ಸುದ್ದಿಗಳು

ವ್ಯಕ್ತಿ ಘನತೆಯೂ ಮಹತ್ವದ್ದು: ಆ್ಯಸಿಡ್ ದಾಳಿ ಸಂತ್ರಸ್ತೆಗೆ ₹35 ಲಕ್ಷ ಪರಿಹಾರ ನೀಡಲು ಉತ್ತರಾಖಂಡ ಹೈಕೋರ್ಟ್ ಆದೇಶ

ಘಟನೆ 2014ರಲ್ಲೇ ನಡೆದಿದ್ದರೂ ಪರಿಹಾರ ನೀಡುವ ಕುರಿತಾದ ವಿಚಾರಣೆ ಇನ್ನೂ ಮುಂದುವರಿದೇ ಇದೆ. ಸಂತ್ರಸ್ತೆ ದಾಳಿಯ ಪರಿಣಾಮ ಅನುಭವಿಸುತ್ತಿದ್ದಾರೆ ಎಂದು ಹೇಳಿತು ನ್ಯಾಯಾಲಯ.

Bar & Bench

ಆ್ಯಸಿಡ್ ದಾಳಿಗೆ ತುತ್ತಾದ ಸಂತ್ರಸ್ತೆಗೆ ₹35,00,000 ಪರಿಹಾರ ನೀಡುವಂತೆ ಉತ್ತರಾಖಂಡ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. [ಗುಲ್ನಾಜ್ ಖಾನ್ ಮತ್ತು ಉತ್ತರಾಖಂಡ ಸರ್ಕಾರ ನಡುವಣ ಪ್ರಕರಣ].

ಗೌರವಯುತವಾಗಿ ಬದುಕುವ ಸಂತ್ರಸ್ತೆಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾ. ಸಂಜಯ ಕುಮಾರ್ ಮಿಶ್ರಾ ಅವರು ʼರಾಷ್ಟ್ರದ ಏಕತೆ ಮತ್ತು ಸಮಗ್ರತೆಯಷ್ಟೇ ಮೌಲ್ಯ ವ್ಯಕ್ತಿಗಳ ಘನತೆಗೂ ಇದೆʼ  ಎಂದು ಒತ್ತಿ ಹೇಳಿದರು.

ಸೆಷನ್ಸ್ ನ್ಯಾಯಾಲಯವು ಐಪಿಸಿ ಸೆಕ್ಷನ್ 326-ಎ ಅಡಿಯಲ್ಲಿ ದಾಳಿಕೋರನಿಗೆ ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಿತ್ತು. ಅರ್ಜಿದಾರರಿಗೆ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಮೂಲಕ ₹1,60,000 ಪರಿಹಾರ ನೀಡಲಾಗಿತ್ತು. ಇದಲ್ಲದೆ, ಹೈಕೋರ್ಟ್‌ನ ಸಮನ್ವಯ ಪೀಠ ಆಕೆಗೆ ಹೆಚ್ಚುವರಿಯಾಗಿ ₹1,50,000 ಪರಿಹಾರ  ನೀಡಿತ್ತು.

ಆದರೆ ತಾನು ಗೌರವಯುತವಾಗಿ ಬದುಕುವ ಹಕ್ಕನ್ನು ಆರೋಪಿ ಉಲ್ಲಂಘಿಸಿದ್ದು ಸರ್ಕಾರ ತನ್ನ ಸಮಗ್ರ ಪುನರ್ವಸತಿಗಾಗಿ, ಆಸ್ಪತ್ರೆ ವೆಚ್ಚಕ್ಕಾಗಿ ₹ 50,00,000 ಪರಿಹಾರ ಒದಗಿಸಬೇಕು ಎಂದು ಕೋರಿ ರಿಟ್‌ ಅರ್ಜಿ ಸಲ್ಲಿಸಿದ್ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ  ಪರಿಹಾರ ನೀಡಿರುವುದರಿಂದ ಉತ್ತರಾಖಂಡ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (ಯುಕೆಎಸ್‌ಎಲ್‌ಎಸ್‌ಎ) ಮುಂದೆ ಮೇಲ್ಮನವಿ ಸಲ್ಲಿಸಬೇಕೇ ಹೊರತು ಹೈಕೋರ್ಟ್‌ನಲ್ಲಿ ಅಲ್ಲ. ಹಾಗಾಗಿ ಪರಿಹಾರ ಕೋರಿರುವ ಅರ್ಜಿ ನಿರ್ವಹಣೆಗೆ ಅರ್ಹವಲ್ಲ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಸ್ಥಾಯಿ ವಕೀಲ ಅಜಯ್ ಸಿಂಗ್ ಬಿಷ್ಟ್ ವಾದಿಸಿದರು.

