Pregnant woman, Bombay High Court 
ಸುದ್ದಿಗಳು

'ಕಡಿಮೆ ಬುದ್ಧಿಮತ್ತೆಯುಳ್ಳ ಮಹಿಳೆಗೆ ತಾಯಿಯಾಗುವ ಹಕ್ಕಿಲ್ಲವೇ?' ಬಾಂಬೆ ಹೈಕೋರ್ಟ್ ಪ್ರಶ್ನೆ

ಗರ್ಭಪಾತಕ್ಕೆ ಅನುಮತಿಸಲು ಕೋರಿ ಮಹಿಳೆಯ ತಂದೆ ಅರ್ಜಿ ಸಲ್ಲಿಸಿದ್ದರು. ಆದರೆ 20 ವಾರಗಳ ಗರ್ಭಿಣಿಯಾಗಿರುವ ಮಹಿಳೆ ಗರ್ಭಪಾತ ನಿರಾಕರಿಸಿದ್ದರು.

Bar & Bench

ಸರಾಸರಿಗಿಂತ ಕಡಿಮೆ ಬುದ್ಧಿಮತ್ತೆ ಇರುವ 27 ವರ್ಷದ ಮಹಿಳೆಯ ಗರ್ಭಪಾತ ಕೋರಿ ಆಕೆಯನ್ನು ದತ್ತು ಪಡೆದಿರುವ 66 ವರ್ಷದ ತಂದೆ ಅರ್ಜಿ ಸಲ್ಲಿಸಿರುವುದನ್ನು ಬಾಂಬೆ ಹೈಕೋರ್ಟ್‌ ಬುಧವಾರ ಟೀಕಿಸಿದೆ.  

20 ವಾರಗಳ ಗರ್ಭಿಣಿಯಾಗಿರುವ ಮಹಿಳೆ ಗರ್ಭಪಾತಕ್ಕೆ ಒಪ್ಪಿಗೆ ನಿರಾಕರಿಸಿದ್ದರು. ಭ್ರೂಣ ಸಹಜ ಸ್ಥಿತಿಯಲ್ಲಿರುವುದಾಗಿ ವೈದ್ಯಕೀಯ ಮಂಡಳಿಯೊಂದು ತಿಳಿಸಿತ್ತು.

ಅಲ್ಲದೆ ಗರ್ಭವತಿಯನ್ನು ಕಾನೂನಾತ್ಮಕವಾಗಿ ಮಾನಸಿಕ ಅಸ್ವಸ್ಥಳು ಇಲ್ಲವೇ ಬುದ್ಧಿಮಾಂದ್ಯೆ ಎಂದು ಘೋಷಿಸಿಲ್ಲ. ಇದು ಬೌದ್ಧಿಕ ಚಟುವಟಿಕೆಗಳಿಗೆ ಸಂಬಂಧಿಸಿದ ವಿಚಾರವಷ್ಟೇ ಆಗಿದೆ ಎಂದು ನ್ಯಾಯಮೂರ್ತಿಗಳಾದ ರವೀಂದ್ರ ವಿ ಘುಗೆ ಮತ್ತು ರಾಜೇಶ್ ಎಸ್ ಪಾಟೀಲ್ ಅವರಿದ್ದ ಪೀಠ ತಿಳಿಸಿತು.

“ಅವಲೋಕನದ ಪ್ರಕಾರ ಆಕೆ ಸರಾಸರಿಗಿಂತ ಕಡಿಮೆ ಬುದ್ಧಿಮತ್ತೆ ಹೊಂದಿದ್ದಾಳೆ. ಯಾರೂ ಅತೀವ ಬುದ್ಧಿವಂತರಿರಲು ಸಾಧ್ಯವಿಲ್ಲ. ನಾವು ಮನುಷ್ಯರು. ಪ್ರತಿಯೊಬ್ಬರೂ ವಿಭಿನ್ನ ಬುದ್ಧಿಶಕ್ತಿ ಹೊಂದಿರುತ್ತಾರೆ. ಆಕೆ ಕಡಿಮೆ ಬುದ್ಧಿಮತ್ತೆ ಇರುವವಳು ಎಂದಮಾತ್ರಕ್ಕೆ ಆಕೆಗೆ ತಾಯಿಯಾಗುವ ಹಕ್ಕಿಲ್ಲವೇ?” ಎಂದು ನ್ಯಾಯಾಲಯ ಪ್ರಶ್ನಿಸಿತು.

