ಸುದ್ದಿಗಳು

ಬೆಟ್ಟಿಂಗ್‌ನಿಂದ ಗಳಿಸಿದ ಆಸ್ತಿಯನ್ನು ಇ ಡಿ ಮುಟ್ಟುಗೋಲು ಹಾಕಿಕೊಳ್ಳಬಹುದು: ದೆಹಲಿ ಹೈಕೋರ್ಟ್

ಅಂತಾರಾಷ್ಟ್ರೀಯ ಬೆಟ್ಟಿಂಗ್‌ನಲ್ಲಿ ಶಾಮೀಲಾದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಆದೇಶಗಳನ್ನು ನ್ಯಾಯಾಲಯ ಎತ್ತಿಹಿಡಿದಿದೆ.

Bar & Bench

ಕ್ರಿಕೆಟ್ ಬೆಟ್ಟಿಂಗ್ಅನ್ನು 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಅನುಸೂಚಿತ ಅಪರಾಧವೆಂದು ಮಾಡಿಲ್ಲವಾದರೂ, ಅಕ್ರಮ ಬೆಟ್ಟಿಂಗ್‌ನಿಂದ ಸಂಪಾದಿಸಿದ ಸಂಪತ್ತನ್ನು ಜಾರಿ ನಿರ್ದೇಶನಾಲಯ (ಇ ಡಿ) ಅಪರಾಧದ ಗಳಿಕೆ ಎಂದು ಪರಿಗಣಿಸಿ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂಬುದಾಗಿ ದೆಹಲಿ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ [ನರೇಶ್ ಬನ್ಸಾಲ್ ಮತ್ತಿತರರು ಹಾಗೂ ನ್ಯಾಯನಿರ್ಣಯ ಪ್ರಾಧಿಕಾರ ಇನ್ನಿತರರ ನಡುವಣ ಪ್ರಕರಣ].

ನಕಲಿ, ವಂಚನೆ ಮತ್ತು ಪಿತೂರಿಯಂತಹ ಕ್ರಿಮಿನಲ್ ಕೃತ್ಯಗಳನ್ನು ಬಳಸಿಕೊಂಡು ಬೆಟ್ಟಿಂಗ್‌ನಿಂದ ಗಳಿಸಿದ ಹಣವನ್ನು ಪಿಎಂಎಲ್‌ಎ ಸೆಕ್ಷನ್‌ 2(1)(ಯು) ಅಡಿ ಅಪರಾಧದ ಗಳಿಕೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್‌ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ವಿಭಾಗೀಯ ಪೀಠ  ತೀರ್ಪು ನೀಡಿದೆ.

ಒಬ್ಬ ವ್ಯಕ್ತಿ ಫೋರ್ಜರಿ, ವಂಚನೆ ಮತ್ತು ಕ್ರಿಮಿನಲ್ ಪಿತೂರಿಯ ಮೂಲಕ ಯಾವುದೇ ಸ್ಥಿರ ಆಸ್ತಿ ಸಂಪಾದಿಸಿದರೆ ಮತ್ತು ನಂತರ ಅಂತಹ ಆಸ್ತಿಯನ್ನುವರ್ಗೀಕೃತ ಅಪರಾಧವಲ್ಲದ  ರಿಯಲ್ ಎಸ್ಟೇಟ್ ವ್ಯವಹಾರದಂತಹ ಚಟುವಟಿಕೆಗೆ ಬಳಸಿದರೂ ಸಹ ಆ ವ್ಯವಹಾರದಿಂದ ಬರುವ ಆದಾಯ ಅಪರಾಧದ ಗಳಿಕೆ ಎನಿಸಿಕೊಳ್ಳುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

“ಆಸ್ತಿಗೆ ಅದರ ಆರಂಭಿಕ ಹಂತದಲ್ಲೇ ಅಂಟಿಕೊಂಡಿರುವ ‘ಕಳಂಕʼ ಅಂದರೆ ಅನುಸೂಚಿತ (ಶೆಡ್ಯೂಲ್ಡ್‌) ಅಪರಾಧದಿಂದ ಬಂದ ಹಣವನ್ನು ನಂತರದ ಬೇರೆಯದಕ್ಕೆ ಉಪಯೋಗಿಸಿದರೂ ಆ ಕಳಂಕ ಮುಂದುವರೆಯುತ್ತದೆ. ಸರಳವಾಗಿ ಹೇಳುವುದಾದರೆ ʼವಿಷಪೂರಿತ ಮರದ ಹಣ್ಣುʼ (ಹಣ್ಣು ಸಿಹಿಯಾಗಿದ್ದರೂ ಮರ ವಿಷಪೂರಿತ ಎಂಬರ್ಥದಲ್ಲಿ) ತತ್ವವಾಗಿದೆ. ಬೆಟ್ಟಿಂಗ್‌ ನಡೆಸುವುದು ವರ್ಗೀಕೃತ ಅಪರಾಧವಲ್ಲದಿದ್ದರೂ ಅದರಿಂದ ಗಳಿಸುವ ಲಾಭ ಕಳಂಕಿತ ಕೃತ್ಯಕ್ಕೆ ನೇರವಾಗಿ ಸಂಬಂಧಿಸಿದ್ದಾಗಿರುತ್ತದೆ. ಅದರಲ್ಲಿಯೂ ಈ ರೀತಿಯ ಲಾಭ ಹಿಂದಿನ ಅನೇಕ ಅಪರಾಧ ಕೃತ್ಯಗಳೊಂದಿಗೆ ಸಂಕೀರ್ಣವಾಗಿ ಹೆಣೆದುಕೊಂಡಿರುವಾಗ ಅದರಿಂದ ಬಂದ ಯಾವುದೇ ಲಾಭವನ್ನು ಪಿಎಂಎಲ್‌ಎ ಅಡಿ ಅಪರಾಧದ ಗಳಿಕೆ ಎಂದೇ ಪರಿಗಣಿಸಬೇಕಾಗುತ್ತದೆ” ಎಂದು ಅದು ವಿವರಿಸಿದೆ.

