ಸುದ್ದಿಗಳು

ಐ-ಪ್ಯಾಕ್‌ ಪ್ರಕರಣ: ಮಮತಾ ಬ್ಯಾನರ್ಜಿ ವಿರುದ್ಧ ಸಿಬಿಐ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಇ ಡಿ ಮೊರೆ

ನ್ಯಾಯಾಲಯ ಕಲಾಪದ ವೇಳೆ ಗಲಾಟೆಯ ವಾತಾವರಣ ಉಂಟಾದ ಕಾರಣ ಜನವರಿ 9ರಂದು ಕಲ್ಕತ್ತಾ ಹೈಕೋರ್ಟ್ ವಿಚಾರಣೆ ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಸಲಹಾ ಸಂಸ್ಥೆ ಇಂಡಿಯನ್ ಪ್ಯಾಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (ಐ-ಪ್ಯಾಕ್‌) ಆವರಣ ಮತ್ತು ಅದರ ಸಹ-ಸಂಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸದಲ್ಲಿ ತಾನು ನಡೆಸುತ್ತಿದ್ದ ಶೋಧ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಜಾರಿ ನಿರ್ದೇಶನಾಲಯ (ಇ ಡಿ ) ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಪ್ರಕರಣದ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ನ್ಯಾಯಾಲಯ ಕಲಾಪದ ವೇಳೆ ಗಲಾಟೆಯ ವಾತಾವರಣ ಉಂಟಾದ ಕಾರಣ ಜನವರಿ 9ರಂದು ಕಲ್ಕತ್ತಾ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ.

ಐ- ಪ್ಯಾಕ್‌ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಅಡ್ಡಿಪಡಿಸದಂತೆ ತಡೆ ನೀಡಬೇಕು ಜೊತೆಗೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಇ ಡಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಐ- ಪ್ಯಾಕ್‌ ಸಂಬಂಧಿತ ಸ್ಥಳಗಳಲ್ಲಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ. ಇದರಿಂದಾಗಿ ತನಿಖೆಗೆ ಸಂಬಂಧಿಸಿದ ಪ್ರಮುಖ ಭೌತಿಕ ಮತ್ತು ಎಲೆಕ್ಟ್ರಾನಿಕ್ ದಾಖಲೆಗಳನ್ನು ಕೊಂಡೊಯ್ಯಲಾಗಿದ್ದು ತಾನು ಕಾನೂನಿನ ಪ್ರಕಾರ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಇ ಡಿ ಹೇಳಿದೆ.

ಶೋಧ ನಡೆಸುತ್ತಿದ್ದ ಸ್ಥಳವನ್ನು ಮಮತಾ ಅವರು ಅತಿಕ್ರಮಿಸಿದ ರೀತಿ ಕಾನೂನುಬದ್ಧ ತನಿಖೆಯನ್ನು ಸಂಪೂರ್ಣ ಹಳಿತಪ್ಪಿಸಿದಂತಾಗಿದೆ. ಶಾಸನಬದ್ಧ ಅಧಿಕಾರದಡಿ ಶೋಧ ನಡೆಸುತ್ತಿದ್ದ ಕಾರ್ಯಾಚರಣೆಯಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸಿದ್ದರಿಂದ ಘರ್ಷಣೆ ಉಂಟಾಯಿತು ಎಂದು ಇ ಡಿ ದೂರಿದೆ.

ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್‌  ಹಿಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದೊಂದಿಗೆ ಕೆಲಸ ಮಾಡಿದ್ದು, 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಾಗೂ ನಂತರದ ಚುನಾವಣೆಗಳಲ್ಲಿ ಪಕ್ಷದ ಚುನಾವಣಾ ತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ ಈ ಹಿಂದೆ ಇದರ ಸಂಸ್ಥಾಪಕ ಮಾರ್ಗದರ್ಶಿಯಾಗಿದ್ದರು. ಜನ್‌ ಸೂರಜ್‌ ಪಕ್ಷ ಸ್ಥಾಪನೆ ಬಳಿಕ ಅವರು ಸಂಸ್ಥೆಯಿಂದ ದೂರವಾಗಿದ್ದಾರೆ.

ಶೋಧ ಸ್ಥಳಗಳಲ್ಲಿ ತಮ್ಮ ಹಾಜರಾತಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದು, ಇ ಡಿ ಕೈಗೊಂಡ ಕ್ರಮ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ. ಆದರೆ ಕೇಂದ್ರ ಸಂಸ್ಥೆ ಈ ಆರೋಪವನ್ನು ತಳ್ಳಿ ಹಾಕಿದೆ.

ಪ್ರಕರಣಕ್ಕೆ ಸಂಬಂಧಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಇ ಡಿ ಹಾಗೂ ಟಿಎಂಸಿ ನಡುವೆ ಪರಸ್ಪರರ ವಿರುದ್ಧ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದವು. ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡುವಂತೆ ಹಾಗೂ ಐ-ಪಿಎಸಿಗೆ ಸಂಬಂಧಿಸಿದ ಸ್ಥಳಗಳಿಂದ ಒಯ್ದಿದ್ದಾರೆ ಎನ್ನಲಾದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಹಿಂತಿರುಗಿಸುವಂತೆ ಕೋರಿ ಇ ಡಿ ಅರ್ಜಿ ಸಲ್ಲಿಸಿದ್ದರೆ ಮತ್ತೊಂದೆಡೆ ತನಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಇ ಡಿ ಸೋರಿಕೆ ಮಾಡದಂತೆ ತಡೆ ನೀಡಬೇಕು ಎಂದು ಟಿಎಂಸಿ ಕೋರಿತ್ತು.

ಆದರೆ ಜನವರಿ 9ರಂದು ನ್ಯಾಯಾಲಯದ ಒಳಗೆ ಉಂಟಾದ ಜನಸಂದಣಿಯಿಂದಾಗಿ ಉಂಟಾದ ಗದ್ದಲದ ಕಾರಣದಿಂದ ಹೈಕೋರ್ಟ್‌ನ ವಿಭಾಗೀಯ ಪೀಠ ಪ್ರಕರಣದ ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿತ್ತು.

ಈ ಎಲ್ಲಾ ಬೆಳವಣಿಗೆಗಳ ನಡುವೆ, ಪಶ್ಚಿಮ ಬಂಗಾಳ  ಸರ್ಕಾರ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ್ದು, ರಾಜ್ಯ ಸರ್ಕಾರಕ್ಕೆ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನೀಡದೆ ಯಾವುದೇ ಆದೇಶ ಹೊರಡಿಸಬಾರದು ಎಂದು ಕೋರಿದೆ.