Sabarimala Temple  
ಸುದ್ದಿಗಳು

ಶಬರಿಮಲೆ ಚಿನ್ನ ಕಳ್ಳತನ: ಎಫ್ಐಆರ್, ಎಫ್ಐಎಸ್ ಪ್ರತಿ ನೀಡದ್ದನ್ನು ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಇ ಡಿ

ಪ್ರತಿ ನೀಡದೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪ್ರಕಟಿಸಿದ ತೀರ್ಪಿನಿಂದಾಗಿ ತನಿಖೆ ಆರಂಭಿಸುವುದಕ್ಕೆ ಅಡ್ಡಿ ಉಂಟಾಗಿದೆ ಎಂದು ದೂರಿದೆ ಇ ಡಿ.

Bar & Bench

ಶಬರಿಮಲೆ ದೇವಸ್ಥಾನದಲ್ಲಿ ದ್ವಾರಪಾಲಕ ಮೂರ್ತಿಗಳಿಗೆ ಹೊದಿಸಲಾದ ಚಿನ್ನ ಲೇಪಿತ ತಾಮ್ರದ ತಗಡುಗಳಿಂದ ಚಿನ್ನ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಎಫ್‌ಐಆರ್‌ ಮತ್ತು ಎಫ್‌ಐಎಸ್‌ (ಪ್ರಥಮ ಮಾಹಿತಿ ಹೇಳಿಕೆ) ನೀಡದೆ ಇರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ ಡಿ) ಕೇರಳ ಹೈಕೋರ್ಟ್‌ ಮೊರೆ ಹೋಗಿದೆ [ಜಾರಿ ನಿರ್ದೇಶನಾಲಯ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ]

ಪ್ರತಿ ನೀಡದೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪ್ರಕಟಿಸಿದ ತೀರ್ಪಿನಿಂದಾಗಿ ತನಿಖೆ ಆರಂಭಿಸುವುದಕ್ಕೆ ಅಡ್ಡಿ ಉಂಟಾಗಿದೆ ಎಂದು ಇ ಡಿ ದೂರಿದೆ.

ಪ್ರಕರಣದ ಪ್ರಧಾನ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿ ಮತ್ತಿತರರಿಂಧ ಗಂಭೀರ ಹಣಕಾಸು ಅಕ್ರಮ ಮತ್ತು ಚಿನ್ನ ದುರುಪಯೋಗ ನಡೆದಿದೆ. ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ಮಾಡಬೇಕಾದ ಅಗತ್ಯವನ್ನು ಈ ಆರೋಪಗಳು ಹೇಳುತ್ತಿವೆ ಎಂದು ಅದು ವಾದಿಸಿದೆ.

ಬಹು ಮೂಲಗಳಿಂದಲೂ ಮತ್ತು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ನೀಡಲಾದ ಮಧ್ಯಂತರ ಆದೇಶಗಳಿಂದಲೂ ದೇವಾಲಯದ ಅಧಿಕಾರಿಗಳು ಮತ್ತಿತರರು ಅಕ್ರಮ ಎಸಗಿದಾರೆ ಎಂಬುದಕ್ಕೆ ವಿಶ್ವಾಸಾರ್ಹ ಮಾಹಿತಿ ದೊರೆತಿದೆ.

ಇಂತಹ ಕೃತ್ಯಗಳು ಭಾರತೀಯ ದಂಡ ಸಂಹಿತೆ- 1860 ಮತ್ತು ಅವ್ಯವಹಾರ ನಿಯಂತ್ರಣ ಕಾಯಿದೆ- 1988ರ ಅಡಿ ಗಂಭೀರ ಅಪರಾಧಗಳಾಗುತ್ತವೆ. ಅಂತೆಯೇ ಕೃತ್ಯಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ 2002ರ ಅಡಿ ವರ್ಗೀಕೃತ ಅಪರಾಧಗಳಾಗಿವೆ ಎಂದು ಅದು ಹೇಳಿದೆ.

