
ಆಸ್ಟ್ರೇಲಿಯಾದ ನ್ಯಾಯಾಲಯ ನೀಡಿದ ವಿಚ್ಛೇದನ ಆದೇಶ ಹಿಂದೂ ವಿವಾಹ ಕಾಯಿದೆ ಪ್ರಕಾರ ಭಾರತದಲ್ಲಿ ನಡೆದ ವಿವಾಹವನ್ನು ವಿಸರ್ಜಿಸದು ಎಂದು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.
ಪೌರತ್ವ ಅಥವಾ ವಾಸಸ್ಥಳ ಬದಲಾದರೂ ಹಿಂದೂ ವಿವಾಹ ಕಾಯಿದೆಯಡಿಯಲ್ಲಿನ ಹಕ್ಕುಗಳು ಮತ್ತು ಪರಿಹಾರಗಳು ಅಚಲವಾಗಿಯೇ ಇರುತ್ತವೆ. ಜೊತೆಗೆ ಅಂತಹ ವಿವಾಹಗಳಿಗೆ ಸಂಬಂಧಿಸಿದ ನ್ಯಾಯವ್ಯಾಪ್ತಿ ಭಾರತೀಯ ನ್ಯಾಯಾಲಯಗಳಿಗಷ್ಟೇ ಇರುತ್ತದೆ ಎಂದು ನ್ಯಾಯಮೂರ್ತಿಗಳಾದ ಎ.ವೈ. ಕೊಗ್ಜೆ ಮತ್ತು ಎನ್.ಎಸ್. ಸಂಜಯ್ ಗೌಡ ಅವರಿದ್ದ ಪೀಠ ನುಡಿದಿದೆ.
ಕುಟುಂಬ ನ್ಯಾಯಾಲಯದ ತರ್ಕ ತಪ್ಪಾಗಿದೆ. ಪತ್ನಿ ಆಸ್ಟ್ರೇಲಿಯಾ ನ್ಯಾಯಾಲಯಕ್ಕೆ ವಿಚಾರಣೆ ನಡೆಸುವ ಅಧಿಕಾರ ಇಲ್ಲ ಎಂದು ಹೇಳಿದ್ದರೂ, ಅಲ್ಲಿ ವಿಚ್ಛೇದನ ನೀಡಲಾಗಿದೆ. ಆದರೆ, ಅವರು ಹಿಂದೂ ವಿವಾಹ ಕಾಯಿದೆ ಅಡಿಯಲ್ಲಿ ಮದುವೆಯಾಗಿರುವುದರಿಂದ, ತಮ್ಮ ವಿಚ್ಛೇದನ ಭಾರತದಲ್ಲಿಯೇ ಇಲ್ಲಿನ ಕಾನೂನಿನ ಪ್ರಕಾರ ನಿರ್ಧಾರವಾಗಬೇಕು ಎಂದು ಪತ್ನಿ ವಾದಿಸಲು ಖಂಡಿತಾ ಮುಕ್ತರು ಎಂದು ನ್ಯಾಯಾಲಯ ವಿವರಿಸಿದೆ.
ಅಂತೆಯೇ ಆಕ್ಷೇಪಾರ್ಹ ಆದೇಶ ರದ್ದುಗೊಳಿಸಿದ ಅದು ಮೇಲ್ಮನವಿಯನ್ನು ಪುರಸ್ಕರಿಸಿತು. ಅರ್ಹತೆಯ ಆಧಾರದ ಮೇಲೆ ಪ್ರಕರಣ ನಿರ್ಧರಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶಿಸಿತು.
ಜುಲೈ 2008ರಲ್ಲಿ ಅಹಮದಾಬಾದ್‌ನಲ್ಲಿ ವಿವಾಹವಾಗಿದ್ದ ದಂಪತಿ ಆಸ್ಟ್ರೇಲಿಯಾಕ್ಕೆ ತೆರಳಿ ಅಲ್ಲಿನ ಪೌರತ್ವ ಪಡೆದಿದ್ದರು. 2013ರಲ್ಲಿ ಮಗು ಜನಿಸಿತ್ತು. 2014ರ ಹೊತ್ತಿಗೆ ವೈವಾಹಿಕ ಭಿನ್ನಾಭಿಪ್ರಾಯ ತಲೆದೋರಿತು. ಪತಿ ಭಾರತಕ್ಕೆ ಮರಳಿದರು. ಪತ್ನಿ 2015ರಲ್ಲಿ ಆಸ್ಟ್ರೇಲಿಯಾ ನಾಗರಿಕತೆ ಪಡೆದು ನಂತರ ಮಗನೊಂದಿಗೆ ಭಾರತಕ್ಕೆ ಹಿಂತಿರುಗಿದರು.
ಮಾರ್ಚ್ 2016ರಲ್ಲಿ, ಪತಿ ವಿಚ್ಛೇದನ ಮತ್ತು ಮಗನ ಪಾಲನೆಗಾಗಿ ಆಸ್ಟ್ರೇಲಿಯಾದ ಫೆಡರಲ್ ಸರ್ಕ್ಯೂಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ನವೆಂಬರ್ 2016ರಲ್ಲಿ ವಿಚ್ಛೇದನ ದೊರೆಯಿತು. ಪತ್ನಿ ಇದನ್ನು ಪ್ರಶ್ನಿಸಿ ಅಲ್ಲಿಯೇ ಮರುಪರಿಶೀಲನಾ ಅರ್ಜಿ ಸಲ್ಲಿಸಿದರು. ನಂತರ ಅದನ್ನು ವಜಾಗೊಳಿಸಲಾಯಿತು. ಜೊತೆಗೆ ಆಸ್ಟ್ರೇಲಿಯಾದ ವಿಚ್ಛೇದನ ತೀರ್ಪು ಅಮಾನ್ಯ ಎಂದು ಘೋಷಿಸುವಂತೆ ಆಕೆ ಏಕಕಾಲಕ್ಕೆ ಭಾರತದಲ್ಲಿಯೂ ಮೊಕದ್ದಮೆ ಹೂಡಿದರು.
