂಡ ಕ್ರೌರ್ಯಕ್ಕೆ ಸಮ ಎಂದಿದೆ ಪೀಠ.

Bar & Bench

ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ಸರಿಪಡಿಸಲಾಗದ ವಿವಾಹ ವಿಚ್ಛೇದನಕ್ಕೆ ಕಾರಣವಲ್ಲವಾದರೂ ಅಂತಹ ವಿವಾಹ ವಿಚ್ಛೇದಿಸಲು ನಿರಾಕರಿಸುವುದು ವ್ಯಕ್ತಿಯನ್ನು ನಿರಂತರ ನೋವು ಮತ್ತು ಸಂಕಟಕ್ಕೆ ದೂಡುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.

ತನ್ನೆದುರು ಇರುವ ಕಕ್ಷಿದಾರರ ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಕಣ್ಮುಚ್ಚಿ ಕೂರುವುದು ಸಾಧ್ಯವಿಲ್ಲ. ಸರಿಪಡಿಸಲಾಗದ ವಿವಾಹದ ಸಂದರ್ಭದಲ್ಲಿ ವಿಚ್ಛೇದನ ನೀಡದಿರುವುದು ಕ್ರೌರ್ಯ ಎನಿಸಿಕೊಳ್ಳುತ್ತದೆ ಎಂದು ನ್ಯಾಯಮೂರ್ತಿಗಳಾದ ವಿಶಾಲ್ ಧಗತ್ ಮತ್ತು ಬಿ ಪಿ ಶರ್ಮಾ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಸರಿಪಡಿಸಲಾಗದ ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ವಿಚ್ಛೇದನ ನೀಡದಿದ್ದರೆ, ಅದು ವ್ಯಕ್ತಿಯನ್ನು ನಿರಂತರ ನೋವು ಮತ್ತು ಸಂಕಟಕ್ಕೆ ತಳ್ಳುತ್ತದೆ. ಸರಿಪಡಿಸಲಾಗದ ವಿವಾಹದಲ್ಲಿ ವಿಚ್ಛೇದನ  ಆದೇಶ ನೀಡಿದಿರುವುದು ಕ್ರೌರ್ಯದ ಭಾಗವಾಗುತ್ತದೆ. ಯಾವಾಗಲಾದರೂ, ಮದುವೆಯಲ್ಲಿ ಸರಿಪಡಿಸಲಾಗದ ಅಥವಾ ಇಡಿಯಾದ ವಿಘಟನೆ ಉಂಟಾದಾಗ, ತಮ್ಮ ಇನ್ನೊಬ್ಬ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗದೆ ಇಬ್ಬರೂ ಪಕ್ಷಕಾರರು ನೋವಿನಲ್ಲಿ ಮುಳುಗಿ ನಿತ್ಯ ಕ್ರೌರ್ಯ ಅನುಭವಿತ್ತಾರೆ  ಎಂದು ಅದು ಹೇಳಿದೆ.

ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ 2023ರಲ್ಲಿ 142ನೇ ವಿಧಿ ಬಳಸಿ ವಿವಾಹ ಸರಿಪಡಿಸಲಾಗದಷಚ್ಟು ಮುರಿದುಬಿದ್ದಿರುವುದನ್ನು ಆಧರಿಸಿ ವಿಚ್ಛೇದನ ಆದೇಶ ನೀಡಬಹುದು ಎಂದಿತ್ತು. ಆದರೆ ಇದೇ ಅಧಿಕಾರವನ್ನು ಅದು ಹೈಕೋರ್ಟ್‌ಗಳಿಗೆ ನೀಡಿರಲಿಲ್ಲ.

