Supreme Court of India 
ಸುದ್ದಿಗಳು

ಶೇ 40ಕ್ಕಿಂತ ಹೆಚ್ಚು ಅಂಗವೈಕಲ್ಯ ಎಂಬಿಬಿಎಸ್ ಪ್ರವೇಶಕ್ಕೆ ಅಡ್ಡಿಯಾಗದು: ಸುಪ್ರೀಂ ಕೋರ್ಟ್

ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂ) ಧೋರಣೆಯು ಅಭ್ಯರ್ಥಿಗಳನ್ನು ಅನರ್ಹಗೊಳಿಸುವುದು ಹೇಗೆ ಎನ್ನುವುದು ಆಗಿರಬಾರದು ಎಂದು ನ್ಯಾಯಾಲಯ ಹೇಳಿತು.

Bar & Bench

ವಾಕ್‌ ಮತ್ತು ಭಾಷಾ ನ್ಯೂನತೆ ಶೇ 40ಕ್ಕಿಂತ ಹೆಚ್ಚು ಇರುವವರಿಗೆ ಎಂಬಿಬಿಎಸ್‌ ಕೋರ್ಸ್‌ಗಳಿಗೆ ಪ್ರವೇಶಾತಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ [ಓಂಕಾರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂಸಿ) ದೃಷ್ಟಿಕೋನ ಅಭ್ಯರ್ಥಿಗಳನ್ನು ಅನರ್ಹಗೊಳಿಸುವುದು ಹೇಗೆ ಎಂಬುದರ ಕುರಿತು ಇರಬಾರದು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ಪೀಠ ಕಿವಿ ಹಿಂಡಿತು.

ಅಭ್ಯರ್ಥಿಗಳನ್ನು ಉತ್ತಮ ರೀತಿಯಲ್ಲಿ ಅನರ್ಹಗೊಳಿಸುವುದು ಹೇಗೆ ಎಂಬ ದೃಷ್ಟಿಕೋನ ಇರಬಾರದು. ಸಮಂಜಸ ಅವಕಾಶ ನೀಡುವುದು ಎನ್‌ಎಂಸಿ ಮಾರ್ಗಸೂಚಿಯ ಉದ್ದೇಶವಾಗಿರಬೇಕು. ಸಹಾಯಕ ಸಾಧನಗಳನ್ನು ಹೊಂದಿದ ವಿಕಲಚೇತನರಿಗೆ ಸಮಂಜಸ ಅವಕಾಶ ನೀಡುವಾಗ ಸಂಕುಚಿತ ಮನೋಭಾವ ತಾಳಬಾರದು. ರಾಜ್ಯ ನೀತಿ ನಿರ್ದೇಶಕ ತತ್ವದ ಉದ್ದೇಶಗಳನ್ನು ಅದು ಮುಂದಕ್ಕೆ ಕೊಂಡೊಯ್ಯಬೇಕು ಎಂದು ನ್ಯಾಯಾಲಯ ಹೇಳಿದೆ.

ವಾಕ್ ಮತ್ತು ಭಾಷಾ ನ್ಯೂನತೆ ಶೇ 40ಕ್ಕಿಂತ ಹೆಚ್ಚು ಇರುವವರಿಗೆ ಎಂಬಿಬಿಎಸ್ ಕೋರ್ಸ್‌ಗಳಿಗೆ ಪ್ರವೇಶಾತಿ ನಿರಾಕರಿಸುವ ನಿಯಮಾವಳಿ ವಿರುದ್ಧ ಅರ್ಜಿದಾರರ ಮನವಿ ಮುಂದೂಡಿದ್ದ ಬಾಂಬೆ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಅನುಮತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

'ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು' ವರ್ಗದ ಅಡಿಯಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆಯುವುದಕ್ಕೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರ ಕೋರಿದ್ದ ಅರ್ಜಿದಾರರ ಮನವಿ ಪರಿಗಣಿಸದೆ ಹೈಕೋರ್ಟ್ ಮೂರು ವಾರಗಳ ಕಾಲ ಪ್ರಕರಣ ಮುಂದೂಡಿತ್ತು.

ಎಂಬಿಬಿಎಸ್ ಕೋರ್ಸ್ ಮುಂದುವರಿಸಲು ಅರ್ಜಿದಾರರ ವಾಕ್ ಮತ್ತು ಭಾಷಾ ಅಸಾಮರ್ಥ್ಯ ಅಡ್ಡಿಯಾಗುತ್ತದೆಯೇ ಎಂದು ಪರಿಶೀಲಿಸಲು ವೈದ್ಯಕೀಯ ಮಂಡಳಿ ರಚಿಸುವಂತೆ ಸೆಪ್ಟೆಂಬರ್ 2ರಂದು ನೀಡಿದ್ದ ಆದೇಶದಲ್ಲಿ, ಸುಪ್ರೀಂ ಕೋರ್ಟ್ ಪುಣೆಯ ಬೈರಾಮ್‌ಜೀ ಜೀಜೀಭೋಯ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಅವರಿಗೆ ನಿರ್ದೇಶಿಸಿತ್ತು.  

ಪ್ರವೇಶಾತಿ ನಿರಾಕರಿಸಲು ಅಭ್ಯರ್ಥಿಯ ಶೇ 44-45ರಷ್ಟು ಅಂಗವೈಕಲ್ಯ ಕಾರಣವಾಗಬಾರದು ಎಂದು ನ್ಯಾಯಾಲಯ ಇಂದು ಅಭಿಪ್ರಾಯಪಟ್ಟಿದೆ. ಬದಲಾಗಿ, ಪ್ರತಿ ಅಭ್ಯರ್ಥಿಯನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಬೇಕು ಎಂದು ಅದು ಹೇಳಿದೆ.

ಮೇಲ್ಮನವಿ ಮಂಡಳಿ ರಚಿಸುವುದು ಬಾಕಿ ಉಳಿದಿರುವುದರಿಂದ ಅಂಗವೈಕಲ್ಯ ಮೌಲ್ಯಮಾಪನ ಮಂಡಳಿಯ ನಿರ್ಧಾರ ಪ್ರಶ್ನಿಸಿ ನ್ಯಾಯ ನಿರ್ಣಯ ಮಾಡುವ ಸಂಸ್ಥೆಯ ಎದುರು ಮೇಲ್ಮನವಿ ಸಲ್ಲಿಸಬಹುದು ಎಂದು ಅದು ನಿರ್ದೇಶಿಸಿದೆ.