ಪ್ರಕರಣವೊಂದರಲ್ಲಿ ಆರೋಪಿಗಳ ಪರ ವಕೀಲರಿಗೆ ರೈಲ್ವೆ ಪೊಲೀಸರು ಸಮನ್ಸ್ ನೀಡಿರುವುದು ದುರದೃಷ್ಟಕರ ಮತ್ತು ಕಳವಳಕಾರಿ ಎಂದು ಜಾರ್ಖಂಡ್ ಹೈಕೋರ್ಟ್ ಈಚೆಗೆ ತಿಳಿಸಿದೆ [ಅಗ್ನಿವ ಸರ್ಕಾರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ವಕೀಲರು ತಮ್ಮ ಕಕ್ಷಿದಾರರರೊಂದಿಗೆ ಸಂವಹನ ನಡೆಸುವ ಸವಲತ್ತು ಪಡೆದಿದ್ದು ಅದನ್ನು ಬಹಿರಂಗಪಡಿಸದಂತೆ ರಕ್ಷಣೆ ಇದೆ ಎಂದು ನ್ಯಾಯಮೂರ್ತಿ ಆನಂದ ಸೇನ್ ತಿಳಿಸಿದರು.
"ಅಪರಾಧದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಆರೋಪಿ ಪರ ವಾದ ಮಂಡಿಸುತ್ತಿರುವ ವಕೀಲರಿಗೆ ಸಮನ್ಸ್ ನೀಡಿರುವುದು ನಿಜಕ್ಕೂ ವಿಚಲಿತಗೊಳಿಸುವಂತಿದೆ. ವಕೀಲರು ಮತ್ತು ಅವರ ಕಕ್ಷಿದಾರರ ನಡುವಿನ ಯಾವುದೇ ಸಂವಹನ, ಕಕ್ಷಿದಾರರ ಸ್ಥಿತಿ ಏನೇ ಇರಲಿ, ಅದು ವಿಶೇಷ ಸಂವಹನವಾಗಿದ್ದು ಆರೋಪಿಯೊಂದಿಗೆ ತಾವು ಏನು ಸಂವಹನ ನಡೆಸಿದ್ದೇವೆ ಎಂಬುದನ್ನು ಯಾವುದೇ ತನಿಖಾಧಿಕಾರಿ ಮುಂದೆ ಬಹಿರಂಗಪಡಿಸಲು ಒತ್ತಾಯಿಸಲಾಗದು" ಎಂದು ನ್ಯಾಯಾಲಯ ಹೇಳಿದೆ.
ಅಗ್ನಿವ ಸರ್ಕಾರ್ ಎಂಬ ವಕೀಲರಿಗೆ ರೈಲ್ವೆ ರಕ್ಷಣಾ ಪಡೆ ಹೊರಡಿಸಿದ ಸಮನ್ಸ್‌ಗೆ ತಡೆ ನೀಡಿದ ನ್ಯಾಯಮೂರ್ತಿ ಸೇನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ರೈಲ್ವೆ ಆಸ್ತಿ (ಕಾನೂನುಬಾಹಿರ ಸ್ವಾಧೀನ) ಕಾಯಿದೆ- 1996ಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಕೀಲರು ಆರೋಪಿಗಳ ಪರವಾಗಿ ವಾದಿಸುತ್ತಿದ್ದರು. ತಮ್ಮ ಚಟುವಟಿಕೆ ಮುಂದುವರೆಸಿಕೊಂಡು ಹೋಗುವಂತೆಯೂ ತಾನು ಅವರನ್ನು ರಕ್ಷಿಸುವುದಾಗಿಯೂ ವಕೀಲ ಸರ್ಕಾರ್ ಭರವಸೆ ನೀಡಿದ್ದರು ಎಂದು ಆರೋಪಿಗಳಲ್ಲಿ ಒಬ್ಬರು ತಮ್ಮ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದರಿಂದ ಸರ್ಕಾರ್ ಅವರಿಗೆ ಸಮನ್ಸ್ ನೀಡಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.
ವಾದ ಆಲಿಸಿದ ನ್ಯಾಯಾಲಯ ಸರ್ಕಾರ್ ಮತ್ತು ಅವರ ಕಕ್ಷಿದಾರರ ನಡುವಿನ ಸಂವಹನದ ವಿಶೇಷ ವಿವರಗಳನ್ನು ತಿಳಿದುಕೊಳ್ಳಲೆಂದಷ್ಟೇ ಸಮನ್ಸ್ ಜಾರಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದಿತು.
ಅಂತೆಯೇ ನೋಟಿಸ್‌ಗೆ ತಡೆ ನೀಡಿದ ಅದು ಅರ್ಜಿ ಇತ್ಯರ್ಥವಾಗುವವರೆಗೆ ಇಂತಹ ನೋಟಿಸ್‌ಗಳನ್ನು ಅರ್ಜಿದಾರರಿಗೆ ನೀಡುವಂತಿಲ್ಲ ಎಂದಿತು.
[ತೀರ್ಪಿನ ಪ್ರತಿ]