ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ವಿಚಾರಣಾ ನ್ಯಾಯಾಲಯ ಜೂನ್ 2024ರಲ್ಲಿ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ತಾನು ಕೆಲ ತಿಂಗಳುಗಳ ಹಿಂದೆ ಸಲ್ಲಿಸಿದ್ದ ಮನವಿ ಹಿಂಪಡೆಯಲು ಜಾರಿ ನಿರ್ದೇಶನಾಲಯ ನಿರಾಕರಿಸಿದ್ದಕ್ಕೆ ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಕರಣದಲ್ಲಿ ವಾದ ಮಂಡಿಸಬೇಕಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅಲಭ್ಯತೆ ಉಲ್ಲೇಖಿಸಿ ಪ್ರಕರಣ ಮುಂದೂಡುವಂತೆ ಇ ಡಿ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರನ್ನು ಕೋರಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್ ಚೌಧರಿ ದೆಹಲಿ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿರುವಂತೆ ಪ್ರಕರಣ ಬಾಕಿ ಇರುವಂತೆ ನೋಡಿಕೊಳ್ಳುವುದಕ್ಕಾಗಿ ಇ ಡಿ ಪ್ರಕರಣ ಮುಂದೂಡುವಂತೆ ಕೋರಿದೆ. ಪ್ರಕರಣವನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸುವುದು ಇದರ ಹಿಂದಿನ ಉದ್ದೇಶ ಎಂದರು.
"ಪ್ರಕರಣ ಮುಂದೂಡುವಂತೆ ಇ ಡಿ ಕೋರಿರುವುದು ಇದು ಏಳನೇ ಬಾರಿ. ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ. ಈ ತೂಗುಕತ್ತಿಯನ್ನು ಏಕೆ ಹಾಗೆಯೇ ಉಳಿಸಲಾಗಿದೆ? ಹೀಗೆ ಪ್ರಕರಣವನ್ನು ಬಾಕಿ ಉಳಿಸುವಂತಿಲ್ಲ. ಉಳಿದ ಆರೋಪಿಗಳ ವಿರುದ್ಧ ಅರ್ಜಿ ಹಿಂಪಡೆಯುವ ಇ ಡಿ ಈ ಪ್ರಕರಣದಲ್ಲಿ ಏಕೆ ಹಾಗೆ ಮಾಡುತ್ತಿಲ್ಲ? ಇದು ಚುನಾವಣಾ ತಂತ್ರ. ಇದಕ್ಕಿಂತ ಹೆಚ್ಚಿನದನ್ನು ಹೇಳಲಾರೆ" ಎಂದರು.
ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿಯಾಗಿರುವ ಎಲ್ಲಾ ಹದಿನೈದು ಆರೋಪಿಗಳಿಗೆ ಜಾಮೀನು ನೀಡಲಾಗಿದೆ, ಇದನ್ನು ಬಾಕಿ ಇಡುವುದೇಕೆ? ಅವರು ಅದನ್ನು ಲೆಕ್ಕಾಚಾರವಾಗಿ ಹಿಂಪಡೆಯಬೇಕು ಎಂದು ಚೌಧರಿ ತಾಕೀತು ಮಾಡಿದರು.
ಆದರೆ ಪ್ರಕರಣದ ಸಹ ಆರೋಪಿ ಅಭಿಷೇಕ್ ಬೋಯಿನಪಲ್ಲಿ ಪ್ರಕರಣ ಹಿಂಪಡೆಯಲಾಗಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಆಗ ಚೌಧರಿ ಅವರು “ಬೋಯಿನಪಲ್ಲಿ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಎಂದು ದಾಖಲಿಸಲಾಗಿದೆ. ಕೆ.ಕವಿತಾ ಅವರ ಪ್ರಕರಣದಲ್ಲಿ ಇ ಡಿ ಅರ್ಹತೆಯ ಮೇಲೆ ವಾದ ಮಾಡುವುದಿಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್ ಮೆಚ್ಚುಗೆ ಗಳಿಸಿತ್ತು ”ಎಂದು ಚೌಧರಿ ಉತ್ತರಿಸಿದರು.
ಸಂಕ್ಷಿಪ್ತವಾಗಿ ವಾದ ಆಲಿಸಿದ ನ್ಯಾ. ಮಹಾಜಾನ್ ಪ್ರಕರಣವನ್ನು ಮುಂದೂಡುವ ಇ ಡಿ ಮನವಿಯನ್ನು ಪುರಸ್ಕರಿಸಿ ಮಾರ್ಚ್ 17ಕ್ಕೆ ಪ್ರಕರಣ ಮುಂದೂಡಿದರು.