ಆದರೆ ಅಲಾಹಾಬಾದ್‌ ಹೈಕೋರ್ಟ್‌ ಇಂದಿನ ಕಾಲಕ್ಕೆ ಹೊಂದುವಂತೆ ಹಿಂದೂ ವಿವಾಹ ಕಾಯಿದೆಯ ವಿಚ್ಛೇದನದ ಆಧಾರಗಳನ್ನು ತಿದ್ದುಪಡಿ ಮಾಡಬೇಕು ಎಂದು ಮಾರ್ಚ್ 2024ರಲ್ಲಿ ಅಭಿಪ್ರಾಯಪಟ್ಟಿತ್ತು. ಇತ್ತ ದೆಹಲಿ ಹೈಕೋರ್ಟ್‌ ಕೂಡ ಇದೇ ರೀತಿಯ ವಿಚಾರ ತಿಳಿಸಿತ್ತು. ಮುರಿದುಬಿದ್ಧ ವಿವಾಹ ಎಂಬುದಕ್ಕೆ ಆಧಾರ ಇಲ್ಲವಾದ್ದರಿಂದ ದಂಪತಿ ವರ್ಷಗಳ ಕಾಲ ಕಾನೂನು ಸಂಘರ್ಷದಲ್ಲಿ ಸಿಲುಕುತ್ತಾರೆ ಎಂದು ಅದು ಸೆಪ್ಟೆಂಬರ್‌ 2023ರಲ್ಲಿ ಗಮನ ಸೆಳೆದಿತ್ತು. ಮಧ್ಯಪ್ರದೇಶ ಹೈಕೋರ್ಟ್‌ ಪ್ರಸ್ತುತ ಪ್ರಕರಣದಲ್ಲಿ ವ್ಯಕ್ತಪಡಿಸಿರುವ ಅವಲೋಕನಗಳು ಕೂಡ ಅದೇ ಚರ್ಚೆಯನ್ನು ಹುಟ್ಟುಹಾಕುವಂತಿವೆ.

ಪ್ರಸ್ತುತ ಪ್ರಕರಣದಲ್ಲಿ ದಂಪತಿಯ ಮದುವೆ ಸಂಪೂರ್ಣ ಮುರಿದು ಬಿದ್ದಿದೆ. ಪತ್ನಿ ಎರಡನೇ ವಿವಾಹವಾಗಿದ್ದರೂ ಆ ತಪ್ಪನ್ನೇ ಆಧಾರವಾಗಿಟ್ಟುಕೊಂಡು ವಿಚ್ಛೇದನ ನಿರಾಕರಿಸಿದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ ಎಂದಿತು. ಅಲ್ಲದೆ ಎರಡನೇ ಮದುವೆಯ ಮಾನ್ಯತೆ ವಿಚಾರಣಾ ನ್ಯಾಯಾಲಯದೆದುರು ವಿಚಾರಣೆಗೆ ಬಂದಿರಲಿಲ್ಲ. ಮೂಲ ಪ್ರಶ್ನೆ ಇದ್ದದ್ದು ಪತ್ನಿಯನ್ನು ಪತಿ ಕ್ರೌರ್ಯದಿಂದ ನಡೆಸಿಕೊಂಡಿದ್ದಾನೆಯ ಎಂಬುದಾಗಿದೆ. ಈ ಪ್ರಕರಣದಲ್ಲಿ ಮದುವೆ ಸಂಪೂರ್ಣ ಮುರಿದುಬಿದ್ದಿದ್ದರೂ ಒಟ್ಟಿಗೆ ಬಾಳುವ ಸಾಧ್ಯತೆ ಇಲ್ಲ ಎಂದು ತಿಳಿದಿದ್ದರೂ ವಿಚ್ಛೇದನಕ್ಕೆ ಪತಿ ವಿರೋಧಿಸಿರುವುದು ಮತ್ತೊಬ್ಬರಿಗೆ ತೊಂದರೆ ಕೊಟ್ಟು ಖುಷಿ ಪಡುವ ನಡೆಯಾಗಿದ್ದು ಇದು ಸ್ಪಷ್ಟವಾಗಿ ಕ್ರೌರ್ಯ ಎನಿಸಿಕೊಳ್ಳುತ್ತದೆ ಎಂದಿತು.

ಅಂತೆಯೇ ವಿಚ್ಛೇದನಕ್ಕೆ ಆದೇಶಿಸಿದ ಅದು 24.05.2002ರಲ್ಲಿ ನಡೆದಿದ್ದ ಮದುವೆಯನ್ನು ರದ್ದುಗೊಳಿಸಿತು. ಪತ್ನಿ ಸ್ವತಂತ್ರ ಜೀವನ ನಡೆಸಲು ಕೂಡ ಪತಿ ಅವಕಾಶ ಮಾಡಿಕೊಡಲಿಲ್ಲ ಎಂಬುದನ್ನು ಕೂಡ ನ್ಯಾಯಾಲಯ ಪರಿಗಣಿಸಿತು.  ಆದರೆ ಪತಿ ತನ್ನ ಮೊದಲ ಪತಿಯಿಂದ ಆಸ್ತಿ ಹಕ್ಕು ಪಡೆಯುವಂತಿಲ್ಲ ಎಂದು ಅದು ಇದೇ ವೇಳೆ ತೀರ್ಪು ನೀಡಿತು.

[ಆದೇಶದ ಪ್ರತಿ]

A_v_B.pdf
Preview