
ಆರೋಪಿಗಳನ್ನು ಜೈಲಿನಲ್ಲಿಡುವುದಕ್ಕಿಂತಲೂ ಅವರ ಜಾಮೀನಿಗೆ ಆದ್ಯತೆ ನೀಡಬೇಕು ಎಂಬ ತತ್ವವನ್ನು ನ್ಯಾಯಾಲಯಗಳು ಈಚಿನ ದಿನಗಳಲ್ಲಿ ಪಾಲಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಟೀಕಿಸಿದ್ದಾರೆ.
ಶಾರದಾ ಕೃಷ್ಣ ಸತ್ಗಮಯ ಫೌಂಡೇಶನ್ ಫಾರ್ ಲಾ ಅಂಡ್ ಜಸ್ಟೀಸ್ ಕೇರಳ ಹೈಕೋರ್ಟ್ನಲ್ಲಿ ಭಾನುವಾರ ಆಯೋಜಿಸಿದ್ದ ನ್ಯಾ. ವಿ ಆರ್ ಕೃಷ್ಣ ಅಯ್ಯರ್ ಸ್ಮಾರಕ ಕಾನೂನು ಉಪನ್ಯಾಸ ಕಾರ್ಯಕ್ರಮದಲ್ಲಿ ʼರಾಜ್ಯ ನೀತಿಯ ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನ ತತ್ವಗಳನ್ನು ಸಮತೋಲನಗೊಳಿಸುವಲ್ಲಿ ನ್ಯಾಯಮೂರ್ತಿ ವಿ ಆರ್ ಕೃಷ್ಣ ಅಯ್ಯರ್ ಅವರ ಪಾತ್ರ ' ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಪತ್ರಕರ್ತ ಪ್ರಬೀರ್ ಪುರಕಾಯಸ್ಥ, ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಬಿಆರ್‌ಎಸ್ ಪಕ್ಷದ ನಾಯಕಿ ಕೆ ಕವಿತಾ ಅವರ ಪ್ರಕರಣಗಳ ವಿಚಾರಣೆ ವೇಳೆ ತಾವು ಜಾಮೀನಿಗೆ ಆದ್ಯತೆ ತತ್ವವನ್ನು ಜಾರಿಗೊಳಿಸಲು ಯತ್ನಿಸಿದ್ದಾಗಿ ಅವರು ಹೇಳಿದರು.
ಚೀನಾ ಪರ ಪ್ರಚಾರಾಂದೋಲನ ನಡೆಸಿದ ಆರೋಪದಡಿ ಪುರಕಾಯಸ್ಥ ಅವರನ್ನು ದೆಹಲಿ ಪೊಲೀಸರು ಯುಎಪಿಎ ಕಾಯಿದೆಯಡಿ ಬಂಧಿಸಿದ್ದರು. ದೆಹಲಿ ಮದ್ಯಹಗರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಮತ್ತು ಕವಿತಾ ಅವರನ್ನು ಬಂಧಿಸಲಾಗಿತ್ತು.
ಮೂವರೂ ತಮ್ಮನ್ನು ಬಂಧಿಸಿದ ಕಾನೂನು ಬದ್ಧತೆಯನ್ನು ಪ್ರಶ್ನಿಸಿದ್ದರು. ನ್ಯಾ. ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್‌ನ ವಿವಿಧ ಪೀಠಗಳು ಪ್ರಕರಣದ ವಿಚಾರಣೆ ನಡೆಸಿದ್ದವು. ಪ್ರಕರಣದ ತನಿಖೆ ನಡೆಸಿದ ರೀತಿ ಹಾಗೂ ಬಂಧಿಸಲು ನಿರ್ಧಾರ ಕೈಗೊಂಡಿದ್ದಕ್ಕಾಗಿ ಈ ಪ್ರಕರಣಗಳ ತನಿಖೆ ನಡೆಸುತ್ತಿದ್ದ ತನಿಖಾ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು.
ವಿಚಾರಣೆಯಿಲ್ಲದೆ ವಿಚಾರಣಾಧೀನ ಕೈದಿಗಳನ್ನು ದೀರ್ಘಕಾಲದವರೆಗೆ ಜೈಲಿನಲ್ಲಿ ಇಡಬಾರದು ಎಂದು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಬಲವಾಗಿ ನಂಬಿದ್ದರು. ಈಚಿನ ದಿನಗಳಲ್ಲಿ ಅಯ್ಯರ್ ಅವರು ಹಾಕಿಕೊಟ್ಟಿದ್ದ ʼಜಾಮೀನಿಗೆ ಪ್ರಾಮುಖ್ಯತೆ ಜೈಲುಶಿಕ್ಷೆಗಿಲ್ಲ ಆದ್ಯತೆʼ ಎಂಬ ತತ್ವವನ್ನು ಕೊಂಚಮಟ್ಟಿಗೆ ಮರೆಯಲಾಗಿತ್ತು ಎಂದು ಅವರು ಹೇಳಿದರು.
ಪತ್ರಕರ್ತ ಪ್ರಬೀರ್ ಪುರಕಾಯಸ್ಥ, ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಬಿಆರ್‌ಎಸ್ ಪಕ್ಷದ ನಾಯಕಿ ಕೆ ಕವಿತಾ ಅವರ ಪ್ರಕರಣಗಳ ವಿಚಾರಣೆ ವೇಳೆ ಈ ತತ್ವವನ್ನು ಮತ್ತೆ ಜಾರಿಗೆ ತರುವ ಅವಕಾಶ ನನಗೆ ಸಿಕ್ಕಿತು ಎಂದು ಹೇಳಲು ಸಂತಸವಾಗುತ್ತಿದೆ ಎಂದು ಅವರು ತಿಳಿಸಿದರು.
ಕೇರಳ ಹೈಕೋರ್ಟ್‌ಮುಖ್ಯ ನ್ಯಾಯಮೂರ್ತಿ ನಿತಿನ್ ಎಂ ಜಾಮ್ದಾರ್ , ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಮತ್ತು ಮಾಜಿ ನ್ಯಾಯಮೂರ್ತಿ ಕೆ ಬಾಲಕೃಷ್ಣನ್ ನಾಯರ್ ಕೂಡ ಕಾರ್ಯಕ್ರಮದಲ್ಲಿ ಮಾತನಾಡಿದರು.