ಪ್ರಕರಣ ಸೂಕ್ಷ್ಮವಾಗಿದ್ದು ಹೈಕೋರ್ಟ್‌ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವದರಿಂದ ರಾಣ್ನಿಯ ಜೆಎಂಎಫ್‌ಸಿ ನ್ಯಾಯಾಲಯ ಎಫ್‌ಐರ್‌ ಮತ್ತು ಎಫ್‌ಐಎಸ್‌ ಪ್ರತಿ ನೀಡಲು ನಿರಾಕರಿಸುತ್ತಿದೆ. ಆದರೆ ಅದು ಹೈಕೋರ್ಟ್‌ ಆದೇಶಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು ಇ ಡಿ ತನಿಖೆ ಮಾಡಬಾರದು ಎಂದು ಹೈಕೋರ್ಟ್‌ ಎಲ್ಲಿಯೂ ಹೇಳಿಲ್ಲ. ಈ ಕೃತ್ಯಗಳು ಪಿಎಂಎಲ್‌ಎ ಕಾಯಿದೆಯಡಿ ಬರುವ ವರ್ಗೀಕೃತ ಅಪರಾಧಗಳಾಗಿದ್ದು ಅಪರಾಧದ ತನಿಖೆಗಾಗಿ ಎಫ್‌ಐಆರ್‌ ಮತ್ತು ಎಫ್‌ಐಎಸ್‌‌ ಅಗತ್ಯವಿದೆ ಎಂದು ಅದು ಮನವಿ ಮಾಡಿದೆ.

 ದ್ವಾರಪಾಲಕ ವಿಗ್ರಹಗಳ ಚಿನ್ನ ಲೇಪಿತ ತಾಮ್ರದ ತಗಡುಗಳನ್ನು ನ್ಯಾಯಾಲಯ ಅಥವಾ ಶಬರಿಮಲೆಯ ವಿಶೇಷ ಆಯುಕ್ತರಿಗೆ ತಿಳಿಸದೆಯೇ ದುರಸ್ತಿಗಾಗಿ ಕಳುಹಿಸಲಾಗಿತ್ತು. ಆಗ ಸ್ವಲ್ಪ ಪ್ರಮಾಣದ ಚಿನ್ನ ಕಳೆದುಹೋಗಿದೆ ಎಂಬ ಕಳವಳ ವ್ಯಕ್ತವಾಗಿತ್ತು. ಮೂರ್ತಿಯ ಹೊದಿಕೆಗಳನ್ನು ತೆಗೆದಿದಿದ್ದ ಟಿಡಿಬಿ, ಉನ್ನಿಕೃಷ್ಣನ್ ಪೊಟ್ಟಿ ಎಂಬ ಭಕ್ತರ ಪ್ರಾಯೋಜಕತ್ವದಡಿಯಲ್ಲಿ ದುರಸ್ತಿ ಕಾರ್ಯವನ್ನು ಚೆನ್ನೈ ಮೂಲದ 'ಸ್ಮಾರ್ಟ್ ಕ್ರಿಯೇಷನ್ಸ್' ಎಂಬ ಸಂಸ್ಥೆಗೆ ವಹಿಸಿತ್ತು. ಉನ್ನಿಕೃಷ್ಣನ್ ಪೊಟ್ಟಿಯವರ ಸಹೋದರಿ ಮಿನಿಯವರ ಮನೆಯಲ್ಲಿ ಕೆಲವು ಚಿನ್ನ ಲೇಪಿತ ತಗಡುಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿತ್ತು. 

 ವರದಿಯಲ್ಲಿ ಇದ್ದು , ಶೋಧದ ಸಮಯದಲ್ಲಿ ಜಾಗೃತ ದಳ ಅವುಗಳನ್ನು ವಶಪಡಿಸಿಕೊಂಡಿರುವುದು ತಿಳಿದುಬಂದಿದೆ. ಪೊಟ್ಟಿ ಅವರಿಗೆ ಔಪಚಾರಿಕವಾಗಿ ಅಂತಹ ವಸ್ತುಗಳನ್ನು ನೀಡಲಾಗಿತ್ತು ಎಂಬ ದಾಖಲೆ ಟಿಡಿಬಿ ಬಳಿ ಇಲ್ಲದಿರಿವುದರಿಂದ ಈ ವಿಚಾರ ಕಳವಳಕಾರಿ ಎಂದು ನ್ಯಾಯಾಲಯ ಹಿಂದಿನ ವಿಚಾರಣೆ ವೇಳೆ ಹೇಳಿತ್ತು.