ಅಂತೆಯೇ ಪಿಎಂಎಲ್‌ಎ ಅಡಿ ಹೊರಡಿಸಲಾಗಿದ್ದ ಜಪ್ತಿ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಅದು ವಜಾಗೊಳಿಸಿತು.

ದೊಡ್ಡ ಪ್ರಮಾಣದ ಹವಾಲಾ ಕಾರ್ಯಾಚರಣೆಗಳು ಮತ್ತು ಇಂಗ್ಲೆಂಡ್‌ ಮೂಲದ ಜಾಲತಾಣ ಬೆಟ್‌ಫೇರ್‌ ಡಾಟ್‌ ಕಾಮ್‌ ಮೂಲಕ ವಡೋದರಾದ ಫಾರ್ಮ್‌ಹೌಸ್‌ನಿಂದ ನಡೆಸಲಾಗುತ್ತಿದ್ದ ಅಂತಾರಾಷ್ಟ್ರೀಯ ಬೆಟ್ಟಿಂಗ್ ಕಾರ್ಯಾಚರಣೆಯ ಕುರಿತು ಇ ಡಿ ತನಿಖೆ ನಡೆಸಿತ್ತು. ಅರ್ಜಿದಾರರು ಗ್ರಾಹಕರ ಮಾಹಿತಿ (ಕೆವೈಸಿ) ಇಲ್ಲದೇ ಡಿಜಿಟಲ್‌ ಪ್ರವೇಶ ಕೀಗಳನ್ನು (ಸೂಪರ್‌ ಮಾಸ್ಟರ್‌ ಕೀ ಐಡಿಗಳು) ಸೃಷ್ಟಿಸುತ್ತಿದ್ದರು. ಇದನ್ನು ಬಳಸಿಕೊಂಡು ಅನೇಕ ಬೆಟ್ಟಿಂಗ್‌ ಖಾತೆಗಳನ್ನು ತೆರೆಯಲಾಗುತ್ತಿತ್ತು.

ವಿದೇಶಕ್ಕೆ ಕಳುಹಿಸಲಾದಾ ಅಕ್ರಮ ಹಣವನ್ನು ಬಳಸಿ ಈ ಮಾಸ್ಟರ್‌ ಕೀಗಳನ್ನು ಖರೀದಿಸಲಾಗುತ್ತಿತ್ತು. ಈ ಹಣದಿಂದ ಭಾರತಾದ್ಯಂತ ಹಾಗೂ ದುಬೈ, ಪಾಕಿಸ್ತಾನ ಸೇರಿದಂತೆ ಹಲವೆಡೆ ಅಕ್ರಮ ಬೆಟ್ಟಿಂಗ್‌ ಕೇಂದ್ರಗಳನ್ನು ತೆರೆದು ಬೆಟ್ಟಿಂಗ್‌ ನಡೆಸಲಾಗುತ್ತಿತ್ತು. ಈ ಐಡಿಗಳ ಸಹಾಯದಿಂದ 2014 ಡಿಸೆಂಬರ್ ರಿಂದ 2015 ಮಾರ್ಚ್ ನಡುವೆ ಸುಮಾರು ₹2,400 ಕೋಟಿ ವಹಿವಾಟು ನಡೆದಿದೆ ಎಂದು ಇ ಡಿ ಆರೋಪಿಸಿ ಆರೋಪಿಗಳ ಆಸ್ತಿ ಜಪ್ತಿ ಮಾಡಿತ್ತು. ಇದನ್ನು ಆರೋಪಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಇದೀಗ ಇ ಡಿ ಆದೇಶ ಮಾನ್ಯ ಎಂದು ನ್ಯಾಯಾಲಯ ಹೇಳಿದೆ.  ಆರೋಪಿಗಳು ವಿತರಿಸಿದ ಸೂಪರ್‌ ಮಾಸ್ಟರ್‌ ಲಾಗಿನ್‌ ಐಡಿಗಳು ಪಿಎಂಎಲ್‌ಎ ಸೆಕ್ಷನ್‌ 2(1) (ವಿ) ಅಡಿ ʼಆಸ್ತಿʼಯ ವ್ಯಾಖ್ಯಾನದ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪಿಎಂಎಲ್‌ಎ ನ್ಯಾಯ ನಿರ್ಣಯ ಪ್ರಾಧಿಕಾರದ ಏಕಸದಸ್ಯ ಪೀಠ ನೀಡಿದ್ದ ಆದೇಶ ಮಾನ್ಯವಲ್ಲ ಎಂಬ ಆರೋಪಿಗಳ ವಾದವನ್ನೂ ಅದು ಬದಿಗೆ ಸರಿಸಿದೆ.ಕಾರ್ಯಕ್ಷಮತೆ ಮತ್ತು ಅನಾವಶ್ಯಕ ವಿಳಂಬ ತಪ್ಪಿಸಲು ಪಿಎಂಎಲ್‌ಎ ನಿಯಮಾವಳಿ ಏಕಸದಸ್ಯರ ಪ್ರಕ್ರಿಯೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಅದು ಸ್ಪಷ್ಟಪಡಿಸಿದೆ.