ಕೋವಿಡ್ ಚಿಕಿತ್ಸಾ ಕೇಂದ್ರದಿಂದ ನಾಪತ್ತೆಯಾದ ವ್ಯಕ್ತಿಯ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ: ಮದ್ರಾಸ್ ಹೈಕೋರ್ಟ್ ನಿರ್ದೇಶನ

ವಯೋವೃದ್ಧ ಬಳೆ ಮಾರಾಟಗಾರನನ್ನು 2020ರಲ್ಲಿ ನಗರದ ಪ್ರತ್ಯೇಕ ವಾಸ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಬಳಿಕ ಸರ್ಕಾರಿ ಆಸ್ಪತ್ರೆಯಿಂದ ನಡೆದು ಹೋದದ್ದು ಕಂಡುಬಂದಿತ್ತು. ಆ ನಂತರ ಅವರು ನಾಪತ್ತೆಯಾಗಿದ್ದರು.
Madras High Court
Madras High Court

ಕೋವಿಡ್‌ ಚಿಕಿತ್ಸೆಗಾಗಿ 2020ರಲ್ಲಿ ಕರೆದೊಯ್ಯಲಾಗಿದ್ದ ಎಪ್ಪತ್ತೆರಡು ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಕುಟುಂಬಕ್ಕೆ ₹1 ಲಕ್ಷ ಪರಿಹಾರ ನೀಡುವಂತೆ ಮದ್ರಾಸ್ ಹೈಕೋರ್ಟ್ ಸೋಮವಾರ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕೋವಿಡ್‌ ನಿಭಾಯಿಸಲು ಸರ್ಕಾರ ಸಾಕಷ್ಟು ಹೆಣಗಿದೆ ಎಂಬ ಕಾರಣಕ್ಕೆ ಯಾವುದೇ ಒಬ್ಬ ಅಧಿಕಾರಿ ಮೇಲೆ ಆರೋಪ ಮಾಡುವುದು ಅನ್ಯಾಯವಾಗುತ್ತದೆ. ಹಾಗೆಂದು, ವ್ಯಕ್ತಿಯೊಬ್ಬರು ಸರ್ಕಾರಿ ಕೇಂದ್ರಕ್ಕೆ ಭೇಟಿ ಇತ್ತ ನಂತರ ಕಾಣೆಯಾಗಿರುವುದನ್ನು ಸಹ ಇದೇ ವೇಳೆ ನಿರ್ಲಕ್ಷಿಸಲಾಗದು ಎಂದು ನ್ಯಾಯಮೂರ್ತಿಗಳಾದ ಪಿ ಎನ್ ಪ್ರಕಾಶ್ ಮತ್ತು ಎನ್ ಆನಂದ್ ವೆಂಕಟೇಶ್ ಅವರಿದ್ದ ಪೀಠ ಹೇಳಿತು.

ಈ ಪ್ರಕರಣದಲ್ಲಿ ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಎಫ್‌ಐಆರ್‌ ದಾಖಲಿಸಲು ಪೊಲೀಸರು ಆರಂಭದಲ್ಲಿ ನಿರಾಕರಿಸಿದ್ದರು ಎಂಬುದನ್ನೂ ನ್ಯಾಯಾಲಯ ಗಮನಿಸಿತು. ತನ್ನ ತಂದೆ ಇಲ್ಲವೇ ಅವರ ಮೃತದೇಹವನ್ನಾದರೂ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರಿ ನಾಪತ್ತೆಯಾಗಿರುವ ಆದಿಕೇಶವನ್‌ ಎಂಬುವವರ ಮಗ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.

Also Read
ಕೋವ್ಯಾಕ್ಸಿನ್ ಮಾಹಿತಿ ನಿರಾಕರಣೆ ಪ್ರಶ್ನಿಸಿದ್ದ ಅರ್ಜಿಗಳನ್ನು ಮುಂದಿನ ತಿಂಗಳು ವಿಚಾರಣೆ ನಡೆಸಲಿರುವ ದೆಹಲಿ ಹೈಕೋರ್ಟ್