ಭಾರತದಲ್ಲಿ ಆಕೆ ಹೂಡಿದ್ದ ಮೊಕದ್ದಮೆಯನ್ನು ಪತಿ ಪ್ರಶ್ನಿಸಿದರು. ಮಾರ್ಚ್ 2023ರಲ್ಲಿ, ಕೌಟುಂಬಿಕ ನ್ಯಾಯಾಲಯ ಪತಿಯ ವಾದ ಪುರಸ್ಕರಿಸಿತು. ಅಂತೆಯೇ ದಾಂಪತ್ಯ ಹಕ್ಕುಗಳನ್ನು ಮರುಸ್ಥಾಪಿಸುವಂತೆ ಮತ್ತು ಆಸ್ಟ್ರೇಲಿಯಾದ ವಿಚ್ಛೇದನ ತೀರ್ಪನ್ನು ಅಮಾನ್ಯಗೊಳಿಸುವಂತೆ ಕೋರಿ ಪತ್ನಿ ಹೂಡಿದ್ದ ಮೊಕದ್ದಮೆಗಳನ್ನು ತಿರಸ್ಕರಿಸಿತು. ಹೀಗಾಗಿ ಆಕೆ ಗುಜರಾತ್ ಹೈಕೋರ್ಟ್ ಮೊರೆ ಹೋದರು.
ಪಕ್ಷಕಾರರು ಬೇರೆ ದೇಶದ ಪೌರತ್ವ ಪಡೆದಿದ್ದಾರೆ ಎಂಬ ಕಾರಣಕ್ಕೆ ಭಾರತದಲ್ಲಿ ನಡೆದ ವಿವಾಹ ವಿದೇಶಿ ನೆಲದ ಕಾನೂನಿನಿಂದ ನಿಯಂತ್ತಿತವಾಗಬೇಕು ಎಂಬ ವಾದ ಒಪ್ಪಿದರೆ ಅದು ಕೆಲವು ಅಸಹಜ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ನುಡಿದಿದೆ.
ದಂಪತಿಯ ಪೌರತ್ವ ಅಥವಾ ವಾಸಸ್ಥಳ ಬದಲಾದರೂ ಹಿಂದೂ ವಿವಾಹ ಕಾಯಿದೆಯಡಿಯಲ್ಲಿನ ಹಕ್ಕುಗಳು ಮತ್ತು ಪರಿಹಾರಗಳು ಅಚಲವಾಗಿಯೇ ಇರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆಸ್ಟ್ರೇಲಿಯಾ ನ್ಯಾಯಾಲಯದ ವಿಚ್ಛೇದನ ಆದೇಶವನ್ನು ಅಮಾನ್ಯಗೊಳಿಸಬೇಕು ಎಂಬ ಪತ್ನಿಯ ಬೇಡಿಕೆಯ ಕುರಿತು ವಿಚಾರಣೆ ನಡೆಸುವ ಅಧಿಕಾರ ಕೌಟುಂಬಿಕ ನ್ಯಾಯಾಲಯಕ್ಕೆ ಮಾತ್ರವೇ ಇದೆ. ಅಲ್ಲದೆ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 13(ಸಿ) ಸ್ಪಷ್ಟವಾಗಿ ಅನ್ವಯವಾಗುವುದರಿಂದ ವಿದೇಶದ ವಿಚ್ಛೇದನ ಆದೇಶ ಅಂತಿಮವಲ್ಲ ಎಂದು ಪತ್ನಿ ವಾದಿಸಲು ಅವಕಾಶ ಇದೆ. ಪತ್ನಿ ಸಲ್ಲಿಸಿರುವ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಅರ್ಹತೆ ಆಧಾರದ ಮೇಲೆ ನಿರ್ಧರಿಸಬೇಕು. ಆಕೆ ನೀಡಿದ ದೂರನ್ನು ತಿರಸ್ಕರಿಸಲಾಗದು ಎಂದಿತು.
ಆಸ್ಟ್ರೇಲಿಯಾ ನ್ಯಾಯಾಲಯದ ವಿಚ್ಛೇದನ ತೀರ್ಪನ್ನು ಕುಟುಂಬ ನ್ಯಾಯಾಲಯ ಯಾಂತ್ರಿಕವಾಗಿ ಮಾನ್ಯ ಮಾಡಿದ್ದು ಆ ತೀರ್ಪನ್ನು ನಿರ್ಣಾಯಕವೆಂದು ಪರಿಗಣಿಸಿದ್ದರಿಂದಾಗಿ ಪತ್ನಿ ಕೌಟುಂಬಿಕ ನ್ಯಾಯಾಲಯಕ್ಕೆ ಮೊರೆ ಹೋಗದಂತಾಗಿತ್ತು ಎಂದು ಅದು ಹೇಳಿತು.