ಸುದ್ದಿಗಳು

ವಿದೇಶದಲ್ಲಿ ಸ್ನಾತಕೋತ್ತರ ಕಾನೂನು ಪದವಿಗಾಗಿ ಸಾಲ ಮೈಮೇಲೆ ಎಳೆದುಕೊಳ್ಳದಿರಿ: ಸಿಜೆಐ ಬಿ ಆರ್ ಗವಾಯಿ ಸಲಹೆ

ಕಾನೂನು ಪ್ರಾಕ್ಟೀಸ್ ವೇಳೆ ವಕೀಲರು ಎದುರಿಸುವ ಭಾವನಾತ್ಮಕ ಬಳಲಿಕೆ ಮತ್ತು ದುಬಾರಿ ಹಣ ತೆತ್ತು ವಿದೇಶಗಳಿಂದ ಕಾನೂನು ಪದವಿ ಪಡೆಯುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಸಿಜೆಐ ಕಳವಳ ವ್ಯಕ್ತಪಡಿಸಿದರು.

Bar & Bench

ಹೈದರಾಬಾದ್‌ನಲ್ಲಿ ನಲ್ಸಾರ್‌ ಕಾನೂನು ವಿಶ್ವವಿದ್ಯಾಲಯ ಶುಕ್ರವಾರ ಆಯೋಜಿಸಿದ್ದ 22 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರು ಕಾನೂನು ವೃತ್ತಿಯ ಬಗ್ಗೆ ಗಮನಾರ್ಹ ಟೀಕೆ ಮಾಡಿದರು.

ಕಾನೂನು ಕ್ಷೇತ್ರದಲ್ಲಿನ ಅಸಮಾನತೆ, ವಕೀಲರು ಎದುರಿಸುತ್ತಿರುವ ಭಾವನಾತ್ಮಕ ಒತ್ತಡ ಮತ್ತು ದುಬಾರಿ ಹಣ ತೆತ್ತು ವಿದೇಶಗಳಿಂದ ಕಾನೂನು ಪದವಿ ಪಡೆಯುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಮಾನಸಿಕ ಒತ್ತಡ ವೃತ್ತಿಯ ಲಕ್ಷಣ ಎಂಬುದನ್ನು ಒಪ್ಪಿಕೊಂಡ ನ್ಯಾ. ಗವಾಯಿ ಅವರು ಕಾನೂನು ಎಂಬುದು ಭಾವನಾತ್ಮಕವಾಗಿ ಬೇಡಿಕೆ ಇಡುವಹಾಗೂ ಕೆಲ ಬಾರಿ ಭಾವನಾತ್ಮಕವಾಗಿ ಪ್ರತ್ಯೇಕಗೊಳಿಸುವ ಸಂಗತಿ ಎಂದು ಬಣ್ಣಿಸಿದರು.

ಕೆಲಸದ ಅವಧಿ ದೀರ್ಘವಾಗಿರುತ್ತದೆ. ನಿರೀಕ್ಷೆ ಇರಿಸಿಕೊಂಡವರು ಹೆಚ್ಚು. ಜೀವನ ವಿಧಾನ ನಿರ್ದಯವಾಗಿರುತ್ತದೆ. ನೀವು ಯಶಸ್ವಿಯಾಗುವುದಕ್ಕೆ ಮಾತ್ರವಲ್ಲ ಯಶಸ್ವಿಯಾಗಿದ್ದೇವೆ ಎಂದು ತೋರಿಸಿಕೊಳ್ಳುವುದಕ್ಕೆ ಒತ್ತಡ ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದರು.

 ಕಾನೂನು ಶಿಕ್ಷಣದಲ್ಲಿರುವ ಗ್ರಾಮೀಣ- ನಗರ ಎಂಬ ಅಸಮಾನತೆಯ ಬಗ್ಗೆ ಪ್ರಸ್ತಾಪಿಸಿದ ಅವರು ಕಾನೂನು ಸಮುದಾಯ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಅಂತೆಯೇ ವಿದೇಶಗಳಲ್ಲಿ ಕಾನೂನು ಪದವಿ ಪಡೆಯುವುದಕ್ಕಾಗಿ ವಿದ್ಯಾರ್ಥಿಗಳು ಪೋಷಕರನ್ನು ಆರ್ಥಿಕ ಹೊರೆಗೆ ಈಡು ಮಾಡಬಾರದು. ವಿದೇಶದಲ್ಲಿ ಪದವಿ ಪಡೆದ ಮಾತ್ರಕ್ಕೆ ಅದು ವಿದ್ಯಾರ್ಥಿಗಳ ಮೌಲ್ಯದ ಮುದ್ರೆಯಾಗದು. ಆಲೋಚನೆಯ ಫಲವಾಗಿಯೋ ಅಥವಾ ಗೆಳೆಯರ ಒತ್ತಡಕ್ಕೆ ಸಿಲುಕಿಯೋ ಇಂತಹ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.

ಬದಲಿಗೆ ಆ ಹಣದ  ಸಣ್ಣ ಭಾಗವನ್ನು ಸ್ವತಂತ್ರವಾಗಿ ಪ್ರಾಕ್ಟೀಸ್‌ ಆರಂಭಿಸಲು, ವಕೀಲರ ಚೇಂಬರ್‌ ರೂಪಿಸಿಕೊಳ್ಳಲು ಬಳಕೆ ಮಾಡಬಹುದು. ಆರ್ಥಿಕವಾಗಿ ಸ್ಥಿರವಾದ ಬಳಿಕ ವಿದೇಶದಲ್ಲಿ ಅಧ್ಯಯನ ಕೈಗೊಂಡರಾಯಿತು. ಕಲಿಯಲು ವಯಸ್ಸಿನ ಅಂತರ ಇರುವುದಿಲ್ಲ. ವಿದೇಶಕ್ಕೆ ತೆರಳಬೇಕಿರುವುದು ಇಲ್ಲಿಂದ ತಪ್ಪಿಸಿಕೊಳ್ಳಲು ಅಲ್ಲ ಬದಲಿಗೆ ನಮ್ಮನ್ನು ನಾವು ವಿಸ್ತರಿಸಿಕೊಳ್ಳಲು ಎಂದು ಅವರು ನುಡಿದರು.

ಎಲ್ಲಾ ಹಿರಿಯ ವಕೀಲರು ಮತ್ತು ನ್ಯಾಯಾಧೀಶರು ಯುವ ವಕೀಲರಿಗೆ ಮಾರ್ಗದರ್ಶನ ನೀಡಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದ ಅವರು ನೂತನ ಪದವಿಧರರು ತಮ್ಮ ಅಂತರಂಗದ ಮಾತುಗಳಿಗೆ ಕಿವಿಗೊಡಬೇಕು ಎಂದರು.

[ಭಾಷಣದ ಪೂರ್ಣ ಪಠ್ಯ]

NALSAR_Convocation_Speech_July_2025_docx.pdf
Preview