ಆದಿಕೇಶನ್‌ ಅವರು ಕೋವಿಡ್‌ನಿಂದ ಬಳಲುತ್ತಿರುವುದು ಜೂನ್ 9, 2020ರಂದು ದೃಢಪಟ್ಟಿತ್ತು. ಎರಡು ದಿನಗಳ ಬಳಿಕ ಆದಿಕೇಶವನ್‌ ಮನೆಗೆ ಭೇಟಿ ನೀಡಿದ್ದ ಸರ್ಕಾರಿ ಅಧಿಕಾರಿಯೊಬ್ಬರು ಅವರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿ ಅವರು ರೋಗದಿಂದ ತೀವ್ರವಾಗಿ ಬಳಲುತ್ತಿರುವುದು ಕಂಡುಬದಿತ್ತು. ಅವರನ್ನು ಗೃಹ ಪ್ರತ್ಯೇಕವಾಸದಲ್ಲಿರಿಸುವುದು ಸೂಕ್ತವಲ್ಲ ಎಂದು ನಿರ್ಣಯಿಸಿದ ಸಿಬ್ಬಂದಿ ಸರ್ಕಾರ ನಡೆಸುವ ಪ್ರತ್ಯೇಕವಾಸ ಕೇಂದ್ರಕ್ಕೆ ಕಳಿಸಿಕೊಟ್ಟಿದ್ದರು. ಮೊಬೈಲ್‌ ಇಲ್ಲದ ಕಾರಣ ಅವರು ಮನೆಯವರನ್ನು ಸಂಪರ್ಕಿಸುವುದು ಸಾಧ್ಯವಾಗಿರಲಿಲ್ಲ. ಆದಿಕೇಶವನ್‌ ಇದ್ದ ಆಸ್ಪತ್ರೆ ಸೇರಿದಂತೆ ಹಲವೆಡೆ ಹುಡುಕಾಟ ನಡೆಸಿದರೂ ಅವರ ಪತ್ತೆಯಾಗಿರಲಿಲ್ಲ.

Also Read
ಕಟ್ಟಡ ನಿರ್ವಹಣೆ ತಂತ್ರಜ್ಞಾನದ ಬಳಕೆಯಲ್ಲಿ ಹುಬ್ಬಳ್ಳಿಯ ನ್ಯಾಯಾಲಯ ದೇಶಕ್ಕೇ ಮಾದರಿ: ಸುಪ್ರೀಂ ನ್ಯಾ. ಓಕಾ ಮೆಚ್ಚುಗೆ

ಕಡೆಯದಾಗಿ ರಾಜೀವ್‌ ಗಾಂಧಿ ಸರ್ಕಾರಿ ಆಸ್ಪತ್ರೆಯಿಂದ ಅವರು ನಿರ್ಗಮಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪತ್ತೆಯಾಗಿತ್ತು. ಆನಂತರ ಅವರು ಎಲ್ಲಿ ಹೋದರು ಎಂಬುದು ಯಾರಿಗೂ ತಿಳಿದಿಲ್ಲ. ಮೊದಲು ದೂರು ಸ್ವೀಕರಿಸದ ಪೊಲೀಸರು ಆದಿಕೇಶವನ್‌ ಅವರು ಆಸ್ಪತ್ರೆಗೆ ದಾಖಲಾದ ಹದಿನೈದು ದಿನಗಳ ನಂತರ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

ʼಪೊಲೀಸರು ಚುರುಕಾಗಿ ನಡೆದುಕೊಂಡಿದ್ದರೆ ಆದಿಕೇಶವನ್‌ ಅವರನ್ನು ಪತ್ತೆಹಚ್ಚಬಹುದಿತ್ತು ಎಂಬುದು ಅವರ ಕುಟುಂಬದವರ ಅಹವಾಲು. ಅವರು ನೀಡಿದ ದೂರಿನಲ್ಲಿ ಹುರುಳಿದೆʼ ಎಂದ ನ್ಯಾಯಾಲಯ ಆದಿಕೇಶವನ್‌ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು. ಜೊತೆಗೆ ನಿಗದಿತ ಗಡುವಿನೊಳಗೆ ಆದಿಕೇಶವನ್‌ ಕುಟುಂಬಕ್ಕೆ ರೂ.1,00,000/- ಪರಿಹಾರ ನೀಡಬೇಕು ಎಂದು ಅದು ಸರ್ಕಾರಕ್ಕೆ ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com