ಧಾರಾವಿ ಕೊಳೆಗೇರಿಗಳ ಪುನರಾಭಿವೃದ್ಧಿಗಾಗಿ 2019ರಲ್ಲಿ ನಡೆದಿದ್ದ ಬಿಡ್ ರದ್ದುಗೊಳಿಸಿ 2022 ರಲ್ಲಿ ಹೊಸದಾಗಿ ಟೆಂಡರ್ ಕರೆದಿದ್ದ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಮೂಲದ ಸೆಕ್ಲಿಂಕ್ ಟೆಕ್ನಾಲಜೀಸ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಸರ್ಕಾರದ ಈ ನಡೆಯಿಂದಾಗಿ 2022ರಲ್ಲಿ ಯೋಜನೆ ಅದಾನಿ ಪ್ರಾಪರ್ಟೀಸ್ ಪಾಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರ ಪೀಠ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ . ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಆಗಸ್ಟ್ 8ರಂದು ತೀರ್ಪು ಕಾಯ್ದಿರಿಸಿತ್ತು.
ತನ್ನ ₹7,200 ಕೋಟಿ ಬಿಡ್ ತಿರಸ್ಕರಿಸಿ 2022 ರಲ್ಲಿ ಹೊಸ ಹರಾಜು ಪ್ರಕ್ರಿಯೆ ಆರಂಭಿಸುವ ಮೂಲಕ ಅಂತಿಮವಾಗಿ ಅದಾನಿ ಇನ್ಫ್ರಾಸ್ಟ್ರಕ್ಚರ್ ಮತ್ತು ಡೆವಲಪರ್ಸ್ ಪ್ರೈ. ಲಿಮಿಟೆಡ್‌ಗೆ ಗುತ್ತಿಗೆ ನೀಡಿದ್ದ ಸರ್ಕಾರ ನಿರ್ಧಾರವನ್ನು ಸೆಕ್ಲಿಂಕ್ ಪ್ರಶ್ನಿಸಿತ್ತು.
ಸೆಕ್ಲಿಂಕ್ 2019 ರಲ್ಲಿ ಧಾರಾವಿ ಮರುಅಭಿವೃದ್ಧಿ ಯೋಜನೆಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅದಾನಿ ಸಂಸ್ಥೆಯ ₹4,539 ಕೋಟಿಗೂ ಹೆಚ್ಚು ಹರಾಜು ಕೂಗುವ ಮೂಲಕ ಯೋಜನೆಯನ್ನು ತನ್ನದಾಗಿಸಿಕೊಂಡಿತ್ತು.
ಆದರೆ 2022 ರಲ್ಲಿ, ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಕೊಳೆಗೇರಿ ಪುನರ್ವಸತಿ ಯೋಜನೆಯಲ್ಲಿ 45 ಎಕರೆ ರೈಲ್ವೆ ಭೂಮಿಯನ್ನು ಸೇರಿಸಲು ನಿರ್ಧರಿಸಿತು. ಈ ಕ್ರಮ ಮೂಲ ಪ್ರಸ್ತಾವನೆಯಲ್ಲಿ ಇರಲಿಲ್ಲ. ಹೀಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ವೆಚ್ಚವನ್ನು ಸರಿಹೊಂದಿಸಲು, ರಾಜ್ಯ ಸರ್ಕಾರ ಕಾನೂನು ಸಲಹೆ ಕೇಳಿತ್ತು. ಆಗ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಬದಲಾವಣೆ ಬಿಂಬಿಸಲು ಹೊಸ ಟೆಂಡರ್ ಶಿಫಾರಸು ಮಾಡಿದ್ದರು.
ಪರಿಣಾಮ, ಮಹಾರಾಷ್ಟ್ರ ಸರ್ಕಾರ 2019ರ ಟೆಂಡರ್ ರದ್ದುಗೊಳಿಸಿ 2022 ರಲ್ಲಿ ಹೊಸ ಹರಾಜು ಪ್ರಕ್ರಿಯೆ ಆರಂಭಿಸಿತ್ತು.
ಬಿಡ್ ನಕ್ಷೆ ಸುಮಾರು 90 ಎಕರೆ ರೈಲ್ವೆ ಭೂಮಿಯನ್ನು ಒಳಗೊಂಡಿರುವ ಕಾರಣ, ರೈಲ್ವೇ ಭೂಮಿಯನ್ನು ಸೇರಿಸಲು ಈಗಾಗಲೇ ಮೂಲ 2019 ರ ಟೆಂಡರ್‌ನಲ್ಲಿ ಲೆಕ್ಕ ಹಾಕಲಾಗಿದೆ ಎಂದು ಸೆಕ್ಲಿಂಕ್ ವಾದಿಸಿತ್ತು.
ಬಿಡ್ ರದ್ದುಪಡಿಸುವ ಸರ್ಕಾರದ ತರ್ಕ ಆಧಾರರಹಿತ ಹೊಸ ಟೆಂಡರ್ ನಿಯಮಗಳನ್ನು ಅದಾನಿಗೆ ಅನುಕೂಲವಾಗುವಂತೆ ಬದಲಿಸಾಗಿದೆ. ಬಿಡ್ ರದ್ದಾಗಿದ್ದರಿಂದ ತನಗೆ ₹8,424 ಕೋಟಿಗಳಷ್ಟು ಆರ್ಥಿಕ ನಷ್ಟ ಉಂಟಾಗಿದೆ ಎಂದು ಹೇಳಿತ್ತು.
ಆದರೆ ತನ್ನ ಕ್ರಮ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ ಮನಸೋಇಚ್ಛೆಯಿಂದ ಹೊಸ ಬಿಡ್ ಆರಂಭಿಸಿಲ್ಲ ಬದಲಿಗೆ ಬದಲಾದ ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ ಹೊಸದಾಗಿ ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ ಎಂದಿತ್ತು.
2019 ಮತ್ತು 2022 ರ ನಡುವೆ ಸಂಭವಿಸಿದ ಕೋವಿಡ್ ಸಾಂಕ್ರಾಮಿಕ, ರಷ್ಯಾ- ಉಕ್ರೇನ್ ಯುದ್ಧ, ರೂಪಾಯಿ- ಡಾಲರ್ ವಿನಿಮಯ ದರದಲ್ಲಿನ ಏರಿಳಿತಗಳು, ಚಂಚಲ ಬಡ್ಡಿದರ ಹಾಗೂ ಹೆಚ್ಚು ಸಂಕಷ್ಟಕಾರಿ ಹೂಡಿಕೆ ಸನ್ನಿವೇಶಗಳು ಮುಂತಾದ ಬದಲಾದ ಆರ್ಥಿಕ ಸ್ಥಿತಿಗತಿಗಳು ಕಾರಣ ಎಂದು ಅದು ಸಮಜಾಯಿಷಿ ನೀಡಿತ್ತು.