ಆದರೆ ವರ್ಲ್‌ಪೂಲ್ ಕಾರ್ಪೊರೇಷನ್ ಮತ್ತು ರಿಜಿಸ್ಟ್ರಾರ್‌ ಆಫ್‌ ಟ್ರೇಡ್‌ಮಾರ್ಕ್ಸ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಆಧರಿಸಿದ ಹೈಕೋರ್ಟ್‌ ʼಬಡ ದಾವೆದಾರರಿಗೆ ಲಭ್ಯ ಪರ್ಯಾಯ ಪರಿಣಾಮಕಾರಿ ಪರಿಹಾರ ಪಡೆಯಲು ರಿಟ್‌ ಅರ್ಜಿಯನ್ನು ನಿರ್ವಹಿಸಬಹುದಾಗಿದೆʼ ಎಂದಿತು.

ಹೊಸ ಯೋಜನೆಯಂತೆ ಪರಿಹಾರ ನೀಡಬೇಕು ಎಂಬ ಬಿಷ್ಟ್‌ ಅವರ ವಾದವನ್ನು ಒಪ್ಪದ ನ್ಯಾಯಾಲಯ ಇದೊಂದು ಫಲಾನುಭವಿ ಯೋಜನೆಯಾಗಿದ್ದು ಯೋಜನೆ ಜಾರಿಯಾದ ದಿನದಂದು ವ್ಯಾಜ್ಯ ಕಾರಣ ನಡೆದಿದ್ದರೆ ಅದರ ಪ್ರಯೋಜನ ಸಂತ್ರಸ್ತೆಗೆ ದೊರಕಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿತು.

ಘಟನೆ 2014ರಲ್ಲೇ ನಡೆದಿದ್ದರೂ ಪರಿಹಾರ ನೀಡುವ ಕುರಿತಾದ ವಿಚಾರಣೆ ಇನ್ನೂ ಮುಂದುವರಿದೇ ಇದೆ ಹಾಗೂ ಸಂತ್ರಸ್ತೆ ದಾಳಿಯ ಪರಿಣಾಮ ಅನುಭವಿಸುತ್ತಿದ್ದಾರೆ. ಹೀಗಾಗಿ ವ್ಯಾಜ್ಯ ಕಾರಣ ಇನ್ನೂ ಮುಂದುವರೆದಿದೆ ಎಂದು ನ್ಯಾಯಾಲಯ ವಿವರಿಸಿತು.  

ಇತ್ತ ಸಂತ್ರಸ್ತೆಯ ಪರ ವಾದ ಮಂಡಿಸಿದ ವಕೀಲರು ʼಯುಕೆಎಸ್‌ಎಲ್‌ಎಸ್‌ಎ ಸೂಚಿಸಿದ ಮೊತ್ತ ಆಕೆಗೆ ಉಂಟಾದ ಗಾಯ ಮತ್ತು ವೈದ್ಯಕೀಯ ವೆಚ್ಚಕ್ಕೆ ಸರಿಹೊಂದುತ್ತದೆಯೇ ವಿನಾ ಆಕೆ ಅನುಭವಿಸಿದ ಆಘಾತ ಮತ್ತು ಸಂಕಟಕ್ಕಲ್ಲ ಎಂದು ತಿಳಿಸಿ ಹೆಚ್ಚಿನ ಪರಿಹಾರ ಕೋರಿದರು.

ಎಲ್ಲಾ ಕಕ್ಷಿದಾರರ ವಾದ ಆಲಿಸಿದ ನ್ಯಾಯಾಲಯ ಸಂತ್ರಸ್ತೆಗೆ ₹ 35,00,000 ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು. ಅಲ್ಲದೆ ಆಕೆ ರಾಜ್ಯಕ್ಕೆ ಸೇರಿದವರಲ್ಲದೇ ಇದ್ದರೂ ಅವರ ಮುಂದಿನ ಎಲ್ಲಾ ಆಸ್ಪತ್ರೆ ವೆಚ್ಚಗಳನ್ನು ಸರ್ಕಾರವೇ ಭರಿಸಬೇಕು ಎಂದು ನಿರ್ದೇಶನ ನೀಡಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Gulnaz_Khan_vs_The_State_of_Uttarakhand_and_Ors_.pdf
Preview