ಮಹಿಳೆ ಆರು ತಿಂಗಳ ಮಗುವಾಗಿದ್ದಾಗ 1998ರಲ್ಲಿ ಅರ್ಜಿದಾರ ಆಕೆಯನ್ನು ದತ್ತುಪಡೆದಿದ್ದರು. ಆಕೆ ಆಂತರಿಕ ವ್ಯಕ್ತಿತ್ವ ಅಸ್ವಸ್ಥತೆ, ಖಿನ್ನತೆ ಸೇರಿದಂತೆ ಹಲವು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಲ್ಲದೆ, ಆಕೆ ಹಿಂಸಾಪ್ರವೃತ್ತಿ ಹೊಂದಿದ್ದು ನಿರಂತರ ಔಷಧೋಪಚಾರದ ಅಗತ್ಯವೂ ಇದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದರು.

ಮುಂದುವರಿದು, ಆಕೆ 13 -14 ನೇ ವಯಸ್ಸಿನಿಂದಲೇ ಲೈಂಗಿಕಾಸಕ್ತಿ ಹೊಂದಿದ್ದಳು. ಅನೇಕ ಬಾರಿ ರಾತ್ರಿ ತಮಗೆ ತಿಳಿಸದೆಯೇ ಹೊರಗೆ ಹೋಗುತ್ತಿದ್ದಳು. ತನ್ನ ಮಗಳನ್ನು ಸಾಮಾನ್ಯ ತಪಾಸಣೆಗಾಗಿ ನವೆಂಬರ್ 26 ರಂದು ಆಸ್ಪತ್ರೆಗೆ ಕರೆದೊಯ್ದಾಗಲೇ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿತ್ತು. ಆರ್ಥಿಕ ಪರಿಸ್ಥಿತಿ ಮತ್ತು ವೃದ್ಧಾಪ್ಯದಿಂದಾಗಿ ತನಗೆ ಆ ಮಗುವನ್ನು ಪೋಷಿಸಲು ಸಾಧ್ಯವಾಗದು ಎಂದು ಅವರು ಅಳಲು ತೋಡಿಕೊಂಡಿದ್ದರು.

ಕಳೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ  ಮಹಿಳೆಯ ವೈದ್ಯಕೀಯ ತಪಾಸಣೆ ನಡೆಸುವಂತೆ ವೈದ್ಯಕೀಯ ಮಂಡಳಿಗೆ ಸೂಚಿಸಿತ್ತು. ಮಹಿಳೆ ಮತ್ತು ಭ್ರೂಣದ ಆರೋಗ್ಯ ಶಾರೀರಿಕವಾಗಿ ಸಹಜವಾಗಿದ್ದು ಆದೇಶ ನೀಡಿದರೆ ಗರ್ಭಪಾತ ನಡೆಸಬಹುದು ಎಂದು ಮಂಡಳಿ ಇಂದು ನ್ಯಾಯಾಲಯಕ್ಕೆ ತಿಳಿಸಿತು.

ಮಹಿಳೆ ತನ್ನ ಸಂಗಾತಿಯ ಹೆಸರನ್ನು ಬಹಿರಂಗಪಡಿಸಿದ್ದು ಅವನನ್ನು ಮದುವೆಯಾಗಲು ಬಯಸಿದ್ದಾಳೆ ಎಂಬುದನ್ನು ತಿಳಿದ ನ್ಯಾಯಾಲಯ ಮದುವೆ ಸಾಧ್ಯವೇ ಎಂಬ ಬಗ್ಗೆ ಗಮನಿಸುವಂತೆ ಮಹಿಳೆಯ ಪೋಷಕರಿಗೆ ತಿಳಿಸಿತು.

"ಮದುವೆಯ ಕುರಿತಂತೆ ಆ ವ್ಯಕ್ತಿಯೊಂದಿಗೆ (ತಂದೆ) ಮಾತನಾಡಬಹುದೇ? ಆಕೆ ಆ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದಾಳೆ ಎಂದು ನೀವು ಹೇಳುತ್ತಿದ್ದೀರಿ. ಅದು ಅಪರಾಧವಲ್ಲ. ಅವಳಿಗೆ 27 ವರ್ಷ. ಅಕೆ ಆರಾಮವಾಗಿರಬೇಕು, ಭೀತಿಗೊಳಪಡಬಾರದು” ಎಂದು ನ್ಯಾಯಾಲಯ ಹೇಳಿತು.

ತನಗೆ ವಯಸ್ಸಾಗುತ್ತಿದೆ ಎಂಬ ಕಾರಣಕ್ಕೆ ಮಹಿಳೆಯ ತಂದೆ ಮಗುವಿನ ಪೋಷಣೆ ನಿರಾಕರಿಸುವಂತಿಲ್ಲ ಎಂದು ಕೂಡ ನ್ಯಾಯಾಲಯ ಇದೇ ವೇಳೆ ಎಚ್ಚರಿಕೆ ನೀಡಿತು. ಮಹಿಳೆಯ ಸಂಗಾತಿ  ಅವಳನ್ನು ಮದುವೆಯಾಗಲು ಸಿದ್ಧರಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಸಮಯಾವಕಾಶ ನೀಡಿದ ಪೀಠ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು.